ಕ್ರೂರಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಕೇವಲ ಕೆಮ್ಮಿದ್ರೆ, ಸೀನಿದ್ರೆ ಮಾತ ಹರಡುತ್ತೆ ಆಂತಾ ಹೇಳಲಾಗ್ತಿತ್ತು. ಆದ್ರೆ, ಕೆಲ ದಿನಗಳ ಹಿಂದೆ, ಕೊರೊನಾ ವೈರಸ್ ಗಾಳಿಯಲ್ಲೂ 2 ಮೀಟರ್ನಷ್ಟು ದೂರ ಹರಡುತ್ತೆ ಅನ್ನೋದನ್ನ ಕೆಲ ವಿಜ್ನಾನಿಗಳು ಹೇಳಿದ್ರು. ಆದ್ರೀಗ ಈ ವಾದವನ್ನ ಮತ್ತಷ್ಟು ವಿಜ್ನಾನಿಗಳು ಒಪ್ಪಿದ್ದು, ಸೋಂಕಿತ ವ್ಯಕ್ತಿ ಮಾತನಾಡಿದ್ರೆ, ಉಸಿರಾಡಿದರೂ ಸಹ ಸೋಂಕು ಹರಡುವ ಸಾಧ್ಯತೆ ಇದೆ ಅಂತಾ ಹೇಳಿದ್ದಾರೆ.
ವೈರಸ್ ‘ವಿಷವ್ಯೂಹ’
ಜಗತ್ತನ್ನೇ ತಲ್ಲಣಗೊಳಿಸಿರುವ ಕ್ರೂರಿ ವೈರಸ್ ಕೊರೊನಾದಿಂದಾಗಿ, ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,50,93,712ಕ್ಕೆ ಏರಿಕೆಯಾಗಿದೆ. ವೈರಸ್ನಿಂದಾಗಿ 6,19,467 ಜನರು ಪ್ರಾಣ ಕಳೆದುಕೊಂಡಿದ್ರೆ, ಪ್ರಸ್ತುತ 53,63,521 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ವಿರುದ್ಧ ಹೋರಾಡಿ, 18,86,583 ಜನರು ಗುಣಮುಖರಾಗಿದ್ದಾರೆ. 63 ಸಾವಿರ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ.
ಅಮೆರಿಕ ಮೇಲೆ ಚೀನಾ ಗೂಢಾಚಾರಿಕೆ!
ಕೊರೊನಾ ವೈರಸ್ನಿಂದ ಸ್ಮಶಾನದಂತಾಗಿರುವ ಅಮೆರಿಕದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಶತಾಯಗತಾಯ ಪ್ರಯತ್ನ ನಡೆಸಲಾಗ್ತಿದೆ. ಆದ್ರೆ, ಅಮೆರಿಕದ ಬಯೋಟೆಕ್ನ ಕಂಪ್ಯೂಟರ್ಗಳ ಮೇಲೆ ಚೀನಾ ಹ್ಯಾಕರ್ಸ್ ಕಣ್ಣಿಟ್ಟಿದ್ದು, ವ್ಯಾಕ್ಸಿನ್ ಸಂಶೋಧನೆಯೆ ಅಂಶಗಳನ್ನ ಕದಿಯಲು ಪ್ರಯತ್ನಿಸುತ್ತಿದೆ ಅಂತಾ ಅಮೆರಿಕ ಆರೋಪಿಸಿದೆ. ಚೀನಾದ 2 ಹ್ಯಾಕರ್ಸ್ ಗಳು ಇಂಥಾ ಕೆಲಸ ಮಾಡ್ತಿರೋದಾಗಿ ಅಮೆರಿಕ ಆರೋಪಿಸಿದೆ.
‘ಒಳಿತಾಗುವ ಮೊದಲು ಕೆಟ್ಟದಾಗುತ್ತೆ’
ಅಮೆರಿಕದಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಲೇ ಇದ್ದು, ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಲೇ ಇದೆ. ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಳ್ಳೆಯದಾಗುವ ಮೊದಲು ಕೆಟ್ಟದಾಗೇ ಆಗುತ್ತೆ. ಹೀಗಾಗಿ, ಕೊರೊನಾ ವೈರಸ್ ವಿರುದ್ಧ ಮೆಟ್ಟಿನಿಲಲ್ಲು ಇಷ್ಟು ಸಾವು ನೋವಿನ ಕಷ್ಟ ಅನುಭವಿಸಬೇಕಾಗಿದೆ . ಹೀಗಾಗಿ ಎಲ್ಲರೂ ಮಾಸ್ಕ್ ಧರಿಸುವಂತೆ ಟ್ರಂಪ್ ಹೇಳಿದ್ದಾರೆ.
