ಕೊಲ್ಕತ್ತಾ ಫೆಬ್ರುವರಿ 15: ಪಶ್ಚಿಮ ಬಂಗಾಳದ ಸಂದೇಶಖಾಲಿ (Sandeshkhali) ಗ್ರಾಮದ ಸ್ಥಳೀಯ ಮಹಿಳೆಯರ ದೇಹ ಮತ್ತು ಮೈಬಣ್ಣ ಬಗ್ಗೆ ಲೇವಡಿ ಮಾಡಿದ ತೃಣಮೂಲ ಕಾಂಗ್ರೆಸ್ (TMC) ಶಾಸಕ ನಾರಾಯಣ ಗೋಸ್ವಾಮಿ ಅವರನ್ನು ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಮಹಿಳೆಯರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಾಯಕರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟಿಸುತ್ತಿರುವ ಹೊತ್ತಲ್ಲೇ ಗೋಸ್ವಾಮಿ ಈ ರೀತಿ ಹೇಳಿ ವಿವಾದಕ್ಕೀಡಾಗಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಟಿಎಂಸಿಯ ನಾರಾಯಣ ಗೋಸ್ವಾಮಿ , ಸಂದೇಶಖಾಲಿಯ ಆದಿವಾಸಿ ಅಥವಾ ಬುಡಕಟ್ಟು ಮಹಿಳೆಯರನ್ನು ಅವರ ಮೈಕಟ್ಟು ಮತ್ತು ಮೈಬಣ್ಣದಿಂದ ಗುರುತಿಸಬಹುದು. ಆದರೆ, ಕ್ಯಾಮೆರಾ ಮುಂದೆ ಬಂದು ಕಿರುಕುಳ ನೀಡುತ್ತಿದ್ದಾರೆ ಆರೋಪಿಸಿದ ಮಹಿಳೆಯರು ಬೆಳ್ಳಗಿದ್ದಾರೆ. ಅವರು ಸ್ಥಳೀಯ ಆದಿವಾಸಿಗಳು ಎಂದು ನಾವು ಊಹಿಸಬಹುದೇ? ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಲಾಕೆಟ್ ಚಟರ್ಜಿ, ಗೋಸ್ವಾಮಿ ಹೇಳಿಕೆ ಸಂಪೂರ್ಣವಾಗಿ ನಾಚಿಕೆಗೇಡಿನ ಮತ್ತು ಅವಮಾನಕರ ಸಂಗತಿ ಎಂದಿದ್ದಾರೆ.
Utterly shameful and disgraceful!
TMC MLA Narayan Goswami’s crude remarks attacking the women of Sandeshkhali, clearly expresses his filthy mentality.
Belittling the tribal community and women based on their physical structure and skin color is a clear sign of the demented and… pic.twitter.com/tJmxVxdKNv
— Locket Chatterjee (@me_locket) February 14, 2024
ಟಿಎಂಸಿ ಶಾಸಕ ನಾರಾಯಣ ಗೋಸ್ವಾಮಿ ಅವರು ಸಂದೇಶಖಾಲಿಯ ಮಹಿಳೆಯರ ಬಗ್ಗೆ ಹೇಳಿರುವ ಮಾತು ಅವರ ಹೊಲಸು ಮನಸ್ಥಿತಿಯನ್ನು ವ್ಯಕ್ತಪಡಿಸುತ್ತದೆ. ಬುಡಕಟ್ಟು ಸಮುದಾಯ ಮತ್ತು ಮಹಿಳೆಯರನ್ನು ಅವರ ದೈಹಿಕ ರಚನೆ ಮತ್ತು ಚರ್ಮದ ಬಣ್ಣವನ್ನು ಆಧರಿಸಿ ಕೀಳಾಗಿ ಕಾಣುವುದು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಹೀನಾಯ ಮನಸ್ಥಿತಿ ಮತ್ತು ಜನಾಂಗೀಯ ರಾಜಕಾರಣದ ಸ್ಪಷ್ಟ ಸಂಕೇತವಾಗಿದೆ. ಕಪ್ಪು-ಬಿಳುಪು ವರ್ಣಭೇದ ನೀತಿ ಯಾವಾಗ ನಿಲ್ಲುತ್ತದೆ? ಎಂದು ಲಾಕೆಟ್ ಚಟರ್ಜಿ ಪ್ರಶ್ನಿಸಿದ್ದಾರೆ.
