ನಾನಿನ್ನೂ ನೋವು ಅನುಭವಿಸುತ್ತಿದ್ದೇನೆ, ಆದರೆ ಜನರ ನೋವು ಇನ್ನೂ ದೊಡ್ಡದು ಎನಿಸುತ್ತಿದೆ: ಮಮತಾ ಬ್ಯಾನರ್ಜಿ
ಮಾರ್ಚ್ 10ರಂದು ನಂದಿಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದರು. ಕೊಲ್ಕತ್ತಾದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಮಾರ್ಚ್ 12ರಂದು ಡಿಸ್ಚಾರ್ಜ್ ಆಗಿದ್ದರು.
ಕೊಲ್ಕತ್ತಾ: ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ಭಾನುವಾರ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡರು. ಮಾರ್ಚ್ 10ರಂದು ಗಾಯಗೊಂಡ ನಂತರ ಅವರು ಪ್ರಚಾರ ಸಭೆಗಳಿಂದ ದೂರವೇ ಉಳಿದಿದ್ದರು. ಭಾನುವಾರ ಕೋಲ್ಕತ್ತಾದಲ್ಲಿ ನಡೆದ ರೋಡ್ಶೋದಲ್ಲಿ ಗಾಲಿಕುರ್ಚಿಯಲ್ಲಿ ಅವರು ವೇದಿಕೆಗೆ ಆಗಮಿಸಿದರು. ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈ ಸಂದರ್ಭ ಮಮತಾ ಅವರೊಂದಿಗೆ ಇದ್ದರು. ನೆರೆದಿದ್ದ ಜನಸ್ತೋಮಕ್ಕೆ ಕೈಬೀಸಿ ಮಮತಾ ಅಭಿನಂದಿಸಿದರು. ಮಮತಾ ಸುತ್ತಮುತ್ತಲು ನಿಂತಿದ್ದ ಅಂಗರಕ್ಷಕರೇ ಅವರ ಗಾಲಿಕುರ್ಚಿಯನ್ನೂ ಮುಂದಕ್ಕೆ ತಳ್ಳುತ್ತಾ ವೇದಿಕೆಗೆ ಕರೆ ತಂದರು.
ಕೊಲ್ಕತ್ತಾದ ಮೆಯೋ ರಸ್ತೆಯಿಂದ ಹಜ್ರಾ ಮೊರೆವರೆಗೆ ಆಯೋಜಿಸಿದ್ದ ಐದು ಕಿಮೀ ಅಂತರದ ರೋಡ್ ಶೋದಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು. 2007ರಲ್ಲಿ ನಂದಿಗ್ರಾಮದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ 14 ಗ್ರಾಮಸ್ಥರ ಗೌರವಾರ್ಥ ಈ ರೋಡ್ ಶೋ ಸಂಘಟಿಸಲಾಗಿತ್ತು. ‘ನಾನು ಇನ್ನೂ ನೋವು ಅನುಭವಿಸುತ್ತಿದ್ದೇನೆ. ನನ್ನ ಜನರ ನೋವು ನನಗೆ ಇನ್ನೂ ದೊಡ್ಡದು ಎನಿಸುತ್ತದೆ’ ಎಂದು ಬ್ಯಾನರ್ಜಿ ರೋಡ್ ಶೋಗೂ ಮೊದಲು ಟ್ವೀಟ್ ಮಾಡಿದ್ದರು.
ಮಾರ್ಚ್ 10ರಂದು ನಂದಿಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದರು. ಕೊಲ್ಕತ್ತಾದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಮಾರ್ಚ್ 12ರಂದು ಡಿಸ್ಚಾರ್ಜ್ ಆಗಿದ್ದರು.
We will continue to fight boldly!
I’m still in a lot of pain, but I feel the pain of my people even more.
In this fight to protect our revered land, we have suffered a lot and will suffer more but we will NEVER bow down to COWARDICE!
