ನವದೆಹಲಿ: ಕೊರೊನಾ ವೈರಸ್ನ ಎರಡನೇ ಅಲೆ ದೇಶದೆಲ್ಲೆಡೆ ಸೃಷ್ಟಿಸಿರುವ ಹಾಹಾಕಾರವನ್ನು ಚರ್ಚಿಸಲು ಶುಕ್ರವಾರದಂದು ಕೇಂದ್ರ ಸಚಿವ ಸಂಪುಟವು ಸಭೆ ಸೇರಿ ಸೇರಿತ್ತು. ಸಭೆಯಲ್ಲಿ ಹಾಜರಿದ್ದ ಎಲ್ಲ ಸಚಿವರು ಈಗ ತಲೆದೋರಿರುವ ಬಿಕ್ಕಟ್ಟಿನ ಸ್ಥಿತಿ ‘ಶತಮಾನದಲ್ಲೊಮ್ಮೆ ಸಂಭವಿಸುವಂಥದ್ದು. ಅದು ಇಡೀ ವಿಶ್ವಕ್ಕೆ ಸವಾಲೊಡ್ಡಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಂಕನ್ನು ಎದುರಿಸಲು ಭಾರತ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ದೇಶದ ಜನರೊಂದಿಗೆ ಟೀಮ್ ಇಂಡಿಯಾವಾಗಿ ಮಾಡುತ್ತಿರುವ ಸಾಮಾಹಿಕ ಪ್ರಯತ್ನವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಎಲ್ಲ ಅಂಗಗಳು ಒಟ್ಟಾಗಿ ತೀವ್ರಗತಿಯಲ್ಲಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ತಮ್ಮ ಸಂಪುಟದ ಸಚಿವರಿಗೆ ತಮ್ಮ ತಮ್ಮ ಕ್ಷೇತ್ರ ಹಾಗೂ ಪ್ರಾಂತ್ಯಗಳೊಂದಿಗೆ ಸಂಪರ್ಕದಲ್ಲಿದ್ದು ಅವರಿಂದ ಸಮಸ್ಯೆಗಳನ್ನು ತಿಳಿದುಕೊಂಡು ನೆರವು ಒದಗಿಸುವಂತೆ ಸೂಚಿಸಿದರು. ಸ್ಥಳೀಯ ಹಂತದ ಸಮಸ್ಯೆಗಳನ್ನು ಕೂಡಲೇ ಗುರುತಿಸಿ ಅವುಗಳನ್ನು ಪರಿಹರಿಸಬೇಕು ಎಂದು ಪ್ರಧಾನಿಗಳು ಒತ್ತಿ ಹೇಳಿದರು. ಕಳೆದ 14 ತಿಂಗಳುಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ದೇಶದ ನಾಗರಿಕರು ಮಾಡಿದ ಪ್ರಯತ್ನಗಳನ್ನು ಸಚಿವ ಸಂಪುಟ ಪರಾಮರ್ಶಿಸಿತು.
ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಹೆಚ್ಚಿಸಿ ಸೋಂಕಿತರಿಗೆ ಒದಗಿಸುವ, ಪಿಎಸ್ಎ ಆಕ್ಸಿಜನ್ ಸಿಲಿಂಡರ್ಗಳನ್ನು ಪೂರೈಸುವ ಮೂಲಕ ವೈದ್ಯಕೀಯ ಸೌಲಭ್ಯಗಳು ಜನರಿಗೆ ಸಿಗುವಂತೆ ಮಾಡಿದ್ದನ್ನು ಸಭೆಯಲ್ಲಿ ಚರ್ಚಿಸಲಾಯಿತು. ಆಕ್ಸಿಜನ್ ಕೊರತೆ ಕುರಿತು ಉದ್ಭವಿಸಿದ ಸಮಸ್ಯೆಯನ್ನು ನಿಭಾಯಿಸಿದ್ದು, ಮತ್ತು ಅಗತ್ಯ ಔಷಧಿಗಳ ಸರಬರಾಜು ನಿಲ್ಲದಂತೆ ನೋಡಿಕೊಂಡ ವಿಷಯಗಳನ್ನೂ ಚರ್ಚಿಸಲಾಯಿತು. ಇವುಗಳ ಸರಬರಾಜು ಹಾಗೂ ಪೂರೈಕೆಯನ್ನು ಮತ್ತಷ್ಟು ಬಲಪಡಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು. ಹಾಗೆಯೇ, ಕಷ್ಟಕ್ಕೆ ಸಿಲುಕಿರುವ ಜನಕ್ಕೆ ಸಹಾಯವಾಗುವ ಹಾಗೆ ಅಹಾರ-ಧಾನ್ಯಗಳನ್ನು ಮತ್ತು ಜನ್ ಧನ್ ಖಾತೆ ಹೊಂದಿರುವವರಿಗೆ ಆರ್ಥಿಕ ನೆರವನ್ನು ಒದಗಿಸುವ ಕುರಿತ ಚರ್ಚೆ ನಡೆಯಿತು.
