ದೆಹಲಿ: ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ಅಧಿಕಾರಿಗಳು ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಮತ್ತು ಸಹಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಭಾರತೀಯ ಸೈನ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸೇನಾ ಸಿಬ್ಬಂದಿ ಸಚಿವಾಲಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆಯಕಟ್ಟಿನ ಸ್ಥಾನದಲ್ಲಿ ಸೇನಾಸಿಬ್ಬಂದಿ ಇರುವುದು ಯಾವುದೇ ನಿರ್ಧಾರ ಕೈಗೊಳ್ಳಲು ಅಥವಾ ಇತರ ಕಾರ್ಯಗಳಿಗೆ ಸಹಾಯವಾಗಲಿದೆ. ಇದುವರೆಗೆ ಐಎಎಸ್ ಅಧಿಕಾರಿಗಳು ಈ ಸ್ಥಾನದಲ್ಲಿ ಇರುತ್ತಿದ್ದರು. ಈಗ ಸೇನಾಧಿಕಾರಿಗಳು ಈ ಹುದ್ದೆಗೆ ನೇಮಕವಾಗಿರುವುದು ಸೇನಾನಿರ್ಣಯಗಳು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಯಾಗಲು ಸಹಾಯವಾಗಲಿದೆ.
ವಾರದ ಆರಂಭದಲ್ಲಿ ಕೈಗೊಂಡ ನಿರ್ಧಾರದಂತೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಸತ್ತಿನ ನೇಮಕಾತಿ ಸಮಿತಿ, ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಅವರನ್ನು ಮಿಲಿಟರಿ ವಿಭಾಗದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಿದೆ. ಮೇಜರ್ ಜನರಲ್ ಕೆ. ನಾರಾಯಣನ್, ರೇರ್ ಅಡ್ಮಿರಲ್ ಕಪಿಲ್ ಮೋಹನ್ ಧೀರ್ ಮತ್ತು ಏರ್ ವೈಸ್ ಮಾರ್ಷಲ್ ಹರ್ದೀಪ್ ಬೈನ್ಸ್ ಈ ಮೂವರನ್ನು ಮಿಲಿಟರಿ ವಿಭಾಗದ ಸಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಮಿಲಿಟರಿ ವಿಭಾಗೀಯ ಕಚೇರಿ ಕಾರ್ಯಾರಂಭಿಸಿ ಇದು ಎರಡನೇ ವರ್ಷವಾಗಿದೆ. ರಕ್ಷಣಾ ಸಚಿವಾಲಯ ಕೈಗೊಂಡ ಪ್ರಮುಖ ಅಭಿವೃದ್ಧಿ ಕಾರ್ಯಗಳ ಅನುಸಾರ ಈ ಕಚೇರಿಯನ್ನು 2020ರಲ್ಲಿ ರಚಿಸಲಾಗಿದೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ.
ಈ ಮೊದಲು ಮಿಲಿಟರಿ ಕಾರ್ಯಾಚರಣೆ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳುವುದು ತ್ರಾಸದಾಯಕವಾಗಿತ್ತು. ಈಗ ಹೊಸ ನೇಮಕಾತಿಯ ಮೂಲಕ ಕೆಲಸ ಕಾರ್ಯ ಹಾಗೂ ನಿರ್ಧಾರ ಕೈಗೊಳ್ಳುವುದು ಸುಲಭ ಸಾಧ್ಯವಾಗಿದೆ.
ಈ ಬಗ್ಗೆ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮನೋಜ್ ಕೆ. ಚನ್ನನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಧಿಕಾರದಿಂದಾಗಿ ದಿನನಿತ್ಯದ ಕೆಲಸಗಳು ಸುಲಭಸಾಧ್ಯವಾಗಲಿದೆ. ಇದರಿಂದ ಜೆಎಸ್ ಹಂತದ ನೇಮಕಾತಿಯಲ್ಲಿ ವಿಕೇಂದ್ರೀಕರಣ ಆಗಲಿದೆ.
ಇದನ್ನೂ ಓದಿ: ಸೇನಾ ನೇಮಕಾತಿಯಲ್ಲಿ ಭ್ರಷ್ಟಾಚಾರ: 23 ಆರೋಪಿಗಳಲ್ಲಿ 7 ಮಂದಿ ಸೇನಾಧಿಕಾರಿಗಳು
ಕೊರೊನಾ ಲಸಿಕೆ ಹಾಕಿಸಿಕೊಂಡ 102 ವರ್ಷದ ನಿವೃತ್ತ ಸೇನಾಧಿಕಾರಿ ನೀಡಿದ 2 ಕಾರಣಗಳಿವು
Published On - 3:55 pm, Sun, 9 May 21