ಪಣಜಿ, ಸೆ.7: ಯಾವುದೇ ಮುನ್ಸೂಚನೆ ಇಲ್ಲದೆ ಸುನಾಮಿ ಎಚ್ಚರಿಕೆ ಸೈರನ್ (Tsunami warning sirens) ಹೊಡೆದಿದ್ದು, ಕಡಲ ತೀರದ ಜನರು ಆತಂಕಕ್ಕೆ ಒಳಲಾಗಿರುವ ಘಟನೆ ಗೋವಾದ (Goa) ಪಣಜಿಯಲ್ಲಿ ಬುಧವಾರ (ಸೆ.6) ನಡೆದಿದೆ. ಪೊರ್ವೊರಿಮ್‌ನಲ್ಲಿರುವ ಅರ್ಲಿ ವಾರ್ನಿಂಗ್ ಡಿಸೆಮಿನೇಷನ್ ಸಿಸ್ಟಮ್‌ನಿಂದ ಸುನಾಮಿಯ ಬಗ್ಗೆ ಎಚ್ಚರಿಕೆ ನೀಡುವ ಸೈರನ್ ತಪ್ಪಾಗಿ ಪ್ಲೇ ಆಗಿದ್ದು, ಇದು ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದೆ ಎಂದು ಅಧಿಕಾರಿಯೊಬ್ಬರು ಇಂದು (ಸೆ.7) ತಿಳಿಸಿದ್ದಾರೆ. ಬುಧವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ. ರಾತ್ರಿ ವೇಳೆ ಸುನಾಮಿಯ ಬಗ್ಗೆ ಎಚ್ಚರಿಕೆ ನೀಡುವ ಸೈರನ್ ಮೊಳಗಲು ಆರಂಭಿಸಿದ್ದು, 20 ನಿಮಿಷಕ್ಕೂ ಹೆಚ್ಚು ಕಾಲ ಈ ಸೈರನ್ ಕೂಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಈ ಸೈರನ್ ಕೂಗಲು ಕಾರಣ ಏನು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದು ತಾಂತ್ರಿಕ ದೋಷದಿಂದ ಅಥವಾ ಇನ್ನಾವುದೇ ಕಾರಣಕ್ಕೆ ಸೈರನ್ ಆಗಿದೆ ಎಂಬುದನ್ನು ತನಿಖೆ ನಡೆಸಲಾಗುತ್ತಿದ್ದು, ಈ ಬಗ್ಗೆ ವರದಿ ಕೇಳಿದ್ದೇವೆ ಎಂದು ರಾಜ್ಯ ಸಚಿವರೊಬ್ಬರು ತಿಳಿಸಿದ್ದಾರೆ. ಗೋವಾ ರಾಜಧಾನಿ ಪಣಜಿಯ ಹೊರವಲಯದಲ್ಲಿರುವ ಉತ್ತರ ಗೋವಾದ ಪೊರ್ವೊರಿಮ್‌ನಲ್ಲಿರುವ ಬೆಟ್ಟದ ಮೇಲೆ ಅರ್ಲಿ ವಾರ್ನಿಂಗ್ ಡಿಸೆಮಿನೇಷನ್ ಸಿಸ್ಟಮ್ (ಇಡಬ್ಲ್ಯೂಡಿಎಸ್) ಅನ್ನು ಸ್ಥಾಪಿಸಲಾಗಿದೆ. ಇಲ್ಲಿಂದ ಈ ಸೈರನ್ ಕೇಳಿ ಬಂದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಗೋವಾ ಜಿಲ್ಲಾಧಿಕಾರಿ ಮಾಮು ಹಗೆ, ‘ಸುನಾಮಿ ಕುರಿತು ಅಧಿಕಾರಿಗಳಿಂದ ಯಾವುದೇ ಮಾಹಿತಿ ಇಲ್ಲದ ಕಾರಣ ಇದೊಂದು ಸುಳ್ಳು ಎಚ್ಚರಿಕೆ’ ಎಂದು ಹೇಳಿದ್ದಾರೆ. ಇನ್ನು ಈ ಸೈರನ್ನ್ನು ಯಾವುದೇ ಪರಿಶೀಲನೆಗೆ ಅಥವಾ ಪ್ರಯೋಗಕ್ಕೆ ಬಳಸಿಲ್ಲ. ಸಮುದ್ರ ತೀರದ ಅಪಾಯದ ಬಗ್ಗೆ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದಿಂದಲ್ಲೂ(INCOIS) ಯಾವುದೇ ವರದಿ ಬಂದಿಲ್ಲ ಎಂದು ಡಿಸಿ ಹೇಳಿದ್ದಾರೆ.
ಇದನ್ನೂ ಓದಿ:ಗೋವಾದಿಂದ ಅಕ್ರಮವಾಗಿ ಸಾಗಿಸಲು ಯತ್ನ, 18 ವಿವಿಧ ನಮೂನೆ ಮದ್ಯ ಜಪ್ತಿ
ಇನ್ನು ಯಾವ ಕಾರಣಕ್ಕೆ ಈ ಸೈರನ್ ಮಾಡಲಾಗಿದೆ ಎಂಬ ಬಗ್ಗೆ ವರದಿ ನೀಡಲು ರಾಜ್ಯ ಜಲಸಂಪನ್ಮೂಲ ಇಲಾಖೆ (WRD)ಗೆ ನಿರ್ದೇಶನ ನೀಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಅವಿನಾಶ್ ಆರ್, ರಾತ್ರಿ ಊಟ ಮುಗಿಸಿ ವಾಕಿಂಗ್ ಹೊರಟಿದ್ದ ನಮಗೆ ಸೈರನ್ ಸದ್ದು ಕೇಳಿಸಿದಾಗ ಒಂದು ಗಾಬರಿಯಾಗಿದೆ. ನಂತರ ಇದು ಪ್ರಯೋಗ ನಡೆಸಲು ಹಾಕಿರಬಹುದು ಎಂದು ತಿಳಿದುಕೊಂಡಿದ್ದೇವು ಎಂದು ಹೇಳಿದ್ದಾರೆ.
Published On - 4:51 pm, Thu, 7 September 23