ಮಹುವಾ ಮೊಯಿತ್ರಾ ಮಾಡಿದ ಈ ಒಂದು ತಪ್ಪಿನಿಂದ ಎಂಪಿ ಸ್ಥಾನದ ಬಗ್ಗೆಯೇ ಹುಟ್ಟಿತು ಸಂದೇಹ, ಏನದು?

|

Updated on: Oct 23, 2023 | 7:47 PM

Mahua Moitra: ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಸಂಸದರಾದ ನಂತರ ಅವರು ಸರ್ಕಾರಕ್ಕೆ ಹೆಚ್ಚು ಕಡಿಮೆ 60-65 ಪ್ರಶ್ನೆಗಳನ್ನು ಕೇಳಿದ್ದಾರೆ. ಅಚ್ಚರಿಯ ವಿಷಯವೆಂದರೆ ಇದರಲ್ಲಿ 50 ಪ್ರಶ್ನೆಗಳು ಗೌತಮ್ ಅದಾನಿ, ಅವರ ವ್ಯವಹಾರ, ಸರ್ಕಾರದೊಂದಿಗಿನ ಒಪ್ಪಂದದ ಬಗ್ಗೆ ಮಾತ್ರ ಆಗಿತ್ತು. ಮಹುವಾ ಮೊಯಿತ್ರಾ ಅವರನ್ನು 'ಆಪ್ತ ಸ್ನೇಹಿತೆ' ಎಂದು ಕರೆದುಕೊಳ್ಳುವ ದರ್ಶನ್ ಹಿರಾನಂದಾನಿ, ಇದು ಪ್ರಸಿದ್ಧರಾಗಲು ಅವರ ತಂತ್ರವಾಗಿತ್ತು ಎಂದು ಹೇಳುತ್ತಾರೆ.

ಮಹುವಾ ಮೊಯಿತ್ರಾ ಮಾಡಿದ ಈ ಒಂದು ತಪ್ಪಿನಿಂದ ಎಂಪಿ ಸ್ಥಾನದ ಬಗ್ಗೆಯೇ ಹುಟ್ಟಿತು ಸಂದೇಹ, ಏನದು?
ಮಹುವಾ ಮೊಯಿತ್ರಾ
Follow us on

ದೆಹಲಿ ಅಕ್ಟೋಬರ್ 23: ತೃಣಮೂಲ ಕಾಂಗ್ರೆಸ್‌ನ (TMC) ವಾಕ್ ಚತುರೆ ಸಂಸದರೆಂದು ಪರಿಗಣಿಸಲ್ಪಟ್ಟಿರುವ ಮಹುವಾ ಮೊಯಿತ್ರಾ (Mahua Moitra) ಅವರು ಭಾರೀ ಸುದ್ದಿಯಲ್ಲಿದ್ದಾರೆ. ಅವರ ಮಾತಿನ ಹಿಂದೆ ಹಣದ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಸಂಸತ್​​​ನಲ್ಲಿ ಪ್ರಶ್ನೆ ಕೇಳಲು ಆಕೆ ಹಣ ತೆಗೆದುಕೊಳ್ಳುತ್ತಿದ್ದರು, ಬಾರಿ ಉಡುಗೊರೆಗಳು ಮತ್ತು ಐಷಾರಾಮಿ ವಸ್ತುಗಳನ್ನು ಬೇಡಿಕೆಯಿಟ್ಟಿದ್ದರು ಎಂದು ಆರೋಪ ಕೇಳಿ ಬಂದಿದೆ. ಇಲ್ಲಿ ಮುಖ್ಯ ವಿಷಯ ಎಂದರೆ ಆಕೆ ಸಾಮಾನ್ಯ ಜನರಿಂದ ಹಣ ತೆಗೆದುಕೊಳ್ಳುವುದಲ್ಲ. ಏತನ್ಮಧ್ಯೆ, ಉದ್ಯಮಿ ಗೌತಮ್ ಅದಾನಿ ಅವರ ಪ್ರತಿಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿರುವ ದರ್ಶನ್ ಹಿರಾನಂದಾನಿ (Darshan Hiranandani) ಅವರ ಅಫಿಡವಿಟ್ ಸೋರಿಕೆಯು ಮೊಯಿತ್ರಾ ವಿರುದ್ಧದ ಎಲ್ಲಾ ಆರೋಪಗಳನ್ನು ದೃಢಪಡಿಸಿದೆ. ಇದರ ಹೊರತಾಗಿಯೂ, ಆಕೆ ಈ ಪ್ರಕರಣವನ್ನು ಆಧಾರರಹಿತವೆಂದು ಕರೆದಿದ್ದು, ಆತ ತನ್ನನ್ನು ಮಾನಹಾನಿ ಮಾಡಿದನೆಂದು ಆರೋಪಿಸಿದ್ದಾರೆ. ಆರೋಪ ಮಾಡಿದವರಿಗೆ ನೋಟಿಸ್ ಕೂಡ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಮೊಯಿತ್ರಾ ದೊಡ್ಡ ತಪ್ಪು ಮಾಡಿದ್ದು, ಇಂದು ಅದು ಅವರ ಸಂಸದ ಸ್ಥಾನಮಾನದ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದೆ.

