ಮುಂಬೈ: ಐಪಿಎಸ್ ಅಧಿಕಾರಿಯಾಗಿ ನೇಮಕಗೊಳಿಸುವುದಾಗಿ ಭರವಸೆ ನೀಡಿ 3.5 ಕೋಟಿ ರೂ.ಗೆ ವಂಚನೆ ಮಾಡಿದ್ದ ಟಿವಿ ನಟಿ ಸಪ್ನಾ ರಹಾನ್ (28) ಮತ್ತು ಅವರ ಪತಿ ಪುನೀತ್ ಕುಮಾರ್ ರಹಾನ್ (26) ದಂಪತಿಯನ್ನು ಬಂಧಿಸಲಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಭಾನುವಾರ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ.
ಸಪ್ನಾ ರಹಾನ್ ಟಿವಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಹೀಗಾಗಿ ಅವರಿಗೆ ಅನೇಕ ಪ್ರಭಾವಿಗಳ ಪರಿಚಯವಿರುತ್ತೆ ಎಂದು ವ್ಯಕ್ತಿಯೊಬ್ಬ ಇವರನ್ನು ನಂಬಿದ್ದ. ಈ ನಂಬಿಕೆಯನ್ನೇ ಅದಾಯ ಮಾಡಿಕೊಳ್ಳಲು ಹೋಗಿ ಸಪ್ನಾ ರಹಾನ್ ಮತ್ತು ಅವರ ಪತಿ ಪುನೀತ್ ಇಂತಹ ವಂಚನೆ ಮಾಡಿದ್ದಾರೆ. ವ್ಯಕ್ತಿಯನ್ನು ಐಪಿಎಸ್ ಅಧಿಕಾರಿಯಾಗಿ ನೇಮಕ ಮಾಡಿ ಜಲಂಧರ್‌ನಲ್ಲಿ ಪೋಸ್ಟಿಂಗ್ ಮಾಡಿಸುವುದಾಗಿ ಭರವಸೆ ನೀಡಿ ಬರೊಬ್ಬರಿ 3.5 ಕೋಟಿ ರೂ. ವಂಚನೆ ಮಾಡಿದ್ದಾರೆ. ಈ ಕುರಿತು ಪಂಜಾಬ್‌ನ ಜಲಂಧರ್‌ನಲ್ಲಿ ದಂಪತಿಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.
ಪಂಜಾಬ್ ವಂಚನೆ-ವಿರೋಧಿ ಘಟಕವು (Punjab Police anti-fraud unit) ಮುಂಬೈ ಪೊಲೀಸರನ್ನು ಸಂಪರ್ಕಿಸಿ ತನಿಖೆಗೆ ಸಹಾಯ ಮಾಡಲು ಕೇಳಿದೆ. ನಂತರ ಒಶಿವಾರಾ ಪ್ರದೇಶದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದಾರೆ. ಇದಾದ ನಂತರ ಪಂಜಾಬ್ ಪೊಲೀಸರು ತಮ್ಮ ಆರೋಪಿಗಳನ್ನು ರಿಮಾಂಡ್ ಪಡೆದು ಜಲಂಧರ್‌ಗೆ ಕರೆದೊಯ್ದಿದ್ದಾರೆ ಎಂದು ಇನ್ಸ್‌ಪೆಕ್ಟರ್ ವಿನಯ್ ಘೋರ್ಪುಡೆ ತಿಳಿಸಿದ್ದಾರೆ.
ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿರುವ ಸಪ್ನಾ ಮತ್ತು ಆಕೆಯ ಪತಿಯನ್ನು ಜಲಾಂಧರ್ ಪೊಲೀಸರು ಮೋಸ, ನಂಬಿಕೆ ಉಲ್ಲಂಘನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಸಮಯದಲ್ಲಿ, ದಂಪತಿ ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ನಕಲಿ ನೇಮಕಾತಿ ಪತ್ರಗಳನ್ನು ವಂಚನೆಗೆ ಒಳಗಾದ ವ್ಯಕ್ತಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಗಂಡ-ಹೆಂಡತಿ ವಿರುದ್ಧ ಜಲಂಧರ್ ಮ್ಯಾಜಿಸ್ಟ್ರೇಟ್ ಜಾಮೀನು ರಹಿತ ವಾರಂಟ್ ಹೊರಡಿಸಿದರೂ ಪೊಲೀಸರು ಅವರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.