ವಿಶಾಖಪಟ್ಟಣಂ: ಆಂಧ್ರಪ್ರದೇಶ-ಒಡಿಶಾ ಗಡಿ ಸಿಲೇರು ನದಿಯಲ್ಲಿ ಸೋಮವಾರ ರಾತ್ರಿ ದುರ್ಘಟನೆಯೊಂದು ಸಂಭವಿಸಿದೆ. ಸಿಲೇರು ನದಿಯಲ್ಲಿ ಎರಡು ದೋಣಿಗಳು ಮುಳುಗಿದ್ದು 10 ತಿಂಗಳ ಪುಟ್ಟ ಮಗುವಿನ ಶವ ಪತ್ತೆಯಾಗಿದೆ. ದೋಣಿಗಳಲ್ಲಿದ್ದ 8 ಕೂಲಿ ಕಾರ್ಮಿಕರು ನೀರುಪಾಲಾಗಿದ್ದಾರೆ.
ವರದಿಗಳ ಪ್ರಕಾರ, ವೈಜಾಗ್ ಏಜೆನ್ಸಿಯ ಎರಡು ದೋಣಿಗಳಲ್ಲಿ ಒಟ್ಟು 13 ಜನ ಪ್ರಯಾಣ ಮಾಡುತ್ತಿದ್ದರು. ಇವರೆಲ್ಲ ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಕಾರಣ ಸ್ವಗ್ರಾಮಕ್ಕೆ ಹಿಂತಿರುಗುವಾಗ ಈ ಘಟನೆ ನಡೆದಿದೆ.
ಪ್ರಯಾಣ ಶುರು ಮಾಡಿದ ಕೆಲವೇ ಗಂಟೆಗಳಲ್ಲಿ ಒಂದು ದೋಣಿ ಮುಳುಗಿದೆ. ಈ ವೇಳೆ ಮುಳುಗಿದ ದೋಣಿಯಲ್ಲಿದ್ದ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಎರಡನೇ ದೋಣಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆಗ ಎರಡನೇ ದೋಣಿಯೂ ಮುಳುಗಿದೆ. ಒಟ್ಟು 13 ಜನರ ಪೈಕಿ ನಾಲ್ವರು ಈಜಿ ದಡವನ್ನು ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. 10 ತಿಂಗಳ ಮಗುವಿನ ಶವ ಪತ್ತೆಯಾಗಿದೆ. ಉಳಿದ 8 ಜನರು ನಾಪತ್ತೆಯಾಗಿದ್ದು ನೀರುಪಾಲಾದ ಕೂಲಿ ಕಾರ್ಮಿಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ನಾಪತ್ತೆಯಾದವರು ಮಲ್ಕಾನಗಿರಿ ಪ್ರದೇಶದ ಗುಂಟವಾಡ, ಕೆಂದಗುಡಾ ಗ್ರಾಮದವರು ಎನ್ನಲಾಗಿದೆ. ನಾಪತ್ತೆಯಾದ ಕುಟುಂಬಸ್ಥರ ರೋಧನೆ, ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಮಂಗಳೂರು ದೋಣಿ ದುರಂತ ಪ್ರಕರಣ; ಈಜಿ ದಡ ಸೇರಿದ ಮತ್ತೊಬ್ಬ ಯುವಕ