ದೆಹಲಿಯಲ್ಲಿ ತ್ರಿವಳಿ ಕೊಲೆ; ಅಪ್ಪ, ಅಮ್ಮ, ತಮ್ಮನನ್ನು ಕೊಂದು ಯುವಕ ಪರಾರಿ

ದೆಹಲಿಯಲ್ಲಿ ಪೋಷಕರು ಮತ್ತು ಸಹೋದರನನ್ನು ಕೊಂದ ಹುಡುಗ ಪರಾರಿಯಾಗಿದ್ದಾನೆ. ಅವನನ್ನು ಹಿಡಿಯಲು ಹುಡುಕಾಟ ನಡೆಸಲಾಗುತ್ತಿದೆ. ದೆಹಲಿಯ ಮೈದಾನ್ ಗರ್ಹಿ ಪ್ರದೇಶದಲ್ಲಿ ಆಘಾತಕಾರಿ ತ್ರಿವಳಿ ಕೊಲೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಅಪ್ಪ, ಅಮ್ಮ, ತಮ್ಮನನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಲ್ಲಿ ತ್ರಿವಳಿ ಕೊಲೆ; ಅಪ್ಪ, ಅಮ್ಮ, ತಮ್ಮನನ್ನು ಕೊಂದು ಯುವಕ ಪರಾರಿ
Delhi Murder

Updated on: Aug 20, 2025 | 10:29 PM

ನವದೆಹಲಿ, ಆಗಸ್ಟ್ 20: ದಕ್ಷಿಣ ದೆಹಲಿಯ (Delhi Crime) ಮೈದಾನ್ ಗರ್ಹಿ ಪ್ರದೇಶದ ಮನೆಯೊಂದರಲ್ಲಿ 3 ಶವಗಳು ಪತ್ತೆಯಾದ ನಂತರ ಈ ತ್ರಿವಳಿ ಕೊಲೆ ಸಂಚಲನ ಮೂಡಿಸಿದೆ. ಒಂದು ರೂಮಿನಲ್ಲಿ ಮಹಿಳೆಯೊಬ್ಬರು ಬಾಯಿ ಕಟ್ಟಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದು ಕೋಣೆಯಲ್ಲಿ, ರಕ್ತದ ಮಡುವಿನಲ್ಲಿ ಇಬ್ಬರು ವ್ಯಕ್ತಿಗಳು ಬಿದ್ದಿರುವುದು ಕಂಡುಬಂದಿದ್ದು, ಹತ್ಯೆಗೂ (Delhi Murder) ಮುನ್ನ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮನೆಯಿಂದ ದುರ್ವಾಸನೆ ಬರಲು ಪ್ರಾರಂಭಿಸಿದಾಗ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಅಪರಾಧ ಬೆಳಕಿಗೆ ಬಂದಿದೆ. ಮೈದಾನ್ ಗರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ಸತ್ಬರಿ ಖಾರ್ಕ್ ಗೋವಾದ ಮನೆ ಸಂಖ್ಯೆ 155ರಲ್ಲಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಮಂಗಳವಾರ ಮಧ್ಯಾಹ್ನ ಅಪರಾಧದ ಬಗ್ಗೆ ಮಾಹಿತಿ ಪಡೆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆ ಸ್ಥಳಕ್ಕೆ ತಲುಪಿದಾಗ ಪೊಲೀಸ್ ಅಧಿಕಾರಿಗಳಿಗೆ ಆ ಮನೆಯಲ್ಲಿ ಕುಟುಂಬದ ಮೂವರು ಸದಸ್ಯರ ಶವಗಳು ಪತ್ತೆಯಾಗಿವೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತ ದಂಪತಿಯ ಮಗನಾದ ಆರೋಪಿಯು ತನ್ನ ತಂದೆ, ತಾಯಿ ಮತ್ತು ತಮ್ಮನ ಮೇಲೆ ಹಲ್ಲೆ ನಡೆಸಿ, ಅವರನ್ನು ಕೊಂದು ಮನೆಯಿಂದ ಪರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ.

ಇದನ್ನೂ ಓದಿ: ಗೆಳೆಯನ ಹೆಂಡತಿಯನ್ನು ತಾನಿಟ್ಟುಕೊಂಡು ತನ್ನ ಪತ್ನಿಯನ್ನು ಆತನಿಗೆ ಕೊಟ್ಟ ಸ್ನೇಹಿತ!

ಆತ ಯಾವ ಕಾರಣಕ್ಕೆ ತಮ್ಮದೇ ಮನೆಯವರನ್ನು ಕೊಲೆ ಮಾಡಿದ್ದಾನೆ ಎಂಬುದರ ಹಿಂದಿನ ನಿಖರವಾದ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಜನಿ ಸಿಂಗ್ (45), ಪ್ರೇಮ್ ಸಿಂಗ್ (50) ಮತ್ತು ರಿತಿಕ್ (24) ಎಂದು ಗುರುತಿಸಲಾಗಿದೆ. ಈ ಕುಟುಂಬದ ಎರಡನೇ ಮಗ ಸಿದ್ಧಾರ್ಥ್ ಕೊಲೆಗಳ ನಂತರ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಸಿದ್ಧಾರ್ಥ್ ಮನೋವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾನೆ ಎಂದು ಸ್ಥಳೀಯ ವಿಚಾರಣೆಗಳಿಂದ ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:22 pm, Wed, 20 August 25