ಏತನ್ಮಧ್ಯೆ, ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ, ಬಿಜೆಪಿ ಶಾಸಕ ಮತ್ತು ಬಂಗಾಳದ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಗುರುವಾರ ಇತರ 30 ಶಾಸಕರು ಮತ್ತು ಮುಖಂಡರೊಂದಿಗೆ ಸಂದೇಶಖಾಲಿಗೆ ಭೇಟಿ ನೀಡಲು ಸಿದ್ಧರಾಗಿದ್ದಾರೆ.
ಬಿಜೆಪಿ ಮತ್ತು ಇತರ ಪ್ರತಿಪಕ್ಷಗಳ ಕಾರ್ಯಕರ್ತರು ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಸಂದೇಶಖಾಲಿ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗುರುವಾರ ಸಂದೇಶಖಾಲಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಅಧಿಕಾರಿ ತಿಳಿಸಿದ್ದಾರೆ. “ಫೆಬ್ರವರಿ 15 ರಂದು ನಾನು ಸ್ಥಳೀಯರನ್ನು ಭೇಟಿ ಮಾಡಲು ಸಂದೇಶಖಾಲಿ ಬ್ಲಾಕ್‌ಗೆ ಹೋಗುತ್ತೇನೆ ಎಂದು ಸೋಮವಾರ ಘೋಷಿಸಿದ್ದೇನೆ. ಪೊಲೀಸರು ನನ್ನನ್ನು ತಡೆಯಲು ಪ್ರಯತ್ನಿಸಬಾರದು” ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ನಿಯೋಗ ಕೂಡ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ, ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರು ನೇಮಿಸಿದ ಬಿಜೆಪಿಯ ಸತ್ಯಶೋಧನಾ ತಂಡವು ಗುರುವಾರ (ಫೆಬ್ರವರಿ 16) ಸಂದೇಶಖಾಲಿಗೆ ಭೇಟಿ ನೀಡಲಿದೆ.
ಪಶ್ಚಿಮ ಬಂಗಾಳದಲ್ಲಿ ‘ಜಂಗಲ್ ರಾಜ್’ ಚಾಲ್ತಿಯಲ್ಲಿದೆ ಎಂದು ಬಿಜೆಪಿ ಬುಧವಾರ ಆರೋಪಿಸಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಒತ್ತಾಯಿಸಿದೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಟಿಎಂಸಿ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ “ಸಂಪೂರ್ಣ ಅರಾಜಕತೆ ಮತ್ತು ಕಾನೂನುಬಾಹಿರ ವ್ಯವಸ್ಥೆ” ಇದೆ. ಮುಖ್ಯಮಂತ್ರಿ ಬ್ಯಾನರ್ಜಿ ಸಂದೇಶಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಶೋಷಣೆ ಮಾಡಿದ ಪಕ್ಷದ ಗೂಂಡಾಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂದೇಶಖಾಲಿಯಲ್ಲಿ ಸತತ ಏಳನೇ ದಿನವಾದ ಬುಧವಾರವೂ ಪ್ರತಿಭಟನೆ ಮುಂದುವರಿದಿದ್ದು, ಟಿಎಂಸಿ ನಾಯಕ ಶೇಖ್ ಶಾಜಹಾನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಗಣನೀಯ ಸಂಖ್ಯೆಯ ಮಹಿಳೆಯರು ಬೀದಿಗಿಳಿದಿದ್ದಾರೆ. ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಅವರ ಮನೆಯಲ್ಲಿ ಶೋಧ ನಡೆಸಲು ಹೋದ ಜಾರಿ ನಿರ್ದೇಶನಾಲಯದ (ಇಡಿ) ತಂಡವು ಗುಂಪೊಂದು ದಾಳಿ ಮಾಡಿದ ನಂತರ ಶೇಖ್ ಜನವರಿಯಿಂದ ತಲೆಮರೆಸಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