ಚೆನ್ನೈ: ತಮಿಳುನಾಡಿನ (Tamil Nadu)ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ತರಕಾರಿ ಬೆಲೆ (Vegetable Price)ಗಗನಕ್ಕೇರಿದೆ. ರಾಜ್ಯದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ತರಕಾರಿ ಬೆಳೆಗೆ ಹೊಡೆತ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಾರುಕಟ್ಟೆ ವೀಕ್ಷಕರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ. ರಾಜ್ಯದ ಎರಡು ಪ್ರಮುಖ ತರಕಾರಿ ಮಾರುಕಟ್ಟೆಗಳಾದ ಮಧುರೈ ಮತ್ತು ಚೆನ್ನೈ ಕೋಯಂಬೇಡು ಮಾರುಕಟ್ಟೆಗಳಲ್ಲಿ ಟೊಮ್ಯಾಟೊ (Tomatoes)ಮತ್ತು ಸಣ್ಣ ಈರುಳ್ಳಿ (ಸಾಂಬಾರ್ ಈರುಳ್ಳಿ) (shallots) ದುಬಾರಿಯಾಗಿವೆ. ವಾರದ ಹಿಂದೆ 15 ಕೆಜಿಯ ಕ್ರೇಟ್‌ಗೆ 100 ರೂ.ಗೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಈಗವ ಕ್ರೇಟ್ ಗೆ 250 ರೂ.ಗಿಂತ ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತಿದೆ. ಪ್ರತಿ ಕೆಜಿಗೆ 90 ರೂಪಾಯಿ ಇದ್ದ ಸಣ್ಣ ಈರುಳ್ಳಿ ಬೆಲೆ ಮಧುರೈ ಮತ್ತು ಕೋಯಂಬೇಡು ಮಾರುಕಟ್ಟೆಗಳಲ್ಲಿ 110 ರೂಪಾಯಿಗೆ ಏರಿದೆ. ಈ ಎರಡು ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಈ ತರಕಾರಿಗಳ ಕೊರತೆಯು ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಲು ಕಾರಣವಾಗಿದೆ.
ಮಧುರೈ, ಸೇಲಂ, ತಿರುಚ್ಚಿ, ಕೊಯಮತ್ತೂರು ಮತ್ತು ಚೆನ್ನೈನ ಕೊಯಂಬೇಡುವಿನ ಪ್ರಮುಖ ತರಕಾರಿ ಮಾರುಕಟ್ಟೆಗಳಲ್ಲಿ ಮಳೆಯಿಂದಾಗಿ ಹಲವಾರು ತರಕಾರಿಗಳು ಕೊಳೆತು ಹೋಗಿದ್ದ ಕಾರಣ ತರಕಾರಿಗಳ ಬೆಲೆಗಳು ಶೇಕಡಾ 20 ರಿಂದ 30 ರಷ್ಟು ಹೆಚ್ಚಾಗಿದೆ. ತರಕಾರಿ ಸಾಗಣೆ ಕೂಡಾ ರಾಜ್ಯದ ರೈತರು ಎದುರಿಸುತ್ತಿರುವ ಮತ್ತೊಂದು ಸಮಸ್ಯೆಯಾಗಿದೆ.