ಭಾರತ ಎರಡು ಲಸಿಕೆಗಳನ್ನು ಯಶಸ್ವೀಯಾಗಿ ಉತ್ಪಾದಿಸುತ್ತಿದೆ ಮತ್ತು ಇನ್ನಿತರ ಸಂಸ್ಥೆಗಳ ಲಸಿಕೆಗಳು ಸಹ ಅನುಮೋದನೆ ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲಿನ ವಿವಿಧ ಹಂತಗಳಲ್ಲಿವೆ. ಈಗಾಗಲೇ 15 ಕೋಟಿಗೂ ಹೆಚ್ಚು ಜನಕೆ ಲಸಿಕೆ ನೀಡಲಾಗಿರುವ ಬಗ್ಗೆ ಸಂಪುಟದ ಗಮನಕ್ಕೆ ತರಲಾಯಿತು.
ಕೊವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಜನರ ನಡುವಳಿಕೆ-ಮಾಸ್ಕ್ ಧರಿಸುವುದು, ಕನಿಷ್ಠ ಆರು ಅಡಿಗಳ ದೈಹಿಕ ಅಂತರ ಕಾಯ್ದಕೊಳ್ಳುವುದು ಮತ್ತು ಪದೇಪದೆ ಕೈಗಳನ್ನು ತೊಳೆದುಕೊಳ್ಳುವುದು ಜಾರಿಯಲ್ಲಿಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ವೈರಸ್ ಅನ್ನು ಎದುರಿಸಿ ಮಟ್ಟ ಹಾಕುವ ಬೃಹತ್ ಕೆಲಸದಲ್ಲಿ ಸಮುದಾಯಗಳ ಪಾಲ್ಗೊಳ್ಳುವ ಅವಶ್ಯಕತೆಯನ್ನು ಸಭೆಯಲ್ಲಿ ಒತ್ತಿ ಹೇಳಲಾಯಿತು ಮತ್ತು ಸಂಪುಟ ಎಲ್ಲಾ ಸದಸ್ಯರು ಮಾಹಾಮಾರಿಯನ್ನು ಸೋಲಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆ ಮತ್ತು ಅವರ ಸಂಪುಟ ಸಚಿವರ ಜೊತೆ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಕ್ಯಾಬಿನೆಟ್ ಕಾರ್ಯದರ್ಶಿ ಮುಂತಾದವರು ಭಾಗವಹಿಸಿದ್ದ ಇಂದಿನ ಸಭೆಯು ವಿಡಿಯೊ ಕಾನ್ಪರೆನ್ಸಿಂಗ್ ಮೂಲಕ ನಡೆಯಿತು. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ ವಿಕೆ ಪೌಲ್ ಕೊವಿಡ್-19 ನಿರ್ವಹಣೆ ಬಗ್ಗೆ ಪ್ರಸೆಂಟೇಶನ್ ನೀಡಿದರು.
ಇದನ್ನೂ ಓದಿ: PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ
ಇದನ್ನೂ ಓದಿ: Covid Helpline Numbers: ಆಕ್ಸಿಜನ್, ರೆಮ್ಡೆಸಿವರ್ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