ಡೆಕ್ಸಮೆಥಾಸೊನ್ಗೆ ಡಿಮ್ಯಾಂಡ್
ಜಪಾನ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,736ಕ್ಕೆ ಏರಿಕೆಯಾಗಿದ್ದು, 988 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ವೈರಸ್ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರೋ ಜಪಾನ್, ಡೆಕ್ಸಮೆಥಾಸೊನ್ ಮೆಡಿಷನ್ನನ್ನ ಸೋಂಕಿತರಿಗೆ ನೀಡಲು ನಿರ್ಧರಿಸಿದೆ. ಇಂಗ್ಲೆಂಡ್ನಲ್ಲಿ ಡೆಕ್ಸಮೆಥಾಸೊನ್ ನೀಡಿದ್ದರ ಪರಿಣಾಮ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಇಳಿಕೆಯಾಗಿದೆ.
3ನೇ ಬಾರಿ ಬೊಲ್ಸೊನಾರೋ ಟೆಸ್ಟ್
ಕೊರೊನಾ ವೈರಸ್ನಿಂದ ನಲುಗಿರುವ ಬ್ರೆಜಿಲ್ನಲ್ಲಿ ಸೋಂಕಿತರ ಸಂಖ್ಯೆ 21,66,532ಕ್ಕೆ ಏರಿಕೆಯಾಗಿದ್ದು, 81 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಅಧ್ಯಕ್ಷ ಜೈರ್ ಬೊಲ್ಸೊನಾರೋ ಕೂಡ ಕೊರೊನಾದಿಂದ ಬಳಲುತ್ತಿದ್ದು, ನಿನ್ನೆ ಮತ್ತೊಮ್ಮೆ ಕೊವಿಡ್ ಟೆಸ್ಟ್ ಮಾಡಿಸಿದ್ದಾರೆ. ಇವತ್ತು ರಿಸಲ್ಟ್ ಬರುವ ಸಾಧ್ಯತೆ ಇದ್ದು, ನೆಗೆಟಿವ್ ರಿಪೋರ್ಟ್ ಬರುವಂತೆ ದೇವರು ದಯೆ ತೋರಿದ್ರೆ ಎಲ್ಲವೂ ಒಳಿತಾಗಲಿದೆ ಅಂತಾ ಬೊಲ್ಸೊನಾರೋ ಹೇಳಿದ್ದಾರೆ.
24 ಗಂಟೆ, 1,111 ಬಲಿ!
ಅಮೆರಿಕದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 40,28,569ಕ್ಕೆ ಏರಿಕೆಯಾಗಿದೆ. ವೈರಸ್ನಿಂದಾಗಿ 1,44,953 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸತತ 16ನೇ ದಿನ 50,000ಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ, ಅಮೆರಿಕದಲ್ಲಿ ನಿನ್ನೆ 66,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ನಿನ್ನೆ ಒಂದೇ ದಿನ 1,111 ಜನರು ಕೊರೊನಾಗೆ ಬಲಿಯಾಗಿದ್ದಾರೆ.
ಮನೆಯಲ್ಲೇ ಹರಡ್ತಿದೆ ವೈರಸ್!
ಕೊರೊನಾ ವೈರಸ್ ಬಾರದಂತೆ ತಡೆಗಟ್ಟ ಬೇಕಾದರೆ ಮನೆಯಲ್ಲೇ ಇರಿ, ಸೇಫ್ ಆಗಿರಿ ಅಂತಾ ಹೇಳಲಾಗ್ತಿದೆ. ಆದ್ರೆ, ದಕ್ಷಿಣ ಕೊರಿಯಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಾ ವರದಿಯೊಂದನ್ನ ನೀಡಿದ್ದಾರೆ. ಹೌದು, ದಕ್ಷಿಣ ಕೊರಿಯಾ ಪ್ರಕಾರ, ವೈರಸ್ ಹೊರಗೆ ಓಡಾಡಿದರೆ ಬರುವುದಕ್ಕಿಂತ ಹೆಚ್ಚಾಗಿ, ಕುಟುಂಬಸ್ಥರಿಂದ ಮನೆಯಲ್ಲಿ ಇದ್ದರೂ ಹೆಚ್ಚಾಗಿ ಹರಡುತ್ತಿದೆ ಅಂತಾ ವರದಿ ಹೇಳಿದೆ.
ಆರ್ಥಿಕ ಬಿಕ್ಕಟ್ಟು ಹೆಚ್ಚಳ
ಲೆಬನಾನ್ನಲ್ಲಿ ಕೊರೊನಾ ಸೋಂಕಿನಿಂದಾಗಿ 2,980 ಜನರು ಕಂಗಾಲ್ ಆಗಿದ್ರೆ, 41 ಜನರು ಸೋಂಕಿನಿಂದ ಉಸಿರು ಚೆಲ್ಲಿದ್ದಾರೆ. ವೈರಸ್ನಿಂದಾಗಿ ಲೆಬನಾನ್ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಿದೆ. ದೇಶದಲ್ಲಿ ಲೆಬನಾನ್‌ನ ದುರ್ಬಲ ಆರ್ಥಿಕ ಬಿಕ್ಕಟ್ಟು ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಕುಸಿತದ ಅಂಚಿಗೆ ತಂದಿದ್ದು, ಆಸ್ಪತ್ರೆಗಳೂ ಸಹ ಸಂಕಷ್ಟಕ್ಕೆ ಸಿಲುಕಿವೆಯಂತೆ.
Published On - 3:21 pm, Wed, 22 July 20