ಮುಂಬೈ: ಸಮಾಜದ ಕೆಲ ದುಷ್ಟಶಕ್ತಿಗಳು ರಾಮ ಮಂದಿರದ ಹೆಸರಲ್ಲಿ ಜನರಿಂದ ಹಣ ಸಂಗ್ರಹ ಮಾಡುವ ಕೆಲಸವನ್ನು ಮಾಡುತ್ತಿದೆ. ಈ ಬಗ್ಗೆ ಶಿವಸೇನೆ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡುವ ಕೆಲಸ ಮಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಈ ಮೂಲಕ ಬಿಜೆಪಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕಿದ್ದರು. ಈ ಬೆನ್ನಲ್ಲೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿತ್ತು. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಪಡೆಯುವ ಕಾರ್ಯವನ್ನು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಮಾಡುತ್ತಿದೆ. ಈ ವಿಚಾರವನ್ನು ಉದ್ದೇಶಿಸಿ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ.
ಶಿವಸೇನೆ ಮುಖ್ಯಸ್ಥರೂ ಆಗಿರುವ ಉದ್ಧವ್ ಠಾಕ್ರೆ ಅವರು ಮಂಗಳವಾರ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಈ ಸಂದೇಶ ರವಾನೆ ಮಾಡಿದ್ದಾರೆ. ಶಿವಸೇನೆ ಪಕ್ಷವನ್ನು ವಿಸ್ತರಿಸಲು ರಾಜ್ಯದಾದ್ಯಂತ ಜನರನ್ನು ಫೆಬ್ರವರಿ 22 ರಿಂದ 27 ರವರೆಗೆ ಶಿವ ಸಂಪರ್ಕ ಅಭಿಯಾನವನ್ನು ನಡೆಸಲಿದೆ.
ವಿವಾದ ಸೃಷ್ಟಿಸಿದ್ದ ಸಿದ್ದರಾಮಯ್ಯ
ಅಯೋಧ್ಯೆಯ ರಾಮ ಮಂದಿರಕ್ಕೆ ಹಣ ಸಂಗ್ರಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ನೀಡಿದ್ದ ಪ್ರತಿಕ್ರಿಯೆ ವಿವಾದವಾಗಿತ್ತು. ಅಯೋಧ್ಯೆಯ ರಾಮ ಮಂದಿರಕ್ಕೆ ದೇಣಿಗೆ ಕೇಳಲು ನನ್ನ ಬಳಿಯೂ ಬಂದಿದ್ದರು. ಆದರೆ, ವಿವಾದಿತ ಮಂದಿರಕ್ಕೆ ದೇಣಿಗೆ ಕೊಡಲ್ಲ ಎಂದು ಹೇಳಿ ಕಳುಹಿಸಿದೆ ಎಂದಿದ್ದರು.
ರಾಮ ಮಂದಿರಕ್ಕೆ ಸಂಗ್ರಹವಾಗಿರುವ ಹಣಕ್ಕೆ ಲೆಕ್ಕ ಕೊಡ್ತಾರಾ?. ಈ ಹಿಂದೆ ರಾಮಮಂದಿರ ನಿರ್ಮಾಣಕ್ಕೆ ಹಣ, ಇಟ್ಟಿಗೆ ಸಂಗ್ರಹಿಸಿದ್ದರು. ಸಂಗ್ರಹಿಸಿದ ಇಟ್ಟಿಗೆಗಳನ್ನು ಊರಾಚೆ ಎಸೆದು ಹಣ ತೆಗೆದುಕೊಂಡು ಹೋಗಿದ್ದರು. ಇದೆಲ್ಲ ರಾಮನ ಲೆಕ್ಕ- ಕೃಷ್ಣನ ಲೆಕ್ಕ ಎಂದು ಸಿದ್ದರಾಮಯ್ಯ ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನವನ್ನು ಟೀಕಿಸಿದ್ದರು.
ದೇಣಿಗೆ ಸಂಗ್ರಹಕ್ಕೆ ಅನುಮತಿ ಕೊಟ್ಟವರು ಯಾರು: ಎಚ್ಡಿಕೆ ಪ್ರಶ್ನೆ
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಬೀದಿಬೀದಿಗಳಲ್ಲಿ ಪೋಲಿ ಪುಂಡರು ಹಣ ಸಂಗ್ರಹಿಸುತ್ತಿದ್ದಾರೆ. ಇದನ್ನು ತಡೆಯುವುದು ಸರ್ಕಾರದ ಜವಾಬ್ದಾರಿ. ಅವರಿಗೆ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿರುವರು ಯಾರು? ಅವರು ಹಣ ಸಂಗ್ರಹಿಸಿ ಮಂದಿರ ನಿರ್ಮಾಣಕ್ಕೆ ಕೊಡುತ್ತಿದ್ದಾರಾ? ಎಂದು ಪ್ರಶ್ನೆ ಒಡ್ಡಿದ್ದರು.
ಇದನ್ನೂ ಓದಿ: ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ: ಸಿದ್ದರಾಮಯ್ಯ!
Published On - 8:48 pm, Wed, 17 February 21