ಲಕ್ನೋ: ತನ್ನ ಪತಿ ತ್ರಿವಳಿ ತಲಾಖ್ (Triple Talaq) ನೀಡಿದ ಹಿನ್ನೆಲೆಯಲ್ಲಿ ನೊಂದ ಮುಸ್ಲಿಂ ಮಹಿಳೆಯೊಬ್ಬರು ಇದೀಗ ಹಿಂದೂ (Hindu) ಧರ್ಮವನ್ನು ಸ್ವೀಕರಿಸಿದ್ದಾರೆ. ರುಬಿನಾ ಎಂಬ ಹೆಸರನ್ನು ಪುಷ್ಪಾ ಎಂದು ಬದಲಾಯಿಸಿಕೊಂಡಿರುವ ಆ ಮಹಿಳೆ ಬರೇಲಿಯ ನವಾಬ್‌ಗಂಜ್‌ನಲ್ಲಿ ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ತನ್ನ ಮುಸ್ಲಿಂ ಗಂಡನ ಗೆಳೆಯನಾಗಿದ್ದ ಹಿಂದೂ ವ್ಯಕ್ತಿಯನ್ನೇ 2ನೇ ಬಾರಿಗೆ ಮದುವೆಯಾಗುವ ಮೂಲಕ ಆ ಮಹಿಳೆ ಅಚ್ಚರಿ ಮೂಡಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿ ನಿವಾಸಿ ಶೋಯೆಬ್ ಎಂಬಾತನ ಜೊತೆ ರುಬಿನಾ ಪ್ರೇಮ ಸಂಬಂಧ ಹೊಂದಿದ್ದರು. ಸುಮಾರು 9 ವರ್ಷಗಳ ಹಿಂದೆ ಇವರಿಬ್ಬರು ವಿವಾಹವಾಗಿದ್ದರು. ಮದುವೆಯಾದ ಕೆಲವು ವರ್ಷಗಳ ನಂತರ ದಂಪತಿಗಳ ನಡುವೆ ಜಗಳ ಪ್ರಾರಂಭವಾಯಿತು. ದಿನವೂ ಶೋಯೆಬ್ ರುಬಿನಾಳನ್ನು ಥಳಿಸುತ್ತಿದ್ದರು. ಆ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ.
ಇದನ್ನೂ ಓದಿ: ತ್ರಿವಳಿ ತಲಾಖ್ ಇನ್ನೂ ಇದೆಯಾ? ಗಂಡನ ವಿರುದ್ಧ ತ್ರಿವಳಿ ತಲಾಖ್ ಪ್ರಕರಣ ದಾಖಲಿಸಿದ ಕೊಪ್ಪಳ ಮಹಿಳೆ!
ಒಂದು ವಾರದ ಹಿಂದೆ ಶೋಯೆಬ್ ಮತ್ತು ರುಬಿನಾ ನಡುವೆ ಮತ್ತೆ ಜಗಳವಾಗಿತ್ತು. ಇದಾದ ನಂತರ ಆಕೆಯ ಪತಿ ಆಕೆಯ ಮೇಲೆ ಹಲ್ಲೆ ನಡೆಸಿ ತ್ರಿವಳಿ ತಲಾಖ್ ನೀಡಿದ್ದ. ರುಬಿನಾ 5 ವರ್ಷಗಳ ಹಿಂದೆ ಬರೇಲಿಯ ಹೊರವಲಯದಲ್ಲಿರುವ ನವಾಬ್‌ಗಂಜ್ ನಿವಾಸಿ ಪ್ರೇಂಪಾಲ್ ಅವರನ್ನು ಭೇಟಿಯಾಗಿದ್ದರು. ಅವರು ಕೂಡ ರುಬಿನಾಳ ಗಂಡನ ಸ್ನೇಹಿತರಾಗಿದ್ದರು. ಆಕೆಯ ಪತಿ ಆಕೆಗೆ ತ್ರಿವಳಿ ತಲಾಖ್ ನೀಡಿದ ನಂತರ ರುಬಿನಾ ಪ್ರೇಂಪಾಲ್ ಅವರನ್ನು ಮದುವೆಯಾಗಲು ನಿರ್ಧರಿಸಿದರು. ರುಬಿನಾ ಹಿಂದೂ ಧರ್ಮವನ್ನು ಸ್ವೀಕರಿಸಿ, ಪ್ರೇಂಪಾಲ್ ಅವರನ್ನು ಮದುವೆಯಾಗಿದ್ದಾರೆ. ಅಲ್ಲದೆ, ತನ್ನ ಹೆಸರನ್ನು ಪುಷ್ಪಾ ದೇವಿ ಎಂದು ಬದಲಾಯಿಸಿಕೊಂಡಿದ್ದಾರೆ.