8 ಪಿಸ್ತೂಲ್, 350 ಕೆಜಿ ಸ್ಫೋಟಕ, 12 ಸೂಟ್​​ಕೇಸ್; ಫರಿದಾಬಾದ್‌ ವೈದ್ಯರ ಪ್ರಕರಣಕ್ಕೆ ಹೊಸ ತಿರುವು

ಫರಿದಾಬಾದ್‌ನಲ್ಲಿ ನಡೆದ ಪ್ರಮುಖ ಭದ್ರತಾ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರ ತಂಡವು ಧೌಜ್ ಗ್ರಾಮದ ಬಾಡಿಗೆ ಅಪಾರ್ಟ್​​ಮೆಂಟ್​​​ನಿಂದ 350 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಇದರ ಜೊತೆಗೆ AK-47 ರೈಫಲ್, ಒಂದು ಪಿಸ್ತೂಲ್, 3 ಮ್ಯಾಗಜೀನ್‌ಗಳು, 20 ಟೈಮರ್‌ಗಳು, ಒಂದು ವಾಕಿ-ಟಾಕಿ ಸೆಟ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ವೈದ್ಯನನ್ನು ಸಹ ಬಂಧಿಸಲಾಗಿದೆ.

8 ಪಿಸ್ತೂಲ್, 350 ಕೆಜಿ ಸ್ಫೋಟಕ, 12 ಸೂಟ್​​ಕೇಸ್; ಫರಿದಾಬಾದ್‌ ವೈದ್ಯರ ಪ್ರಕರಣಕ್ಕೆ ಹೊಸ ತಿರುವು
Dr Muzamil Shakeel

Updated on: Nov 10, 2025 | 4:39 PM

ನವದೆಹಲಿ, ನವೆಂಬರ್ 10: ಫರಿದಾಬಾದ್‌ನಲ್ಲಿ ನಡೆದ ಬೃಹತ್ ಸ್ಫೋಟಕಗಳ ಸಾಗಣೆಗೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಫರಿದಾಬಾದ್​​​ನಲ್ಲಿರುವ (Faridabad) ವೈದ್ಯ ಮುಜಮ್ಮಿಲ್ ಶಕೀಲ್ ಎಂಬಾತನ ಮನೆಯಿಂದ 350 ಕೆಜಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಸಾಲ್ಟ್ ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಲಾದ ಕಾರು ಫರಿದಾಬಾದ್ ಆಸ್ಪತ್ರೆಯ ಡಾ. ಮುಜಮ್ಮಿಲ್ ಶಕೀಲ್ ಜೊತೆ ಕೆಲಸ ಮಾಡುತ್ತಿರುವ ಮಹಿಳಾ ವೈದ್ಯರಿಗೆ ಸೇರಿದೆ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಮೂಲಕ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಫರಿದಾಬಾದ್‌ನ ಕೋಡ್ HR 51ರಿಂದ ಪ್ರಾರಂಭವಾಗುವ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಪೊಲೀಸರು ಶಕೀಲ್​ನನ್ನು ಪ್ರಶ್ನಿಸಿದ ನಂತರ ಶೋಧಿಸಲಾಯಿತು. ಇದಾದ ನಂತರ ಪೊಲೀಸರಿಗೆ ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾದ 350 ಕೆಜಿ ಸ್ಫೋಟಕ ವಸ್ತು, 20 ಟೈಮರ್‌ಗಳು ಮತ್ತು ಇತರ ಅನುಮಾನಾಸ್ಪದ ವಸ್ತುಗಳು ಕೂಡ ಸಿಕ್ಕಿತು. ಆತನ ಬಾಡಿಗೆ ಮನೆಯಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಫರೀದಾಬಾದ್​ನಲ್ಲಿ 300ಕೆಜಿ ಆರ್​ಡಿಎಕ್ಸ್​, ಎಕೆ-47, ಮದ್ದುಗುಂಡುಗಳು ಪತ್ತೆ

ತನಿಖಾಧಿಕಾರಿಗಳ ಪ್ರಕಾರ, ಶಕೀಲ್ ಕಳೆದ 3 ವರ್ಷಗಳಿಂದ ಫರಿದಾಬಾದ್‌ನ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ಹಿರಿಯ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಆತ ಧೋಜ್‌ನಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದ. 10 ದಿನಗಳ ಹಿಂದೆ ಪೊಲೀಸರು ತಮ್ಮ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಆತನನ್ನು ಬಂಧಿಸಲಾಯಿತು. ಈ ಕುರಿತಾದ ವಿಚಾರಣೆಯ ಸಮಯದಲ್ಲಿ ಬಾಡಿಗೆ ರೂಂ ಮತ್ತು ತನ್ನ ಸಹೋದ್ಯೋಗಿಗೆ ಸೇರಿದ ಸ್ವಿಫ್ಟ್ ಕಾರಿನ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು.

ಇದರಿಂದ ಪೊಲೀಸರು ದಾಳಿ ನಡೆಸಿದಾಗ 8 ದೊಡ್ಡ ಸೂಟ್‌ಕೇಸ್‌ಗಳು ಮತ್ತು 4 ಸಣ್ಣ ಸೂಟ್‌ಕೇಸ್‌ಗಳು ಸ್ಫೋಟಕ ವಸ್ತುಗಳಿಂದ ತುಂಬಿದ್ದವು. ಅದು ಅಮೋನಿಯಂ ನೈಟ್ರೇಟ್ ಆಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಇದಾದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಹರಿಯಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಾರಿನಿಂದ ಎಕೆ -74 ಅಸಾಲ್ಟ್ ರೈಫಲ್, ಮ್ಯಾಗಜೀನ್‌ಗಳು, 83 ಲೈವ್ ಗುಂಡುಗಳು, ಒಂದು ಪಿಸ್ತೂಲ್, 8 ಲೈವ್ ಗುಂಡುಗಳು, 2 ಖಾಲಿ ಕಾರ್ಟ್ರಿಡ್ಜ್‌ಗಳು ಮತ್ತು 2 ಹೆಚ್ಚುವರಿ ಮ್ಯಾಗಜೀನ್‌ಗಳನ್ನು ವಶಪಡಿಸಿಕೊಂಡರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿದ್ದುಕೊಂಡು ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್ ಸಯೀದ್ ಪ್ಲ್ಯಾನ್?

ಪೊಲೀಸರ ಪ್ರಕಾರ, 350 ಕೆಜಿ ಸ್ಫೋಟಕ ವಸ್ತು ಸುಮಾರು ಎರಡು ವಾರಗಳ ಹಿಂದೆ ಶಕೀಲ್‌ಗೆ ತಲುಪಿದೆ. ಅವನಿಗೆ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯ ಬಳಿ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳು ಏಕೆ ಸಂಗ್ರಹವಾಗಿದ್ದವು ಎಂಬುದು ಇನ್ನೂ ಪತ್ತೆಯಾಗಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳು ದೆಹಲಿಯ ಹತ್ತಿರ ಹೇಗೆ ತಲುಪಿದವು ಎಂಬುದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಉತ್ತರ ಪ್ರದೇಶದ ಸಹರಾನ್‌ಪುರದಿಂದ ಮತ್ತೊಬ್ಬ ವೈದ್ಯ ಡಾ. ಅದೀಲ್ ಅಹ್ಮದ್ ರಾಥರ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರ ವಿಚಾರಣೆಯ ಸಮಯದಲ್ಲಿ ದೊರೆತ ನಿರ್ಣಾಯಕ ಸುಳಿವುಗಳ ಆಧಾರದ ಮೇಲೆ ಈ ದಾಳಿ ನಡೆಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