ವಿಶಾಖಪಟ್ಟಣಂ: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ ವಿಶೇಷ ಕರ್ತವ್ಯ ಅಧಿಕಾರಿ ಆಗಿದ್ದ ಪಿ.ಶೇಷಾದ್ರಿ (74) ಇಂದು ಮುಂಜಾನೆ ವಿಶಾಖಪಟ್ಟಣಂನಲ್ಲಿ ನಿಧನರಾದರು. ಇವರು ಡಾಲರ್ ಶೇಷಾದ್ರಿ ಎಂದೇ ಜನಪ್ರಿಯರಾಗಿದ್ದರು. ಹಲವು ದಶಕಗಳಿಂದಲೂ ಅವರು ಟಿಟಿಡಿಯಲ್ಲೇ ಇದ್ದರು. ಹಾಗೇ, ಟಿಟಿಡಿ ವತಿಯಿಂದ ವಿಶಾಖಪಟ್ಟಣಂನಲ್ಲಿ ಆಯೋಜಿಸಿದ್ದ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳಿದ್ದಾಗ ನಿಧನರಾಗಿದ್ದಾರೆ.
ಸೋಮವಾರ ಮುಂಜಾನೆ ಹೊತ್ತಿಗೆ ಅವರಿಗೆ ಹೃದಯ ಸ್ತಂಭನವಾಗಿದೆ. ಕೂಡಲೇ ಅವರನ್ನು ರಾಮನಗರದಲ್ಲಿರುವ ಕಾರ್ಪೋರೇಟ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಮೃತದೇಹವನ್ನು ಏರ್ಲಿಫ್ಟ್ ಮೂಲಕ ತಿರುಪತಿಗೆ ತರಲಾಗುವುದು ಎಂದು ಹೇಳಲಾಗಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದೆ.
ಡಾಲರ್ ಶೇಷಾದ್ರಿ 1978ರಲ್ಲಿ ಟಿಟಿಡಿಯನ್ನು ಸೇರ್ಪಡೆಗೊಂಡರು. 2007ರಲ್ಲಿ ಅವರು ನಿವೃತ್ತರಾದರೂ ಕೂಡ ಅವರ ಕಾರ್ಯವೈಖರಿಯನ್ನು ನೋಡಿ, ಅಲ್ಲಿಯೇ ತಮ್ಮ ಸೇವೆ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಅವರ ನಿಧನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಹಾಗೇ, ಟಿಡಿಪಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಸಂತಾಪ ಸೂಚಿಸಿದ್ದು, ಟಿಟಿಡಿಯ ಒಎಎಸ್ಡಿ ಶೇಶಾದ್ರಿ ನಿಧನ ದುಃಖ ತಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೆಯ ಅಲೆ ಮುನ್ನೆಲೆ ಸರ್ಕಾರದ ಮುಂದೆ ಲಾಕ್‌ಡೌನ್ ಪ್ರಸ್ತಾವನೆ ಇಲ್ಲ -ಸಚಿವ ಡಾ. ಕೆ. ಸುಧಾಕರ್