ಬಾಗಿಲು ಲಾಕ್ ಮಾಡಿಕೊಂಡು, ಪ್ಲಾಸ್ಟಿಕ್ ಕುರ್ಚಿಯಿಂದ ಥಳಿಸಿದರು; ಕೇಂದ್ರ ಸಚಿವರ ವಿರುದ್ಧ ಇಬ್ಬರು ಅಧಿಕಾರಿಗಳಿಂದ ಗಂಭೀರ ಆರೋಪ
ಅಧಿಕಾರಿಗಳ ಆರೋಪವನ್ನು ಕೇಂದ್ರ ಸಚಿವ ಬಿಶ್ವೇಶ್ವರ್ ಟುಡು ಅಲ್ಲಗಳೆದಿದ್ದಾರೆ. ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ಗೌರವ ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಕೇಂದ್ರ ಬುಡಕಟ್ಟು ವ್ಯವಹಾರಗಳು ಮತ್ತು ಜಲ ಶಕ್ತಿ ಇಲಾಖೆ ರಾಜ್ಯ ಸಚಿವ ಬಿಶ್ವೇಶ್ವರ್ ಟುಡು ವಿರುದ್ಧ ಇಬ್ಬರು ಸರ್ಕಾರಿ ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ಈ ಸಚಿವರು ಮೂಲತಃ ಒಡಿಶಾದವರೇ ಆಗಿದ್ದಾರೆ. ಇದೀಗ ಒಡಿಶಾದ ಮಯೂರ್ಭಂಜ್ ಜಿಲ್ಲಾ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳ ಮೇಲೆ ಕುರ್ಚಿಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ಅಧಿಕಾರಿಗಳೇ ಕೇಂದ್ರ ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ. ಅಂದಹಾಗೆ ಇವರು ಮಯೂರ್ಭಂಜ್ ಲೋಕಸಭಾ ಕ್ಷೇತ್ರದ ಸಂಸದರೇ ಆಗಿದ್ದು, ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಸಂಪುಟ ಸೇರಿದ್ದಾರೆ.
ಜಿಲ್ಲಾ ಯೋಜನಾ ಮತ್ತು ನಿಗಾ ಘಟಕದ ಉಪನಿರ್ದೇಶಕ ಅಶ್ವಿನಿ ಕುಮಾರ್ ಮಲ್ಲಿಕ್ ಮತ್ತು ಸಹಾಯಕ ನಿರ್ದೇಶಕ ದೇಬಶಿಶ್ ಮಹಾಪಾತ್ರ ಹಲ್ಲೆಗೊಳಗಾದ ಅಧಿಕಾರಿಗಳಾಗಿದ್ದು, ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ಸಚಿವ ಬಿಶ್ವೇಶ್ವರ್ ಟುಡು ಶುಕ್ರವಾರ ನಮ್ಮನ್ನು ಬರಿಪದದಲ್ಲಿರುವ ಬಿಜೆಪಿ ಕಚೇರಿಗೆ ಕರೆಸಿದರು. ಸಚಿವರ ಮನೆ ಕೂಡ ಅಲ್ಲಿಯೇ ಇದೆ. ಪರಿಶೀಲನಾ ಸಭೆ ನಡೆಸುವ ಸಲುವಾಗಿ ನಮ್ಮನ್ನು ಬರಹೇಳಿದ್ದರು. ಅಂತೆಯೇ ನಾವೂ ಕೂಡ ಅಲ್ಲಿಗೆ ಹೋಗಿದ್ದೆವು. ಸಭೆಯ ವೇಳೆ ಕೆಲವು ಫೈಲ್ಗಳನ್ನು ಕೇಳಿದರು. ನಾವದನ್ನು ತೆಗೆದುಕೊಂಡು ಹೋಗಿರಲಿಲ್ಲ. ಅಷ್ಟಕ್ಕೇ ಸಿಟ್ಟಿಗೆದ್ದ ಕೇಂದ್ರ ಸಚಿವರು, ಸಭೆ ನಡೆಯುತ್ತಿದ್ದ ಹಾಲ್ನ ಬಾಗಿಲನ್ನು ಒಳಗಿನಿಂದ ಹಾಕಿಕೊಂಡು ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿದರು. ಕುರ್ಚಿಯಿಂದಲೂ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇವರಲ್ಲಿ ದೇಬಶಿಶ್ ಮಹಾಪಾತ್ರ ಕೈಯಿಗೆ ಫ್ರ್ಯಾಕ್ಚರ್ ಬಂದಿದ್ದು, ಅಶ್ವಿನಿ ಮಲ್ಲಿಕ್ರಿಗೂ ಗಂಭೀರ ಗಾಯಗಳಾಗಿವೆ. ಇವರಿಬ್ಬನ್ನೂ ಕೂಡ ಬರಿಪದದಲ್ಲಿರುವ ಪಿಆರ್ಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ, ಅಧಿಕಾರಿಗಳು