— Mamata Banerjee (@MamataOfficial) March 14, 2021
ನನ್ನ ಮೇಲೆ ನಾಲ್ಕೈದು ಜನರಿದ್ದ ಗುಂಪೊಂದು ದಾಳಿ ಮಾಡಿತ್ತು ಎಂದು ಮಮತಾ ಮೊದಲು ಹೇಳಿದ್ದರು. ಕೊಲ್ಕತ್ತಾದ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ವಿಡಿಯೊ ಮೆಸೇಜ್ನಲ್ಲಿ ನನ್ನ ಸುತ್ತಲೂ ಇದ್ದ ಗುಂಪು ನೂಕಾಟ ತಳ್ಳಾಟ ನಡೆಸಿತು ಎಂದು ಹೇಳಿದ್ದರು. ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ನೀಡಿದ್ದ ತೃಣಮೂಲ ಕಾಂಗ್ರೆಸ್, ಮಮತಾ ಬ್ಯಾನರ್ಜಿ ಗಾಯಗೊಳ್ಳಲು ಸಂಚುಕೋರರ ಹುನ್ನಾರವೇ ಕಾರಣ ಎಂದು ಹೇಳಿತ್ತು. ಮಮತಾ ಕಾರಿನ ಬಾಗಿಲನ್ನು ಉದ್ದೇಶಪೂರ್ವಕವಾಗಿ ತಳ್ಳಲಾಯಿತೇ ಅಥವಾ ಅದೊಂದು ಅಚಾನಕ್ ಆಗಿ ಆದ ಘಟನೆಯೇ ಎಂಬ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ವ್ಯಾಪಕ ಚರ್ಚೆ, ಆರೋಪ-ಪ್ರತ್ಯಾರೋಪಗಳು ನಡೆದಿದ್ದವು.
ಚುನಾವಣೆಗೂ ಮುನ್ನ ಸಾರ್ವಜನಿಕ ಅನುಕಂಪ ಗಿಟ್ಟಿಸಿಕೊಳ್ಳಲು ಮಮತಾ ಇಂಥ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಘಟನೆಯ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಬೇಕು. ಅಂದು ಏನು ನಡೆಯಿತು ಎಂಬುದನ್ನು ಸ್ಪಷ್ಟಪಡಿಸಲು ವಿಡಿಯೊ ಫೂಟೇಜ್ ಬಿಡುಗಡೆ ಮಾಡಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಆಗ್ರಹಿಸಿತ್ತು.
ಪಶ್ಚಿಮ ಬಂಗಾಳ ಸರ್ಕಾರದ ಗಮನಕ್ಕೆ ತಾರದಂತೆ ಚುನಾವಣಾ ಆಯೋಗವು ಪೊಲೀಸ್ ಇಲಾಖೆ ಮುಖ್ಯಸ್ಥರನ್ನು ಬದಲಿಸಿದ ಕೇವಲ 24 ಗಂಟೆಯ ಒಳೆ ಇಂಥದ್ದೊಂದು ಪ್ರಕರಣ ನಡೆದಿದೆ. ಪದಚ್ಯುತ ಪೊಲೀಸ್ ಅಧಿಕಾರಿಯ ಮೇಲೆ ಬಿಜೆಪಿ ಮಾಡಿದ್ದ ಆರೋಪಗಳಿಗೂ, ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಗೂ ಸಂಬಂಧವಿದೆ ಎಂದು ಟಿಎಂಸಿ ದೂರಿತ್ತು. ನಂದಿಗ್ರಾಮದಲ್ಲಿ ಮಮತಾ ಗಾಯಗೊಂಡ ಘಟನೆ ಒಂದು ಆಕಸ್ಮಿಕ ಎಂದು ಹೇಳಿದ್ದ ಚುನಾವಣಾ ಆಯೋಗವು, ಇದರಲ್ಲಿ ಯಾವುದೇ ಸಂಚು, ಕೈವಾಡ ಅಥವಾ ದಾಳಿ ನಡೆದ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿತ್ತು.
ಮೂಳೆಗಳಿಗೆ ಗಂಭೀರ ಗಾಯಗಳಾಗಿವೆ. ಎಡಗಾಲಿನ ಪಾದ ಮತ್ತು ಹಿಮ್ಮಡಿಗಳಲ್ಲಿ ಹಾಗೂ ತೋಳು, ಕುತ್ತಿಗೆ ಮತ್ತು ಮುಂಗೈಗಳಲ್ಲಿ ಗಾಯಗಳು ಕಂಡು ಬಂದಿವೆ ಎಂದು ಆಸ್ಪತ್ರೆಯ ಪತ್ರಿಕಾ ಹೇಳಿಕೆ ತಿಳಿಸಿತ್ತು. ಕಳೆದ ಶುಕ್ರವಾರ ಮಮತಾ ಅವರನ್ನು ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಟ್ಟು 8 ಹಂತದಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
Published On - 4:41 pm, Sun, 14 March 21