ತೃಣಮೂಲ ಪಕ್ಷದ ಶಾಸಕನೊಬ್ಬ ತನ್ನದೇ ಪಕ್ಷದ ಮತ್ತೊಬ್ಬ ಶಾಸಕನಿಗೆ ‘ನಿನ್ನ ಮೂಳೆ ಮುರಿತೀನಿ’ ಅಂತ ಬೆದರಿಕೆ ಹಾಕಿದ್ದಾನೆ!
ಕಬೀರ್ ಅವರು ದೂಂಡಾವರ್ತನೆಗೆ ಪ್ರತಿಕ್ರಿಯೆ ನೀಡಿರುವ ಟಿಎಮ್ಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು, ಶೋಕಾಸ್ ನೋಟೀಸ್ ಅನ್ನು ಶಾಸಕನಿಗೆ ಜಾರಿಮಾಡಲಾಗಿದೆ ಎಂದು ಹೇಳಿದರು.
ಕೊಲ್ಕತ್ತಾ: ತೃಣಮೂಲ ಪಕ್ಷದ ನಾಯಕರು ಕೇವಲ ಬಿಜೆಪಿ ಮತ್ತು ಇತರ ವಿರೋಧಿ ಪಕ್ಷಗಳ ನಾಯಕರೊಂದಿಗೆ ಮಾತ್ರ ಹೊಡೆದಾಟ-ಬಡಿದಾಟ ಮಾಡುವುದಿಲ್ಲ, ತಮ್ಮ ತಮ್ಮೊಳಗೂ ಕಚ್ಚಾಡುತ್ತಾರೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್, ಜಿಲ್ಲೆಯಲ್ಲಿ ಇಬ್ಬರು ಟಿಎಮ್ಸಿ ಶಾಸಕರ ನಡುವೆ ನಡೆದ ಕಚ್ಚಾಟ ಈಗ ಬೆಳಕಿಗೆ ಬಂದಿದೆ. ಲಭ್ಯವಾಗಿರುವ ಮೂಲಗಳ ಪ್ರಕಾರ ಶುಕ್ರವಾರದಂದು ಟಿಎಮ್ಸಿಯ ಒಬ್ಬ ಶಾಸಕ ಮತ್ತೊಬ್ಬ ಶಾಸಕನಿಗೆ ‘ಮೂಳೆ ಮುರಿದುಹಾಕ್ತೀನಿ’ ಅಂತ ಹೇಳಿದ್ದಾನೆ! ಇವರಿಬ್ಬರ ನಡುವಿನ ಜಗಳದ ದೃಶ್ಯಗಳು ಟಿವಿ ಚ್ಯಾನೆಲ್ಗಳು ಬಿತ್ತರಿಸಿವೆ. ಮೊದಲ ಕಾಂಗ್ರೆಸ್ ಪಕ್ಷದಲ್ಲಿದ್ದ ಭರತ್ಪುರ್ನ ಟಿಎಮ್ಸಿ ಶಾಸಕ ಹುಮಾಯೂನ್ ಕಬೀರ್, ಮುರ್ಶಿದಾಬಾದ ಜಿಲ್ಲೆ ಮತ್ತು ಬಂಗಾಳದ ರಾಜಕಾರಣದಲ್ಲಿ ಬಹಳ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಇದೇ ಶಾಸಕ ತಮ್ಮ ಪಕ್ಷದ ಮತ್ತೊಬ್ಬ ಶಾಸಕನಿಗೆ ಬೆದರಿಕೆಯೊಡ್ಡುತ್ತಿರುವ ದೃಶ್ಯ ಟಿವಿಗಳಲ್ಲಿ ಬಿತ್ತರವಾಗಿದೆ.
‘ರೆಜಿನಗರದ ಶಾಸಕ ರಬಿಯುಲ್ ಆಲಮ್ಗೆ ಬಹಳ ಮದವೇರಿದಂತಿದೆ. ಹಾಗಾಗೇ, ದುರಹಂಕಾರದಿಂದ ವರ್ತಿಸಿತ್ತಿದ್ದಾನೆ. ನನ್ನ ತಂಟೆಗೆ ಬಂದರೆ ತಕ್ಕ ಶಾಸ್ತಿ ಮಾಡ್ತೀನಿ, ನಿನ್ನ ಮೂಳೆ ಮುರಿದುಹಾಕ್ತೀನಿ,’ ಅಂತ ಸಭೆಯೊಂದರಲ್ಲಿ ಕಬೀರ್ ಹೇಳುತ್ತಿದ್ದರೆ ಅಲ್ಲಿ ಹಾಜರಿದ್ದ ಅವರ ಬೆಂಬಲಲಿಗರು ಜೋರಾಗಿ ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದ್ದಾರೆ.
