ಭಾರತಮಾತೆಯ ಹೆಮ್ಮೆಯ ಪುತ್ರ ಸಂದೀಪ್​ ಉನ್ನಿಕೃಷ್ಣನ್​ ಜನ್ಮದಿನ ಇಂದು; ಮುಂಬೈ ಉಗ್ರದಾಳಿಯ ಹೋರಾಟದ ಕ್ಷಣವನ್ನೊಮ್ಮೆ ನೆನಪಿಸಿಕೊಳ್ಳೋಣ

|

Updated on: Mar 15, 2021 | 1:23 PM

Sandeep Unnikrishnan: ಯಾರೂ ಬರಬೇಡಿ..ನಾನು ಈ ಉಗ್ರರನ್ನು ನೋಡಿಕೊಳ್ಳುತ್ತೇನೆ’ ಮೇಜರ್​ ಸಂದೀಪ್​ ಉನ್ನೀಕೃಷ್ಣನ್​ ಅವರ ಕೊನೇ ಮಾತುಗಳಿವು. ಅಂದು ಉಗ್ರರು ತಮ್ಮಮೇಲೆ ಗುಂಡು ಹಾರಿಸಿದ ಸಂದರ್ಭದಲ್ಲಿ, ರಕ್ಷಣೆಗೆಂದು ಧಾವಿಸುತ್ತಿದ್ದ ಸಹೋದ್ಯೋಗಿಗಳಿಗೆ ಸಂದೀಪ್ ಉನ್ನಿಕೃಷ್ಣನ್​ ಹೀಗೆಂದು ಸೂಚನೆ ನೀಡಿದ್ದರಂತೆ.

ಭಾರತಮಾತೆಯ ಹೆಮ್ಮೆಯ ಪುತ್ರ ಸಂದೀಪ್​ ಉನ್ನಿಕೃಷ್ಣನ್​ ಜನ್ಮದಿನ ಇಂದು; ಮುಂಬೈ ಉಗ್ರದಾಳಿಯ ಹೋರಾಟದ ಕ್ಷಣವನ್ನೊಮ್ಮೆ ನೆನಪಿಸಿಕೊಳ್ಳೋಣ
ಸಂದೀಪ್​ ಉನ್ನೀಕೃಷ್ಣನ್​
Follow us on

ಸಂದೀಪ್​ ಉನ್ನಿಕೃಷ್ಣನ್..(Sandeep Unnikrishnan) ಅದೆಷ್ಟೇ ವರ್ಷಗಳಾಗಲಿ ಭಾರತೀಯರು ಈ ವೀರ ಯೋಧನನ್ನು ಎಂದಿಗೂ ಮರೆಯೋದಿಲ್ಲ. 2008ರ ನವೆಂಬರ್ 26ರಂದು ಮುಂಬೈನ 100 ವರ್ಷಗಳ ಇತಿಹಾಸ ಇರುವ​ ತಾಜ್​ ಹೋಟೆಲ್​ಗಳ ಮೇಲೆ ಪಾಕ್​ ಬೆಂಬಲಿತ ಲಷ್ಕರ್​ ಎ ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಿದ್ದಾಗ ಅದೆಷ್ಟೋ ಜನರನ್ನು ರಕ್ಷಿಸಿ, ತನ್ನ ಪ್ರಾಣವನ್ನೇ ಬಿಟ್ಟ ಕೆಚ್ಚೆದೆಯ ನಾಯಕನಿಗೆ ಇಂದು 44ನೇ ಜನ್ಮದಿನ. ಬದುಕಿದ್ದಿದ್ದರೆ ಅದ್ದೂರಿಯಾಗಿ, ಸಂಭ್ರಮದಿಂದ, ಹೆಮ್ಮೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ಅವರಿಲ್ಲದಿದ್ದರೂ ಪ್ರತಿವರ್ಷ ಸಂದೀಪ್ ಹುಟ್ಟುಹಬ್ಬವನ್ನು ಇಡೀ ದೇಶ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತದೆ.

