ನವದೆಹಲಿ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ನಡೆ ಜಗತ್ತಿನಲ್ಲಿ ಮಹಾಯುದ್ಧದ ಭೀತಿ ಉಂಟುಮಾಡಿದೆ. ಈಗಾಗಲೇ ಈ ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಶಮನ ಮಾಡಲು ಹಲವು ದೇಶಗಳು ಪ್ರಯತ್ನಿಸಿದ್ದರೂ ವಿಫಲವಾಗಿವೆ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಕೆಲವು ಬಾರಿ ಮಾತುಕತೆ ನಡೆಸಿದ್ದು, ಯುದ್ಧಭೂಮಿಯಲ್ಲಿ ಈ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಬದಲು ಶಾಂತಿ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದೆ. ಪೋಲೆಂಡ್, ಅಮೆರಿಕ ಅಧ್ಯಕ್ಷರೂ ರಷ್ಯಾ-ಉಕ್ರೇನ್ ಸಂಘರ್ಷವನ್ನು ಬಗೆಹರಿಸುವಲ್ಲಿ ಭಾರತದ ಪ್ರಯತ್ನದ ಬಗ್ಗೆ ಹೇಳಿಕೆ ನೀಡಿರುವುದರಿಂದ ಜಗತ್ತಿನ ಚಿತ್ತ ಇದೀಗ ಮೋದಿಯತ್ತ ನೆಟ್ಟಿದೆ.
ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ ಭಾರತವನ್ನು ಮಧ್ಯವರ್ತಿಯಾಗಿ ಎದುರು ನೋಡುವುದಾಗಿ ಉಕ್ರೇನ್ ಕೂಡ ಹೇಳಿಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಸೂತ್ರದಿಂದ ಈ ಸಂಘರ್ಷ ಅಂತ್ಯವಾಗಲಿದೆಯೇ ಎಂಬ ನಿರೀಕ್ಷೆ ಇದೀಗ ಹೆಚ್ಚಾಗಿದೆ. ಈ ವಾರದ ಮೋದಿಯ ಅಮೆರಿಕ ಪ್ರವಾಸ ವೇಳೆಯಲ್ಲೂ ಯುಎಸ್ ಅಧ್ಯಕ್ಷ ಜೋ ಬೈಡೆನ್ ಈ ಬಗ್ಗೆ ಪ್ರಸ್ತಾಪಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೋಮವಾರ ಸಂಜೆ ನ್ಯೂಯಾರ್ಕ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಉಭಯ ನಾಯಕರು ಶಾಂತಿ ಒಪ್ಪಂದದ ಮಾರ್ಗವನ್ನು ಚರ್ಚಿಸಿದ್ದಾರೆ. ರಷ್ಯಾ ಸಂಘರ್ಷದಲ್ಲಿ ಮೋದಿಯನ್ನು ನಿರ್ಣಾಯಕ ಮಧ್ಯವರ್ತಿಯಾಗಿ ನೋಡುವುದಾಗಿ ಉಕ್ರೇನ್ ದೃಢಪಡಿಸಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲುತ್ತಾ?, ತಿಂಗಳಲ್ಲಿ ಎರಡನೇ ಬಾರಿಗೆ ಝೆಲೆನ್ಸ್ಕಿಯನ್ನು ಭೇಟಿಯಾದ ಮೋದಿ
ಉಕ್ರೇನಿಯನ್‌ನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ನೀಡಿರುವ ಮಾಹಿತಿ ಪ್ರಕಾರ, ಕೈವ್ ಶಾಂತಿ ಒಪ್ಪಂದವನ್ನು ತಲುಪುವಲ್ಲಿ ಭಾರತವನ್ನು ನಿರ್ಣಾಯಕ ಪಾಲುದಾರನಾಗಿ ನೋಡುತ್ತಿದೆ ಎಂದು ದೃಢಪಡಿಸಿದ್ದಾರೆ. ರಷ್ಯಾದ ಆಕ್ರಮಣವನ್ನು ಕೊನೆಗೊಳಿಸಲು ರಾಜಿಗಳ ಅಗತ್ಯವಿದ್ದರೂ, ಯಾವುದೇ ಪ್ರಸ್ತಾಪಗಳು ಉಕ್ರೇನಿಯನ್ ಪ್ರದೇಶವನ್ನು ಮಾಸ್ಕೋಗೆ ಬಿಟ್ಟುಕೊಡುವುದನ್ನು ಒಳಗೊಂಡಿರಬಾರದು ಎಂಬುದು ಅವರ ನಿಲುವಾಗಿದೆ ಎಂದು ಪೋಲಿಟಿಕೊ ವರದಿ ಮಾಡಿದೆ.