ರಿಯಲ್ ಎಸ್ಟೇಟ್ ಬಿಲಿಯನೇರ್ ನಿರಂಜನ್ ಹಿರಾನಂದಾನಿ ಅವರ ಪುತ್ರ ದರ್ಶನ್ ಹಿರಾನಂದಾನಿ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರ ಸಂಸದೀಯ ಲಾಗಿನ್ ಅನ್ನು ಬಳಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಫಿಡವಿಟ್‌ನಲ್ಲಿ, ಮೊಯಿತ್ರಾ ಅವರಿಂದ ವಿವಿಧ ಪ್ರಯೋಜನಗಳನ್ನು ಕೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮೊಯಿತ್ರಾ ಅವರು ಈ ಹೇಳಿಕೆಗಳನ್ನು ನಿರಾಕರಿಸಿದ್ದು ಈ ರೀತಿ ಹೇಳಲು ಸರ್ಕಾರವು ಹಿರಾನಂದಾನಿಗೆ ಒತ್ತಡ ಹೇರಿದೆ ಎಂದು ಹೇಳಿದ್ದಾರೆ. ಸರಿ, ಇದು ಅವರ ರಾಜಕೀಯ ಹೇಳಿಕೆಯಾಗಿರಬಹುದು ಆದರೆ ಮೊಯಿತ್ರಾ ವಿರುದ್ಧದ ಆರೋಪಗಳು ಗಂಭೀರವಾಗಿವೆ.

ಸಂಸತ್​​​ನಲ್ಲಿ ಪ್ರಶ್ನೆಗಳನ್ನು ಕೇಳಲು ಮೂರು ಸ್ವರೂಪಗಳು

ಸಂಸತ್​​​ನಲ್ಲಿ ಪ್ರಶ್ನೆ ಕೇಳುವ ಪ್ರಕ್ರಿಯೆ ಇದೆ. ಸ್ಟಾರ್ ಮಾಡಿದ ಪ್ರಶ್ನೆ ಎಂದು ಕರೆಯಲ್ಪಡುವ ಒಂದು ನಕ್ಷತ್ರ ಹಾಕಿದ ಪ್ರಶ್ನೆ ಇದೆ ಮತ್ತು ಅದರ ಉತ್ತರವನ್ನು ಸಂಸತ್​​​ನಲ್ಲಿ ಮೌಖಿಕವಾಗಿ ನೀಡಬೇಕು ಮತ್ತು ಈ ಸಂದರ್ಭದಲ್ಲಿ ಪೂರಕ ಪ್ರಶ್ನೆಯನ್ನು ಸಹ ಕೇಳಬಹುದು. ಎರಡನೆಯದಾಗಿ, ಸ್ಟಾರ್ ಹಾಕದ ಪ್ರಶ್ನೆಯನ್ನು ಅನ್ ಸ್ಟಾರ್ಡ್ ಕ್ವೆಶ್ಚನ್ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಸಚಿವರು ಲಿಖಿತವಾಗಿ ಉತ್ತರಿಸಬೇಕು ಮತ್ತು ಪೂರಕ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ. ಇವುಗಳ ಹೊರತಾಗಿ ಶಾರ್ಟ್ ನೋಟಿಸ್‌ನ ಸ್ವರೂಪವಿದ್ದು, ಹತ್ತು ದಿನಗಳ ಒಳಗೆ ಅಥವಾ ನಿಗದಿತ ಕಾಲಮಿತಿಯೊಳಗೆ ಸಂಬಂಧಪಟ್ಟ ಸಚಿವರು ಉತ್ತರಿಸಬೇಕು. ಮಹುವಾ ಮೊಯಿತ್ರಾ ಅವರೊಂದಿಗೆ ಇಲ್ಲಿ ದೊಡ್ಡ ಆಟ ನಡೆದಿದೆ. ಅವರು ತಮ್ಮ ಸದಸ್ಯ ಪೋರ್ಟಲ್‌ನ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ದರ್ಶನ್ ಹಿರಾನಂದಾನಿಗೆ ಹಸ್ತಾಂತರಿಸಿದ್ದರು. ಅವರು ಅದನ್ನು ಮೊಯಿತ್ರಾ ಬದಲಿಗೆ ನಿರಂತರವಾಗಿ ಬಳಸುತ್ತಿದ್ದರು.

ಸದಸ್ಯರ ಪೋರ್ಟಲ್ ಎಂದರೇನು ಮತ್ತು ಪ್ರಶ್ನೆಗಳನ್ನು ಕೇಳುವುದು ಹೇಗೆ?