‘ಯಾರೂ ಬರಬೇಡಿ..ನಾನು ಈ ಉಗ್ರರನ್ನು ನೋಡಿಕೊಳ್ಳುತ್ತೇನೆ’ ಮೇಜರ್​ ಸಂದೀಪ್​ ಉನ್ನೀಕೃಷ್ಣನ್​ ಅವರ ಕೊನೇ ಮಾತುಗಳಿವು. ಅಂದು ಉಗ್ರರು ತಮ್ಮಮೇಲೆ ಗುಂಡು ಹಾರಿಸಿದ ಸಂದರ್ಭದಲ್ಲಿ, ರಕ್ಷಣೆಗೆಂದು ಧಾವಿಸುತ್ತಿದ್ದ ಸಹೋದ್ಯೋಗಿಗಳಿಗೆ ಸಂದೀಪ್ ಉನ್ನಿಕೃಷ್ಣನ್​ ಹೀಗೆಂದು ಸೂಚನೆ ನೀಡಿದ್ದರಂತೆ. ಇದೇ ಅವರ ಕೊನೇ ಮಾತಾಗಿಹೋಯಿತು.

ಚಿಕ್ಕಂದಿನಿಂದಲೂ ಸಂದೀಪ್ ಅವರಿಗೆ ದೇಶವೆಂದರೆ ಪ್ರೀತಿ. ನಮ್ಮ ದೇಶ ಸದಾ ಗೆಲ್ಲಬೇಕು ಎಂಬುದು ಅವರ ಆಸೆಯಾಗಿತ್ತು. ಇಷ್ಟಪಟ್ಟಂತೆಯೇ ಸೈನ್ಯವನ್ನೂ ಸೇರಿದ್ದರು. 1977ರಲ್ಲಿ ಕೇರಳದ ಕೋಳಿಕ್ಕೋಡ್​ನಲ್ಲಿ ಜನಿಸಿದ್ದ ಸಂದೀಪ್​ ಅವರ ತಂದೆ ಕೆ.ಉನ್ನೀಕೃಷ್ಣನ್​ ಹಾಗೂ ತಾಯಿ ಧನಲಕ್ಷ್ಮೀ ಉನ್ನೀಕೃಷ್ಣನ್​. ಪತ್ನಿಯ ಹೆಸರು ನೇಹಾ ಸಂದೀಪ್​ ಉನ್ನೀಕೃಷ್ಣನ್​.

2008ನೇ ಇಸ್ವಿ ನವೆಂಬರ್​ 26ರಂದು ಮುಂಬೈ ಹೋಟೆಲ್​​ಗಳ ಮೇಲೆ ಉಗ್ರದಾಳಿ ನಡೆದಾಗ ಎನ್​ಎಸ್​ಜಿ (The National Security Guard)ಯ ಕಮಾಂಡೋ ಆಗಿದ್ದ ಮೇಜರ್​ ಉನ್ನೀಕೃಷ್ಣನ್ ಮತ್ತು ಅವರ ತಂಡ ಭಯೋತ್ಪಾದಕರೊಂದಿಗಿನ ಸೆಣೆಸಾಟದಲ್ಲಿ ಮುಂಚೂಣಿಯಲ್ಲಿತ್ತು. ಉಗ್ರರು ಇದ್ದ ತಾಜ್​ ಹೋಟೆಲ್​ನ ಒಂದೊಂದೇ ಫ್ಲೋರ್​​ನ್ನು ಎನ್​ಎಸ್​ಜಿ ಕಮಾಂಡೋಗಳು ಸುತ್ತುವರಿಯುತ್ತ, ಒಳಗಿದ್ದ ಜನರನ್ನು ರಕ್ಷಣೆ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. 26ರಂದು ಉಗ್ರರ ಹಿಡಿತಕ್ಕೆ ಸಿಲುಕಿದ್ದ ಹೋಟೆಲ್​ನಲ್ಲಿ ನಾಲ್ಕು ದಿನ ಅಂದರೆ ನವೆಂಬರ್ 29ರವರೆಗೂ ಭಾರತೀಯ ಯೋಧರು ಮತ್ತು ಭಯೋತ್ಪಾದಕರ ನಡುವಿನ ಫೈಟ್ ಮುಂದುವರಿದಿತ್ತು. ನವೆಂಬರ್​ 28ರಂದು ಸಂದೀಪ್​ ಉನ್ನೀಕೃಷ್ಣನ್​ ಉಗ್ರರ ಗುಂಡೇಟಿಗೆ ಕೊನೆಯುಸಿರು ಎಳೆದರು. ಹೋಟೆಲ್​ನಲ್ಲಿ ಇದ್ದವರನ್ನು ಮತ್ತು ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸುತ್ತ ತಮ್ಮ ಜೀವವನ್ನೇ ಬಿಟ್ಟರು. ಆಗ ಅವರಿಗೆ ಕೇವಲ 31ವರ್ಷ.