ಕಬೀರ್ ಅವರು ದೂಂಡಾವರ್ತನೆಗೆ ಪ್ರತಿಕ್ರಿಯೆ ನೀಡಿರುವ ಟಿಎಮ್ಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು, ಶೋಕಾಸ್ ನೋಟೀಸ್ ಅನ್ನು ಶಾಸಕನಿಗೆ ಜಾರಿಮಾಡಲಾಗಿದೆ ಎಂದು ಹೇಳಿದರು.
ಆಲಂ ಚೌಧುರಿ ಅವರನ್ನು ಉಲ್ಲೇಖಿಸುತ್ತಾ ಕಬೀರ್, ‘ನೀನು ಮತ್ತು ನಾನು ಒಂದೇ ಪಕ್ಷದ ಕಾರ್ಯಕರ್ತರಾಗಿದ್ದೇವೆ. ನಿನಗೆ ನೀರಿನಲ್ಲಿ ವಾಸ ಮಾಡುವ ಆಸೆಯಿದ್ದರೆ, ಮೊಸಳೆಯ ಜೊತೆ ಸೆಣಸುವ ಸಾಹಸಕ್ಕಿಳಿಯಬೇಡ,’ ಎಂದು ಹೇಳಿದ್ದಾರೆ.
ಕಬೀರ್ ಅವರೊಂದಿಗೆ ವಾಗ್ವಾದಕ್ಕಿಳಿಯಲು ಬಯಸದ ಚೌಧುರಿ ಅವರು ಸುದ್ದಿಗಾರರೊಂದಿಗೆ ಮಾತಾಡುತ್ತಾ, ‘ವಿಷಯವನ್ನು ನಾನು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ. ಅವರೇ ಒಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಮತಾ ಬ್ಯಾನರ್ಜಿ ಅವರ ಒಬ್ಬ ನಿಷ್ಠಾವಂತ ಯೋಧನಾಗಿ ಪಕ್ಷ ತೆಗದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ,’ ಎಂದು ಹೇಳಿದರು.
ಜಿಲ್ಲಾ ಟಿಎಮ್ ಸಿ ಮೂಲಗಳ ಪ್ರಕಾರ ಕಬೀರ್ ಮತ್ತು ಚೌಧುರಿ ನಡುವೆ ಬಹಳ ವರ್ಷಗಳಿಂದ ವೈಮನಸ್ಸಿದೆ. ಈ ಹಿಂದೆ ಅವರಿಬ್ಬರ ನಡುವೆ ರಾಜಿ ಮಾಡಿಸಲು ನಡೆದ ಪ್ರಯತ್ನಗಳು ವಿಫಲವಾಗಿವೆ.
ಟಿಎಮ್ಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಅವರು, ‘ಇಂಥ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ. ನಾವು ಇದನ್ನು ಖಂಡಿಸುತ್ತ್ತೇವೆ. ಕಬೀರ್ ಅವರಿಗೆ ಶೋಕಾಸ್ ನೋಟೀಸ್ ಜಾರಿಮಾಡಲಾಗಿದೆ. ಕಬೀರ್ ವರ್ತನೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ,’ ಎಂದು ಹೇಳಿದರು.
ಮಾಧ್ಯಮದವರು ಭರತ್ಪುರ್ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿದರಾದರೂ ಅವರು ಕರೆಗಳನ್ನು ಸ್ವೀಕರಿಸಲಿಲ್ಲ.
ಇದನ್ನೂ ಓದಿ: ಸೋನಿಯಾ ಗಾಂಧಿ-ಮಮತಾ ಬ್ಯಾನರ್ಜಿ ಭೇಟಿ, 45 ನಿಮಿಷ ಚರ್ಚೆ; 2024ರ ಹೊತ್ತಿಗೆ ಪ್ರಧಾನಿ ಮೋದಿ V/S ದೇಶ ಎಂದಾಗುತ್ತದೆ ಎಂದ ದೀದಿ