ರಾಹುಲ್ ಗಾಂಧಿ ದಲಿತ ಯುವತಿಯನ್ನು ಮದುವೆಯಾಗಲಿ..ನಮ್ಮ ಇಲಾಖೆಯಿಂದ 2.5 ಲಕ್ಷ ರೂ. ಕೊಡುತ್ತೇನೆ: ರಾಮದಾಸ್ ಅಠಾವಳೆ
ರಾಹುಲ್ ಗಾಂಧಿಯವರು ನನ್ನ ಅತ್ಯುತ್ತಮ ಸ್ನೇಹಿತ. ಅವರು ಅಂದು ಬಜೆಟ್ ಭಾಷಣದ ವೇಳೆ ಹಮ್ ದೋ, ಹಮಾರೆ ದೋ ಎಂಬ ಘೋಷವಾಕ್ಯ ಬಳಸಿದ್ದಾರೆ. ಆದರೆ ಈ ವಾಕ್ಯವನ್ನು ಕುಟುಂಬ ಯೋಜನೆಗಾಗಿ ಬಳಕೆ ಮಾಡಲಾಗುತ್ತದೆ ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ.
ದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುವ ರಾಹುಲ್ ಗಾಂಧಿ, ಎರಡು ದಿನಗಳ ಹಿಂದೆ ಲೋಕಸಭೆಯಲ್ಲಿ ಬಜೆಟ್ ಭಾಷಣೆ ಮಾಡುವ ವೇಳೆ ಹಮ್ ದೋ ಹಮಾರೆ ದೋ (hum do humare do) ಎಂಬ ವಾಕ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಅಂದು ಬಿಜೆಪಿ ಸಂಸದರು ಗದ್ದಲ ಮಾಡಿ, ಇದು ಬಜೆಟ್ ಭಾಷಣ, ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ರಾಹುಲ್ ಗಾಂಧಿಯವರನ್ನು ಎಚ್ಚರಿಸಿದ್ದರೂ, ಯಾವುದಕ್ಕೂ ಬಗ್ಗದೆ ವಾಗ್ದಾಳಿ ನಡೆಸಿದ್ದರು. ಅಂದು ಹಮ್ ದೋ, ಹಮಾರೆ ದೋ ಎಂದಿದ್ದ ರಾಹುಲ್ ಗಾಂಧಿಗೆ ಇಂದು ಬಿಜೆಪಿ ಸಚಿವ ರಾಮದಾಸ್ ಅಠಾವಳೆ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿಯವರು ನನ್ನ ಅತ್ಯುತ್ತಮ ಸ್ನೇಹಿತ. ಅವರು ಅಂದು ಬಜೆಟ್ ಭಾಷಣದ ವೇಳೆ ಹಮ್ ದೋ, ಹಮಾರೆ ದೋ ಎಂಬ ಘೋಷವಾಕ್ಯ ಬಳಸಿದ್ದಾರೆ. ಆದರೆ ಈ ವಾಕ್ಯವನ್ನು ಕುಟುಂಬ ಯೋಜನೆಗಾಗಿ ಬಳಕೆ ಮಾಡಲಾಗುತ್ತದೆ. ಹಾಗಾಗಿ ರಾಹುಲ್ ಗಾಂಧಿ ಹಮ್ ದೋ, ಹಮಾರೆ ದೋ ಎಂದು ಹೇಳಬೇಕೆಂದರೆ ಮೊದಲು ಮದುವೆಯಾಗಬೇಕು. ಅದರಲ್ಲೂ ರಾಹುಲ್ ಗಾಂಧಿ ಒಬ್ಬ ದಲಿತ ಯುವತಿಯನ್ನು ಮದುವೆಯಾದರೆ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡಿದಂತೆ ಆಗುತ್ತದೆ. ಜಾತಿವಾದವನ್ನು ಕೊನೆಗೊಳಿಸಿದಂತೆಯೂ ಆಗುತ್ತದೆ. ಹಾಗೇ ಎಲ್ಲ ಯುವಕರಿಗೂ ಸ್ಫೂರ್ತಿಯಾಗುತ್ತಾರೆ ಎಂದು ಅಠಾವಳೆ ಹೇಳಿದ್ದಾರೆ.
ಒಬ್ಬ ದಲಿತ ಯುವತಿಯನ್ನು ಮದುವೆಯಾಗಿ ಎಂದು ರಾಹುಲ್ ಗಾಂಧಿಯವರಿಗೆ ನಾನು ಸಲಹೆ ನೀಡುತ್ತೇನೆ. ಅವರೇನಾದರೂ ಹೀಗೆ ಅಂತರ್ಜಾತಿ ವಿವಾಹ ಆದರೆ ನಮ್ಮ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ 2.5 ಲಕ್ಷ ರೂಪಾಯಿ ನೀಡುತ್ತೇವೆ ಎಂದೂ ಅಠಾವಳೆ ತಿಳಿಸಿದ್ದಾರೆ.
ಗೋ ಕೊರೊನಾ ಎಂದಿದ್ದ ಸಚಿವ ರಾಮದಾಸ್ ಅಠಾವಳೆ ಗೋ ಕರೊನಾ..ಗೋ ಕರೊನಾ ಎಂದು ಕೂಗುತ್ತಿರುವ ವಿಡಿಯೋವೊಂದು ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಅದಾದ ನಂತರ ರೂಪಾಂತರ ಕೊರೊನಾ ಕಾಲಿಟ್ಟಾಗ (2020ರ ಡಿಸೆಂಬರ್) ಪ್ರತಿಕ್ರಿಯೆ ನೀಡಿದ್ದ ಅಠಾವಳೆ, ಆಗ ನಾನು ಗೋ ಕೊರೊನಾ ಗೋ ಎಂದಿದ್ದೆ, ಅದೀಗ ಹೋಗುತ್ತಿದೆ..ಈ ಹೊಸ ಕೊರೊನಾ ಹೋಗಲೆಂದು ನಾನು, ನೋ ಕೊರೊನಾ ನೋ ಎನ್ನುತ್ತೇನೆ ಎಂದು ಹೇಳಿದ್ದರು.
Published On - 7:48 pm, Wed, 17 February 21