ಈ ಸದಸ್ಯರ ಪೋರ್ಟಲ್ ಯಾವುದು ಮತ್ತು ಅದರ ಬಗ್ಗೆ ಒಬ್ಬರು ಹೇಗೆ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ನೋಡೋಣ. ಸಂಸತ್ತಿಗೆ ಆಯ್ಕೆಯಾದ ಸದಸ್ಯರಿಗೆ ವೆಬ್ ಪೋರ್ಟಲ್‌ನ ವಿಳಾಸ, ಲಾಗ್-ಇನ್ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗುತ್ತದೆ. ಅಲ್ಲಿ ಅವರು ಸರ್ಕಾರಕ್ಕೆ ಯಾವುದೇ ಪ್ರಶ್ನೆ ಕೇಳಬಹುದು. ಇದು ಇ-ಮೇಲ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಪ್ರಶ್ನೆಯನ್ನು ಸ್ಪೀಕರ್‌ಗೆ ಕಳುಹಿಸಲಾಗುತ್ತದೆ. ಸ್ಪೀಕರ್ ಪ್ರಶ್ನೆಗಳನ್ನು ನೋಡುತ್ತಾರೆ ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಮೊಯಿತ್ರಾ ಅವರ ‘ ಆಪ್ತ ಸ್ನೇಹಿತ’ ಈ ಮೂಲಕ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೇರ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸ್ಪೀಕರ್‌ಗೆ ಏನೇ ಪ್ರಶ್ನೆಗಳನ್ನು ಕೇಳಲಾಗಿತ್ತೋ ಅದೆಲ್ಲವೂ ಅವರ ಬಳಿ ಇದೆ ಎಂದು ಹಿರಾನಂದಾನಿ ಹೇಳಿಕೊಂಡಿದ್ದಾರೆ.ಯಾಕೆಂದರೆ ಅವರೇ ಈ ಪೋರ್ಟಲ್ ಬಳಸಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ ದೇಶದ ಭದ್ರತೆಯನ್ನೇ ಅಡಮಾನ ಇರಿಸಿದ ಮಹುವಾ ಮೊಯಿತ್ರಾ; ಬಿಜೆಪಿ ಸಂಸದ ಆರೋಪ

60-65 ಪ್ರಶ್ನೆಗಳಲ್ಲಿ, 50 ಗೌತಮ್ ಅದಾನಿ ಬಗ್ಗೆಯೇ ಇತ್ತು

ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಸಂಸದರಾದ ನಂತರ ಅವರು ಸರ್ಕಾರಕ್ಕೆ ಹೆಚ್ಚು ಕಡಿಮೆ 60-65 ಪ್ರಶ್ನೆಗಳನ್ನು ಕೇಳಿದ್ದಾರೆ. ಅಚ್ಚರಿಯ ವಿಷಯವೆಂದರೆ ಇದರಲ್ಲಿ 50 ಪ್ರಶ್ನೆಗಳು ಗೌತಮ್ ಅದಾನಿ, ಅವರ ವ್ಯವಹಾರ, ಸರ್ಕಾರದೊಂದಿಗಿನ ಒಪ್ಪಂದದ ಬಗ್ಗೆ ಮಾತ್ರ ಆಗಿತ್ತು. ಮಹುವಾ ಮೊಯಿತ್ರಾ ಅವರನ್ನು ‘ಆಪ್ತ ಸ್ನೇಹಿತೆ’ ಎಂದು ಕರೆದುಕೊಳ್ಳುವ ದರ್ಶನ್ ಹಿರಾನಂದಾನಿ, ಇದು ಪ್ರಸಿದ್ಧರಾಗಲು ಅವರ ತಂತ್ರವಾಗಿತ್ತು ಎಂದು ಹೇಳುತ್ತಾರೆ. ಇದಕ್ಕಾಗಿ ಅವರು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ವ್ಯವಹಾರವನ್ನು ಗುರಿಯಾಗಿಸಿಕೊಂಡರು. ಹಿಂಡೆನ್‌ಬರ್ಗ್ ವರದಿಯು ಮೊಯಿತ್ರಾ ಕೇಳಿದ ಪ್ರಶ್ನೆಗಳನ್ನು ಉಲ್ಲೇಖಿಸುತ್ತದೆ ಮತ್ತು ಸರ್ಕಾರದ ಪ್ರತಿಕ್ರಿಯೆಯನ್ನು ಒಳಗೊಂಡಿರುತ್ತದೆ.

ಸಂಸದೀಯ ನಿಯಮಗಳ ಪ್ರಕಾರ, ಸಂಸದರು ತಮ್ಮ ವಿಶೇಷಾಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅದನ್ನು ಸಂಸತ್ತಿನ ಅವಹೇಳನ ಎಂದು ಪರಿಗಣಿಸಲಾಗುತ್ತದೆ. ಮಹುವಾ ಮೊಯಿತ್ರಾ ಪ್ರಕರಣವನ್ನು ಪ್ರಸ್ತುತ ಸಂಸತ್ತಿನ ನೈತಿಕ ಸಮಿತಿಯು ತನಿಖೆ ನಡೆಸುತ್ತಿದೆ, ಅಲ್ಲಿ ಮಹುವಾ ಮೊಯಿತ್ರಾ ಅವರು ಪ್ರಶ್ನೆಗಳಿಗೆ ಬದಲಾಗಿ ಹಣವನ್ನು ತೆಗೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:44 pm, Mon, 23 October 23