ಕಾಶಿಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದ ಅಮೆರಿಕದ ಮುಸ್ಲಿಂ ದಂಪತಿ
ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗುವ ನಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಸ್ಥಳೀಯ ಅರ್ಚಕರಿಗೆ ಮತ್ತು ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಖಲೀಫಾ ಹೇಳಿದ್ದಾರೆ.
ವಾರಣಾಸಿ: ಮುಸ್ಲಿಂ ಸಮುದಾಯಕ್ಕೆ (Muslim) ಸೇರಿದ ಅಮೆರಿಕ ಪ್ರಜೆಯೊಬ್ಬರು 18 ವರ್ಷಗಳಿಂದ ತನ್ನೊಂದಿಗೆ ವಾಸಿಸುತ್ತಿರುವ ಗರ್ಲ್ಫ್ರೆಂಡ್ನ್ನು ಹಿಂದೂ ವಿವಾಹ ವಿಧಿಗಳ (Hindu rituals) ಪ್ರಕಾರ ಈ ಪುರಾತನ ಪಟ್ಟಣದ ಪ್ರಸಿದ್ಧ ತ್ರಿಲೋಚನ ದೇವಸ್ಥಾನದಲ್ಲಿ (Trilochan temple) ಶನಿವಾರ ವಿವಾಹವಾಗಿದ್ದಾರೆ. ಕಿಯಾಮಾ ದಿನ್ ಖಲೀಫಾ ಮತ್ತು ಅವರ ಗರ್ಲ್ಫ್ರೆಂಡ್ ಕೇಶಾ ಖಲೀಫಾ ಮುಸ್ಲಿಂ ಕುಟುಂಬಗಳಲ್ಲಿ ಹುಟ್ಟಿ ಬೆಳೆದಿದ್ದು, ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ತಮ್ಮ ನಿರ್ಧಾರ ಬಗ್ಗೆ ವಿಷಾದಿಸುವುದಿಲ್ಲ ಎಂದು ಕಿಯಾಮಾ ಹೇಳಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗುವ ನಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಸ್ಥಳೀಯ ಅರ್ಚಕರಿಗೆ ಮತ್ತು ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಖಲೀಫಾ ಹೇಳಿದ್ದಾರೆ. ಖಲೀಫಾ ಅವರು ವ್ಯಾಪಾರ ಮತ್ತು ಕೃಷಿ ಭೂಮಿಯನ್ನು ಹೊಂದಿದ್ದಾರೆ. ನಾವು ಕೊನೆಯ ಬಾರಿಗೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ವಾರಣಾಸಿಗೆ ಭೇಟಿ ನೀಡಿದಾಗ 5 ವರ್ಷಗಳ ಹಿಂದೆ ಸರಳವಾಗಿ ಮದುವೆಯಾಗುವ ಬಗ್ಗೆ ಯೋಚಿಸಿದೆವು ಎಂದು ಖಲೀಫಾ ಹೇಳಿದ್ದಾರೆ. “ನಮ್ಮ ಕೊನೆಯ ಪ್ರವಾಸವು ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು. ಆದರೆ ನಾವು ಈ ರೀತಿ ಮದುವೆಯಾಗುತ್ತೇವೆ ಎಂದು ಭಾವಿಸಿರಲಿಲ್ಲ. ಕೆಲವು ದಿನಗಳ ಹಿಂದೆ ನಾವು ವಾರಣಾಸಿಗೆ ನಮ್ಮ ಭೇಟಿಯನ್ನು ಯೋಜಿಸುತ್ತಿದ್ದಾಗ ನಾವು ಅದರ ಬಗ್ಗೆ ಮಾತನಾಡಿದಾಗ ನನ್ನ ಗೆಳತಿ ಸರಿ ಎಂದು ಒಪ್ಪಿದರು ಎಂದು ಖಲೀಫಾ ಹೇಳಿದ್ದಾರೆ.
ವಾರಣಾಸಿಗೆ ಭೇಟಿ ನೀಡಿದಾಗ ಖಲೀಫಾ ತನ್ನ ಗೈಡ್ ರಾಹುಲ್ ಕುಮಾರ್ ದುಬೆ ಅವರೊಂದಿಗೆ ವಿಷಯಗಳನ್ನು ಚರ್ಚಿಸಿದರು. ಅವರು ಮದುವೆಯನ್ನು ಆಯೋಜಿಸಲು ಸಹಾಯ ಮಾಡಿದರು. ನಾವು ಪ್ರತಿನಿತ್ಯ ಅನೇಕ ವಿದೇಶಿ ಪ್ರವಾಸಿಗರನ್ನು ಭೇಟಿಯಾಗುತ್ತೇವೆ. ಆದರೆ ದಂಪತಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಬಯಸಿದ್ದಾರೆ. ಅವರು ಈ ನಿರ್ಧಾರ ಬಗ್ಗೆ ಗಂಭೀರವಾಗಿರುವುದನ್ನು ನಾನು ತಿಳಿದಾಗ, ನಾನು ಅವರಿಗೆ ಸಹಾಯ ಮಾಡಲು ಯೋಚಿಸಿದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ವಿಧಿವಿಧಾನಗಳು ಮತ್ತು ಆಚರಣೆಗಳನ್ನು ಆಚರಿಸಲಾಗುತ್ತದೆ ಎಂದು ಖಚಿತಪಡಿಸಿದ ನಂತರ ಸನಾತನ ಧರ್ಮದ ಪ್ರಕಾರ ಮದುವೆ ಆಯೋಜಿಸಲಾಗಿದೆ ಎಂದು ದುಬೆ ಹೇಳಿದ್ದಾರೆ.