ಇಬ್ಬರೂ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಅನ್ವಯ ಕೇಂದ್ರ ಸಚಿವ ಬಿಶ್ವೇಶ್ವರ್ ಟುಡು ವಿರುದ್ಧ ಬರಿಪದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಘಟನೆಯನ್ನು ವಿವರಿಸಿದ ದೇಬಶಿಶ್ ಮೋಹಪಾತ್ರಾ, ಕೇಂದ್ರ ಸಚಿವರು ಮೊದಲು ನಮ್ಮನ್ನು ದೂಷಿಸಿದರು. ನಾವಿಬ್ಬರೂ ಶಿಷ್ಟಾಚಾರ ಪಾಲನೆ ಮಾಡಲಿಲ್ಲ ಎಂದು ಆರೋಪ ಮಾಡಿದರು. ಕೆಲವೇ ದಿನಗಳಲ್ಲಿ ಇಲ್ಲಿ ಪಂಚಾಯತ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ನಾವು ಕಡತಗಳನ್ನು ನಿಮ್ಮ ಕಚೇರಿಗೆ ತಂದಿದ್ದರೆ ಅದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿತ್ತು ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲು ತುಂಬ ಪ್ರಯತ್ನ ಪಟ್ಟೆವು. ಆದರೆ ಅವರು ಯಾವ ಮಾತುಗಳನ್ನೂ ಕೇಳವು ಸ್ಥಿತಿಯಲ್ಲೇ ಇರಲಿಲ್ಲ. ನಮಗೆ ಹೊಡೆಯಲು ಪ್ರಾರಂಭ ಮಾಡಿದರು ಎಂದಿದ್ದಾರೆ. ಇನ್ನೊಬ್ಬ ಅಧಿಕಾರಿ ಅಶ್ವಿನಿ ಕುಮಾರ್ ಮಲ್ಲಿಕ್ ಪ್ರತಿಕ್ರಿಯೆ ನೀಡಿ, ನಾವು ಸಚಿವರನ್ನು ಭೇಟಿಯಾಗಲು ಹೋದಾಗ ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿಎಲ್ಎಡಿಎಸ್) ಕಡತ ತೆಗೆದುಕೊಂಡು ಹೋಗಿರಲಿಲ್ಲ. ಹಾಗಾಗಿ ಸಚಿವರು ನಮಗೆ ಬೈದಿದ್ದಲ್ಲದೆ, ಪ್ಲಾಸ್ಟಿಕ್ ಕುರ್ಚಿಯಲ್ಲಿ ಹೊಡೆದರು. ಹೇಗೇಗೋ ಮಾಡಿ ತಪ್ಪಿಸಿಕೊಂಡು ಬಂದಿದ್ದೇವೆ ಎಂದಿದ್ದಾರೆ.
ಆರೋಪ ಅಲ್ಲಗಳೆದ ಸಚಿವರು ಆದರೆ ಅಧಿಕಾರಿಗಳ ಆರೋಪವನ್ನು ಕೇಂದ್ರ ಸಚಿವ ಬಿಶ್ವೇಶ್ವರ್ ಟುಡು ಅಲ್ಲಗಳೆದಿದ್ದಾರೆ. ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ಗೌರವ ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಅಧಿಕಾರಿಗಳು ಮಾಡಿದ ಆರೋಪ ಸುಳ್ಳು ಮತ್ತು ನಿರಾಧಾರ. ಆ ಇಬ್ಬರೂ ಅಧಿಕಾರಿಗಳು ನನ್ನ ಬಳಿ ಬಂದಿದ್ದು ಸತ್ಯ. ಸುಮಾರು ಅರ್ಧ ಗಂಟೆ ನಾವು ಚರ್ಚಿಸಿದ್ದೇವೆ. ಈ ವೇಳೆ ಕೇಂದ್ರ ಸರ್ಕಾರ ನೀಡಿದ 7 ಕೋಟಿ ರೂಪಾಯಿ ಹೇಗೆ ಖರ್ಚಾಯಿತು ಎಂಬ ಪ್ರಶ್ನೆ ಕೇಳಿದೆ. ಹಾಗೇ, ಅದಕ್ಕೆ ಸಂಬಂಧಪಟ್ಟ ದಾಖಲೆ, ಕಡತಗಳನ್ನು ಯಾಕೆ ತರಲಿಲ್ಲ ಎಂದು ಪ್ರಶ್ನಿಸಿದೆ. ಅಷ್ಟಕ್ಕಾಗಿ ಇಂಥ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ನಿಜಕ್ಕೂ ಅವರಿಗೆ ಥಳಿಸಿದ್ದರೆ, ನನ್ನ ಕಚೇರಿಯಿಂದ ಅವರು ಹೋಗಲು ಹೇಗೆ ಸಾಧ್ಯವಾಗುತ್ತಿತ್ತು ಎಂದು ತುಡು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದ 50:50 ರೂಲ್ಸ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