ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಮಾಜವಾದಿ (Samajwadi Party) ಪಕ್ಷ ಭರ್ಜರಿ ಪ್ರಯತ್ನಗಳನ್ನ ನಡೆಸುತ್ತಿದೆ. ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಉತ್ತರ ಪ್ರದೇಶ(Uttar Pradesh)ದ ಜನರಿಗೆ ವಿವಿಧ ಭರವಸೆಗಳನ್ನು ಕೊಟ್ಟಿದ್ದಾರೆ. ಹಾಗೇ ಇಂದು ಆಗ್ರಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷ ಸರ್ಕಾರ ರಚಿಸಿದರೆ ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಸಂಸ್ಕರಣಾ ಕಾರ್ಖಾನೆ ಸ್ಥಾಪಿಸಲಾಗುವುದು ಹಾಗೂ ವೋಡ್ಕಾ ತಯಾರಿಕಾ ಘಟಕವನ್ನೂ ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ. ಆಗ್ರಾದ ಹಲವು ಭಾಗಗಳಲ್ಲಿ ಆಲೂಗಡ್ಡೆಯನ್ನು ಅನೇಕ ರೈತರು ಬೆಳೆಯುತ್ತಾರೆ. ಆದರೆ ಈಗಿನ ಸರ್ಕಾರ ಅದಕ್ಕೆ ಸೂಕ್ತವಾದ ಬೆಂಬಲ ನೀಡುತ್ತಿಲ್ಲದ ಕಾರಣ ಅದೆಷ್ಟೋ ರೈತರು ಬೆಳೆದ ಆಲೂಗಡ್ಡೆಗಳು ಸುಮ್ಮನೆ ವ್ಯರ್ಥವಾಗುತ್ತಿವೆ. ಹೀಗಾಗಿ ಒಂದು ಆಲೂಗಡ್ಡೆ ಸಂಸ್ಕರಣಾ ಕಾರ್ಖಾನೆ ನಿರ್ಮಿಸಿ ವೋಡ್ಕಾ ತಯಾರಿಕೆ ಘಟಕ ಪ್ರಾರಂಭಿಸಲಾಗುವುದು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಸಮಾಜವಾದಿ ಮುಖಂಡರೊಬ್ಬರ ಬಳಿ, ವೋಡ್ಕಾ ತಯಾರಿಕೆಗೆ ಆಲೂಗಡ್ಡೆ ಬಳಸುತ್ತಾರೆ ತಾನೇ? ಎಂದೂ ಅಖಿಲೇಶ್ ಪ್ರಶ್ನಿಸಿದ್ದಾರೆ.
#WATCH | We will build a potato processing unit here and if needed we will also build a vodka plant. Tell me whether vodka can be made from potatoes or not?: SP chief Akhilesh Yadav in Agra#UttarPradeshElections2022 pic.twitter.com/9ldHbnJguk
— ANI UP/Uttarakhand (@ANINewsUP) February 6, 2022
ಈ ಪ್ರದೇಶದಲ್ಲಿ ಆಲೂಗಡ್ಡೆ ಪ್ರಮುಖ ಬೆಳೆ. ಆದರೆ ಅದರ ಮಾರಾಟ ಮಾಡುವುದೇ ಕಷ್ಟ. ಸೂಕ್ತ ಬೆಲೆಯನ್ನೂ ಸರ್ಕಾರ ಕಲ್ಪಿಸಿಲ್ಲ. 2018ರಲ್ಲಿ ಒಮ್ಮೆ ಆಲೂಗಡ್ಡೆ ಬೆಳಗಾರರು ಲಖನೌದಲ್ಲಿರುವ ಮುಖ್ಯಮಂತ್ರಿ ನಿವಾಸದ ಎದುರು ತಾವು ಬೆಳೆದ ಆಲೂಗಡ್ಡೆಯನ್ನು ಸುರಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸರ್ಕಾರ ರೈತರಿಂದ ಬೆಳೆ ಖರೀದಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಅಷ್ಟೇ ಅಲ್ಲ, ಕಳೆದ ಕೆಲವು ವರ್ಷಗಳಿಂದ ವೋಡ್ಕಾದ ಮಾರ್ಕೆಟ್ ಶೇರ್ ಏರಿಕೆಯಾಗಿದೆ. ಒಂದೊಮ್ಮೆ ನಾವು ಅಧಿಕಾರಕ್ಕೆ ಬಂದರೆ, ಆಲೂಗಡ್ಡೆ ಸಂಸ್ಕರಣೆ, ಚಿಪ್ಸ್ ಮತ್ತು ಇತರ ಸ್ನ್ಯಾಕ್ಸ್ ತಯಾರಿಕಾ ಕೈಗಾರಿಕೆ ಸ್ಥಾಪಿಸಲು 100-200 ಕೋಟಿ ರೂಪಾಯಿ ಸಹಾಯಧನ ನೀಡುತ್ತೇವೆ. ಆಲೂಗಡ್ಡೆ ವೇಸ್ಟ್ ಆಗುವುದನ್ನು ತಪ್ಪಿಸಲು ಒಂದು ವೋಡ್ಕಾ ತಯಾರಿಕಾ ಘಟಕದ ಸ್ಥಾಪನೆಯನ್ನೂ ಮಾಡಬೇಕು ಎಂದುಕೊಂಡಿದ್ದೇವೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಸೈನ್ಯ ಮತ್ತು ಪೊಲೀಸ್ ಇಲಾಖೆ ಸೇರಬೇಕು ಎಂದುಕೊಂಡಿದ್ದ ಅನೇಕರಿಗೆ ಕೊರೊನಾ ಲಾಕ್ಡೌನ್ ಕಾರಣದಿಂದ ಕೆಲಸಕ್ಕೆ ಸೇರಲು ಆಗಲಿಲ್ಲ. ಆದರೆ ಬಳಿಕ ವಯಸ್ಸು ಹೆಚ್ಚಾಯಿತು ಎಂದು ಅವರೆಲ್ಲ ರಿಜೆಕ್ಟ್ ಆಗಿದ್ದಾರೆ. ಸಮಾಜವಾದಿ ಪಕ್ಷ ಮುಂದೆ ಸರ್ಕಾರ ರಚನೆ ಮಾಡಿದರೆ, ನಾವು ಸೇನೆಗೆ ಒಂದು ವಿಶೇಷ ಮನವಿ ಮಾಡಿ, ರಾಷ್ಟ್ರಸೇವೆಯಲ್ಲಿ ಆಸಕ್ತಿ ಇರುವ ನಮ್ಮ ರಾಜ್ಯದ ಯುವಕರನ್ನು ನೇಮಕ ಮಾಡಿಕೊಳ್ಳುವಂತೆ ಕೇಳುತ್ತೇವೆ. ಅಗತ್ಯಬಿದ್ದರೆ, ರಾಜ್ಯ ಪೊಲೀಸ್ ಇಲಾಖೆಯಲ್ಲೂ ಪೊಲೀಸ್ ನೇಮಕಾತಿ ವಯಸ್ಸಿನ ಮಿತಿಯಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಶಾರುಖ್ ಫೋಟೋ ಸಾಕ್ಷಿ; ಆದರೆ ಅವರ ಪಕ್ಕ ಇರೋದು ಗೌರಿ ಖಾನ್ ಅಲ್ಲ