ಹೈದರಾಬಾದ್: ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಌಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ತೆಲುಗು ಚಿತ್ರರಂಗದ ಖ್ಯಾತ ಸಿನಿಮಾ ವಿತರಕ ಕಮಲಾಕರ್ ರೆಡ್ಡಿ ಹಾಗೂ ಅವರ ತಂದೆ ಸಾವನ್ನಪ್ಪಿರೋ ಘಟನೆ ಕಳೆದ ಬುಧವಾರ ತೆಲಂಗಾಣದ ನಾಲಗೊಂಡ ಜಿಲ್ಲೆಯ ವಡಪಲ್ಲಿ ಚೆಕ್ಪೋಸ್ಟ್ ಬಳಿ ಸಂಭವಿಸಿದೆ.
ಅರ್ಜುನ್ ರೆಡ್ಡಿ, ಏಜೆಂಟ್ ಸಾಯಿ ಶ್ರೀನಿವಾಸ ಆತ್ರೇಯ ಹಾಗೂ ಪದ್ಮಾವತ್ ಸಿನಿಮಾಗಳ ವಿತರಕರಾಗಿದ್ದ 48 ವರ್ಷದ ಕಮಲಾಕರ್ ರೆಡ್ಡಿ ಹಾಗೂ ಅವರ ತಂದೆ ನಂದಗೋಪಾಲ್ ರೆಡ್ಡಿಗೆ (75) ಕೊರೊನಾ ಪಾಸಿಟಿವ್ ಬಂದಿತ್ತು. ಹಾಗಾಗಿ, ತಂದೆ ಮತ್ತು ಮಗ ಚಿಕಿತ್ಸೆಗೆಂದು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಌಂಬುಲೆನ್ಸ್ನಲ್ಲಿ ತೆರಳುತ್ತಿದ್ದರು.
ಌಂಬುಲೆನ್ಸ್ ಚಾಲಕ ನಿದ್ದೆಗೆ ಜಾರಿದಾಗ ಅವಘಡ
ಌಂಬುಲೆನ್ಸ್ ಕೊಂಡಪ್ರೋಲು ಬಳಿ ತಲುಪಿದಾಗ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಮಲಾಕರ್ ರೆಡ್ಡಿ ಹಾಗೂ ಅವರ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಌಂಬುಲೆನ್ಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ ಌಂಬುಲೆನ್ಸ್ ಚಾಲಕ ವಾಹನ ಚಲಾಯಿಸುವಾಗ ನಿದ್ದೆಗೆ ಜಾರಿದ್ದರಿಂದ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
Published On - 11:06 am, Thu, 20 August 20