ಗೋವಾ 2022ರ ವಿಧಾನಸಭೆ ಚುನಾವಣೆ(Goa Assembly Election 2022)ಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಯಿಟ್ಟುಕೊಂಡು ಆ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಗೋವಾ ಫಾರ್ವರ್ಡ್ ಪಾರ್ಟಿ (Goa Forward Party) ಅಧ್ಯಕ್ ವಿಜಯ್ ಸರ್ದೇಸಾಯಿ ಅವರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯನ್ನು ಸೋಲಿಸಲು ನಮ್ಮ ಪಕ್ಷದೊಂದಿಗೆ ಕೈಜೋಡಿಸಿ ಎಂದು ನೇರವಾಗಿಯೇ ಆಮಂತ್ರಣ ನೀಡಿದ್ದಾರೆ. ಹಾಗೇ, ರಾಜ್ಯದ ಚುನಾವಣೆಯಲ್ಲಿ ಮತಗಳು ಒಡೆದು ಹೋಗುವುದು ನನಗೆ ಇಷ್ಟವಿಲ್ಲ ಎಂದೂ ಅವರು ತಿಳಿಸಿದ್ದಾರೆ.
ವಿಜಯ್ ಸರ್ದೇಸಾಯ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಬಿಜೆಪಿಯನ್ನು ಸೋಲಿಸಲು ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂಬ ವಿಷಯದ ಬಗ್ಗೆ ಅವರೊಂದಿಗೆ ಮಾತನಾಡಿದ್ದೇನೆ. ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು. ನಮಗೆ ಚುನಾವಣೆಯಲ್ಲಿ ಮತಗಳನ್ನು ಒಡೆಯಲು ಇಷ್ಟವಿಲ್ಲ. ಹೀಗಾಗಿ ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳೆಲ್ಲ ಒಟ್ಟಾಗಬೇಕು ಎಂಬುದು ನನ್ನ ಬಯಕೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬೆಲೆ ಏರಿಕೆ ಸಂಬಂಧಪಟ್ಟಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಎಲ್ಪಿಜಿ ಸಿಲೆಂಡರ್, ಡೀಸೆಲ್, ಪೆಟ್ರೋಲ್ ಬೆಲೆಗಳಲ್ಲಿ ಏರಿಕೆಯುಂಟಾಗಿದೆ. ಜಿಎಸ್ಟಿಯಿಂದ ಉದ್ಯಮ ಕ್ಷೇತ್ರದ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿದೆ. ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಬಿಜೆಪಿ ಈ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ..ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರೇನೋ ತಾವು ಅಚ್ಛೆ ದಿನ್ ತರುವುದಾಗಿ ಹೇಳುತ್ತಿದ್ದಾರೆ. ಆದರೆ ಇಡೀ ದೇಶವನ್ನು ವಿನಾಶಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇನ್ನು ಗೋವಾ ಫಾರ್ವರ್ಡ್ ಪಾರ್ಟಿ ಒಂದು ಕಾಲದಲ್ಲಿ ಬಿಜೆಪಿ ಮೈತ್ರಿ ಪಕ್ಷವೇ ಆಗಿತ್ತು. ಆದರೆ ಈಗಲ್ಲ. ಟಿಎಂಸಿ ನಾಯಕಿಯನ್ನು ಭೇಟಿಯಾಗುವುದಕ್ಕೂ ಮೊದಲು ಮಾತನಾಡಿದ ಸರ್ದೇಸಾಯ್, ಬಿಜೆಪಿಯ ಕೋಮು ಆಡಳಿತ ಮತ್ತು ಭ್ರಷ್ಟಾಚಾರವನ್ನು ಕೊನೆಗಾಣಿಸಲು ಪ್ರತಿಪಕ್ಷಗಳ ಒಗ್ಗಟ್ಟು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ. ಹಾಗೇ, 2022ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂಟ್ವೀಟ್ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಪ್ರಾದೇಶಿಕ ಪಕ್ಷವೊಂದನ್ನು ಅದ್ಭುತವಾಗಿ ಕಟ್ಟಿ ಬೆಳೆಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ. ನಮ್ಮ ಗೋವಾ ಫಾರ್ವರ್ಡ್ ಪಾರ್ಟಿ ಕೂಡ ಒಂದು ಪ್ರಾದೇಶಿಕ ಪಕ್ಷ. ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಬೇಕು ಎಂಬ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ ಎಂದೂ ಹೇಳಿದ್ದರು.
ಮಮತಾ ಬ್ಯಾನರ್ಜಿ ಶುಕ್ರವಾರ ಪಣಜಿಯಲ್ಲಿ ಮಾತನಾಡಿ, ನಾನು ಗೋವಾಕ್ಕೆ ಬಂದಿರುವುದು ಇಲ್ಲಿನ ಅಧಿಕಾರ ಹಿಡಿಯಲು ಅಲ್ಲ. ಗೋವಾದ ಮುಖ್ಯಮಂತ್ರಿಯಾಗಲೂ ಅಲ್ಲ. ಇಲ್ಲಿ ಬಿಜೆಪಿ ಸರ್ಕಾರ ಗೂಂಡಾಗಿರಿ ನಡೆಸಲು ನಾನು ಬಿಡುವುದಿಲ್ಲ. ಇಲ್ಲಿನ ಜನರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಹೇಳಿದ್ದರು. ಹಾಗೇ, ನಿನ್ನೆ ಟೆನ್ನಿಸ್ ಮಾಜಿ ಆಟಗಾರ ಲಿಯಾಂಡರ್ ಪೇಸ್, ನಟಿ ನಫಿಸಾ ಅಲಿ ಮತ್ತು ಉದ್ಯಮಿ ಮೃಣಾಲಿನಿ ದೇಶಪ್ರಭು ದೀದಿ ನೇತೃತ್ವದಲ್ಲಿ ಟಿಎಂಸಿಗೆ ಸೇರ್ಪಡೆಯಾದರು.
ಇದನ್ನೂ ಓದಿ: ಭಾನುವಾರ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ; ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