ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಏಪ್ರಿಲ್ 1 ರಿಂದ ವೆಂಕಟೇಶ್ವರನ ಬೆಟ್ಟಕ್ಕೆ ಚಾರಣ ಮಾಡುವ ಭಕ್ತರಿಗೆ ದಿವ್ಯ ದರ್ಶನ ಟೋಕನ್‌ಗಳ ವಿತರಣೆಯನ್ನು ಪುನರಾರಂಭಿಸಲು ನಿರ್ಧರಿಸಿದೆ. ಒಂದು ವಾರದವರೆಗೆ ಪ್ರಾಯೋಗಿಕ ಆಧಾರದ ಮೇಲೆ ಟೋಕನ್‌ಗಳನ್ನು ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮಾ ರೆಡ್ಡಿ ಅವರು, ಭಕ್ತರಿಗೆ ದಿವ್ಯ ದರ್ಶನ ಟೋಕನ್‌ಗಳ ವಿತರಣೆಯನ್ನು ಪುನರಾರಂಭಿಸಲು ನಿರ್ಧರಿಸಿದ್ದೇವೆ ಹಾಗೂ ಬೇಸಿಗೆಯಲ್ಲಿ ತಿರುಮಲಕ್ಕೆ ಬರುವ ಭಕ್ತದಿಗಳಿಗೆ ಅನೇಕ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದರು.
ಸಾಮಾನ್ಯವಾಗಿ, ಏಪ್ರಿಲ್ 15ರಿಂದ ಜುಲೈ 15ರ ನಡುವೆ ಯಾತ್ರಿಕರ ಸಂಖ್ಯೆ ಗರಿಷ್ಠವಾಗಿರುತ್ತದೆ. ವಿಐಪಿ ಬ್ರೇಕ್ ದರ್ಶನ ಮತ್ತು ಎಸ್‌ಇಡಿ (ತಲಾ ₹ 300 ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳು) ಟಿಕೆಟ್‌ಗಳ ವಿತರಣೆಯನ್ನು ಕಡಿಮೆ ಮಾಡಲು ಟಿಟಿಡಿ ನಿರ್ಧರಿಸಿದೆ, ಶ್ರೀವಾಣಿ, ಪ್ರವಾಸೋದ್ಯಮ ಮತ್ತು ವರ್ಚುವಲ್ ಸೇವಾ ಕೋಟಾಗಳನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಇದೆಲ್ಲವೂ ಸಾಮಾನ್ಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಕ್ರಮದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಅದಲ್ಲದೆ ಸಾಮಾನ್ಯ ಭಕ್ತರಿಗೆ ತ್ವರಿತ ದರ್ಶನಕ್ಕೆ ಅನುಕೂಲವಾಗುವಂತೆ ದೇವಾಲಯದ ಆಡಳಿತದೊಂದಿಗೆ ಸಹಕರಿಸುವಂತೆ ಟಿಟಿಡಿ ಅಧ್ಯಕ್ಷರು ವಿಐಪಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಮ ಮಂದಿರದ ಹೊರಗೆ ಭುಗಿಲೆದ್ದ ಘರ್ಷಣೆ, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ
ನಿತ್ಯ ಅನ್ನ ಪ್ರಸಾದದ ಅಂಗವಾಗಿ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಮತ್ತು ಹಳೆ ಅನ್ನದಾನ ಸಂಕೀರ್ಣಗಳು, ಯಾತ್ರಾರ್ಥಿ ಸೌಕರ್ಯಗಳ ಸಂಕೀರ್ಣಗಳು-II ಮತ್ತು IV, ನಾರಾಯಣಗಿರಿ ಸರತಿ ಸಾಲುಗಳು ಮತ್ತು ಸರತಿ ಕಂಪಾರ್ಟ್‌ಮೆಂಟ್‌ಗಳಲ್ಲಿ ಉಚಿತ ಆಹಾರ ವಿತರಣೆಯನ್ನು ಮಾಡಲಾಗುತ್ತದೆ, ಜೊತೆಗೆ ಎಲ್ಲಾ ವಾಂಟೇಜ್ ಪಾಯಿಂಟ್‌ಗಳಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಇಡಲು ವ್ಯವಸ್ಥೆ ಮಾಡಲಾಗಿದೆ. ಮೇಲ್ವಿಚಾರಣಾ ಕಾರ್ಯಕ್ಕಾಗಿ ಹೆಚ್ಚಿನ ಅಧಿಕಾರಿಗಳಿರುವ ತಂಡ ರಚಿಸಿ ಹೆಚ್ಚುವರಿ ಸೇವಾ ಸ್ವಯಂಸೇವಕರನ್ನು ಯಾತ್ರಿಗಳಿಗೆ ಸಂಬಂಧಿಸಿದ ಸೇವೆಗಳನ್ನು ಸುಗಮವಾಗಿ ನಿರ್ವಹಿಸಲು ನೇಮಕ ಮಾಡಲಾಗುವುದು ಎಂದು ಶ್ರೀ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.
ಲೇಖನ: ಪ್ರೀತಿ ಭಟ್, ಗುಣವಂತೆ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:23 pm, Thu, 30 March 23