ಸೈನ್ಯ ಸೇರಿದ್ದು 1995ರಲ್ಲಿ
ಸಂದೀಪ್​ ಉನ್ನೀಕೃಷ್ಣನ್​ ಅವರ ಸೇನಾ ಪ್ರಯಾಣ ಶುರುವಾಗಿದ್ದು 1995ರಿಂದ. ಮಹಾರಾಷ್ಟ್ರದ ಪುಣೆಯಲ್ಲಿರುವ ನ್ಯಾಷನಲ್​ ಡಿಫೆನ್ಸ್ ಅಕಾಡೆಮಿಗೆ ಸೇರಿದರು. ಇನ್ನು ಭಾರತೀಯ ಸೇನೆಯಲ್ಲಿ ಅವರು ಸೇವೆ ಪ್ರಾರಂಭಿಸಿದ್ದು 1999ರಿಂದ. 2008ರವರೆಗೆ ದಿಟ್ಟತನ, ಧೈರ್ಯದಿಂದ ದೇಶಸೇವೆ ಮಾಡಿದ ಸಂದೀಪ್​ ಉನ್ನಿಕೃಷ್ಣನ್​ಗೆ ಸೈನ್ಯ ಸೇವಾ ಮೆಡಲ್​, ಸ್ಪೆಶಲ್​ ಸರ್ವೀಸ್ ಮೆಡಲ್​, ಆಪರೇಶನ್​ ಪರಾಕ್ರಮ್ ಮೆಡಲ್​ ಗೌರವ ಸಿಕ್ಕಿದೆ. ಅದಕ್ಕೂ ಮಿಗಿಲಾಗಿ ಇವರು ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತರು.

​​ಗಣ್ಯರಿಂದ ಸ್ಮರಣೆ
ಉನ್ನೀಕೃಷ್ಣನ್​ 44ನೇ ಜನ್ಮದಿನವನ್ನು ಹಲವು ಗಣ್ಯರು ಸ್ಮರಿಸಿದ್ದಾರೆ. ರಾಜಕೀಯ ಮುಖಂಡರಾದ ಪಿ.ಸಿ.ಮೋಹನ್​, ಲಕ್ಷ್ಮೀ ಹೆಬ್ಬಾಳ್ಕರ್​, ಪ್ರತಾಪ್​ ಸಿಂಹ, ಜಗದೀಶ್​ ಶೆಟ್ಟರ್​, ನಳಿನ್​ ಕುಮಾರ್ ಕಟೀಲ್​, ಶಿವಕುಮಾರ್ ಉದಾಸಿ, ಬಿ.ಸಿ.ಪಾಟೀಲ್​, ಶ್ರೀಪಾದ್ ನಾಯಕ್​, ಬಿ.ಶ್ರೀರಾಮುಲು ಸೇರಿ ಹಲವರು ತಮ್ಮ ಟ್ವಿಟರ್​ನಲ್ಲಿ ಸಂದೀಪ್ ಉನ್ನಿಕೃಷ್ಣನ್​ ಜನ್ಮದಿನವನ್ನು ನೆನಪಿಸಿಕೊಂಡು, ಗೌರವ ಸಲ್ಲಿಸಿದ್ದಾರೆ. ಇಡೀ ದೇಶ ಅವರನ್ನು ಸ್ಮರಿಸುತ್ತಿದೆ.

ಇದನ್ನೂ ಓದಿ: Justice For Kamaraj: ‘ಕಾಮರಾಜು ಮತ್ತೆ ಕೆಲಸಕ್ಕೆ ನೇಮಕವಾಗುವವರೆಗೂ ಜೊಮ್ಯಾಟೊದಿಂದ ಆರ್ಡರ್​ ಪಡೆಯುವುದಿಲ್ಲ’- ಶುರುವಾಗಿದೆ ಅಭಿಯಾನ

Published On - 1:20 pm, Mon, 15 March 21