ಸೋಮವಾರ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ವಿಶ್ವಸಂಸ್ಥೆಯ ಶೃಂಗಸಭೆಯ ವೇಳೆ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದು ಕಳೆದ 3 ತಿಂಗಳಲ್ಲಿ ಅವರಿಬ್ಬರ ಮೂರನೇ ಸಭೆಯಾಗಿದೆ. ಶಾಂತಿಯನ್ನು ಉತ್ತೇಜಿಸಲು ಮತ್ತು ನಡೆಯುತ್ತಿರುವ ಯುದ್ಧಕ್ಕೆ ರಾಜತಾಂತ್ರಿಕ ಪರಿಹಾರವನ್ನು ಹುಡುಕುವ ಭಾರತದ ಪ್ರಯತ್ನಗಳನ್ನು ಝೆಲೆನ್ಸ್ಕಿ ಶ್ಲಾಘಿಸಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ನಂತರ ಮೋದಿ ಅವರು ಈ ಸಭೆಯ ಫೋಟೋವನ್ನು ಟ್ವೀಟ್ ಮಾಡಿದ್ದರು. ಸಂಘರ್ಷಕ್ಕೆ ಶೀಘ್ರ ಪರಿಹಾರ ಮತ್ತು ಉಕ್ರೇನ್‌ನಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗೆ ಭಾರತದ ಬೆಂಬಲವನ್ನು ಮೋದಿ ಪುನರುಚ್ಛರಿಸಿದ್ದರು.
ಇದನ್ನೂ ಓದಿ: ‘ಮೇಕ್ ಇನ್ ಇಂಡಿಯಾ’ ಕೈಂಕರ್ಯಕ್ಕೆ 10 ವರ್ಷ; ನರೇಂದ್ರ ಮೋದಿ ಪಟ್ಟಿ ಮಾಡಿದ ಸಾಧನೆಗಳ ವಿವರ
ಇತ್ತೀಚಿನ ತಿಂಗಳುಗಳಲ್ಲಿ ಮೋದಿ ಸಕ್ರಿಯ ರಾಜತಾಂತ್ರಿಕ ಪಾತ್ರವನ್ನು ವಹಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಎರಡಕ್ಕೂ ಭೇಟಿ ನೀಡಿರುವ ಅವರು ಎರಡೂ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಎರಡು ವಾರಗಳ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದು, ಅದಕ್ಕೂ 2 ವಾರಗಳ ಹಿಂದೆ ಪ್ರಧಾನಿ ಮೋದಿ ಕೂಡ ಕೈವ್ಗೆ ಭೇಟಿ ನೀಡಿದ್ದರು. ಹೀಗಾಗಿ, ಇದು ಭವಿಷ್ಯದ ಮಾತುಕತೆಗಳಲ್ಲಿ ಮಧ್ಯವರ್ತಿಯಾಗಿ ಮೋದಿಯವರ ಸಂಭಾವ್ಯ ಪಾತ್ರದ ಸಾಧ್ಯತೆಯನ್ನು ಬಲಪಡಿಸಿದೆ.
ನವದೆಹಲಿ ಮತ್ತು ಮಾಸ್ಕೋ ನಡುವಿನ ನಂಬಿಕೆಯನ್ನು ಉಲ್ಲೇಖಿಸಿ ಭಾರತವು ಮಧ್ಯವರ್ತಿಯಾಗಿ ಪಾತ್ರ ವಹಿಸಬಹುದೆಂದು ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಇತ್ತೀಚೆಗೆ ಹೇಳಿದ್ದರು. ಸ್ವಿಜರ್ಲೆಂಡ್, ಸೌದಿ ಅರೇಬಿಯಾ, ಅಥವಾ ಚೀನಾದಂತಹ ಇತರ ಸಂಭಾವ್ಯ ಮಧ್ಯವರ್ತಿಗಳಿಗಿಂತ ಭಿನ್ನವಾಗಿ, ಭಾರತವು ರಷ್ಯಾ ಮತ್ತು ಉಕ್ರೇನ್ ಎರಡರೊಂದಿಗೂ ತೊಡಗಿಸಿಕೊಳ್ಳಲು ಸಮರ್ಥವಾಗಿರುವ ತಟಸ್ಥ ಪಕ್ಷವಾಗಿ ಉಕ್ರೇನ್ನಿಂದ ಗುರುತಿಸಲ್ಪಟ್ಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:09 pm, Wed, 25 September 24