ಹೆಚ್ಚಿನ ಬೇಡಿಕೆಗಳು ಮತ್ತು ಕಡಿಮೆ ಉತ್ಪಾದನೆಯಿಂದಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿರುವುದರಿಂದ ತರಕಾರಿ ಉತ್ಪಾದನೆ ಕಡಿಮೆಯಾಗಿದೆ. ಆದರೆ ಈ ತರಕಾರಿಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ಹೆಚ್ಚಾಗಿದೆ. ಸರಕಾರ ಮಧ್ಯಪ್ರವೇಶಿಸಿ ಬೆಲೆ ಇಳಿಕೆ ಮಾಡಬೇಕು, ಇಲ್ಲದಿದ್ದಲ್ಲಿ ತರಕಾರಿ ವ್ಯಾಪಾರಿಗಳಿಗೆ ಇದು ಹೊರೆಯಾಗಲಿದೆ ಎಂದು ಚೆನ್ನೈನ ಕೊಯಂಬೇಡು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಸಗಟು ವ್ಯಾಪಾರಿ ಆರ್.ಅನ್ಪುಸಾಮಿ ಹೇಳಿರುವುದಾಗಿ ಐಎಎನ್‌ಎಸ್ ವರದಿ ಮಾಡಿದೆ.+
ಸೋಮವಾರ ಟೊಮೇಟೊ, ಸೊಪ್ಪು, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಈರುಳ್ಳಿ ಸೇರಿದಂತೆ ಮಾರುಕಟ್ಟೆಗೆ ತರಕಾರಿಗಳ ಬರುವಿಕೆಯಲ್ಲಿ ಶೇ 40ರಷ್ಟು ಇಳಿಕೆಯಾಗಿದೆ. ತಮಿಳುನಾಡಿನ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪೂರೈಕೆಯ ಕೊರತೆಯೂ ಇದೆ ಎಂದು ಕೊಯಂಬೇಡು ಮಾರುಕಟ್ಟೆಯ ವ್ಯಾಪಾರಿ ಕೃಷ್ಣಸಾಮಿ ಹೇಳಿದ್ದಾರೆ.
ಕೊಯಂಬೇಡು ಮಾರುಕಟ್ಟೆಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ರಾಜ್ಯದ ಭಾಗಗಳಿಂದ ಟ್ರಕ್‌ಗಳ ಆಗಮನ. ಇದರಿಂದಾಗಿ ಬಹುತೇಕ ತರಕಾರಿಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ಬೆಲೆ ಏರಿಕೆಯಾಗಿದೆ ಎಂದು ಕೊಯಂಬೇಡು ತರಕಾರಿ ಮಾರಾಟಗಾರರು ತಿಳಿಸಿದ್ದಾರೆ.
ಬಹುತೇಕ ರಸ್ತೆಗಳು ಕೆಸರುಮಯವಾಗಿ ಜಾರುತ್ತಿದೆ, ಇನ್ನು ಕೆಲವು ಬ್ಲಾಕ್ ಆಗಿರುವುದರಿಂದ, ದೂರದ ಹಳ್ಳಿಗಳಿಂದ ಮಧುರೈ ಮತ್ತು ಚೆನ್ನೈ ಸೇರಿದಂತೆ ನಗರಗಳ ಮಾರುಕಟ್ಟೆಗಳಿಗೆ ತರಕಾರಿಗಳನ್ನು ಸಾಗಿಸುವುದು ಕಷ್ಟಕರವಾಗಿದೆ. ಸಾರಿಗೆಯಲ್ಲಿನ ತೊಂದರೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ತರಕಾರಿಗಳು ಹಾಳಾಗುತ್ತದೆ ಎಂದು ಟ್ರಕ್ ಮಾಲೀಕ ಅಹ್ಮದ್ ಮಸ್ತಾನ್ ಹೇಳಿದ್ದಾರೆ.
ಬಹುತೇಕ ಎಲ್ಲ ತರಕಾರಿಗಳ ಬೆಲೆ ಕನಿಷ್ಠ ಶೇ.40ರಷ್ಟು ಏರಿಕೆಯಾಗಿದ್ದು, ವ್ಯಾಪಾರಸ್ಥರು ಮತ್ತು ವಿತರಕರು ವ್ಯಾಪಾರ ಮುಂದುವರಿಸುವುದು ಕಷ್ಟಕರವಾಗಿದೆ ಎಂದು ಕೊಯಂಬೇಡು ತರಕಾರಿ ವ್ಯಾಪಾರಿ ಅದ್ಬುಲ್ ಮೊಯ್ದೀನ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Tue, 15 November 22