ಕೊರೊನಾದಿಂದ ಚೇತರಿಸಿಕೊಂಡಿದ್ದ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್​​ ಏಮ್ಸ್​ಗೆ ದಾಖಲು

ಕೊರೊನಾದಿಂದ ಚೇತರಿಸಿಕೊಂಡಿದ್ದ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್​​ ಏಮ್ಸ್​ಗೆ ದಾಖಲು
ರಮೇಶ್ ಪೋಖ್ರಿಯಾಲ್ (ಸಂಗ್ರಹ ಚಿತ್ರ)

Ramesh Pokhriyal: ಭಾರತ ಸರ್ಕಾರದ ಶಿಕ್ಷಣ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕೊವಿಡ್ ನಂತರದ ಸಮಸ್ಯೆಗಳ ಕಾರಣಕ್ಕಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬೆನ್ನಲ್ಲೇ ಕೆಲ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ದೆಹಲಿಯ ಏಮ್ಸ್​ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದೆ.

Skanda

|

Jun 01, 2021 | 1:32 PM

ದೆಹಲಿ: ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಭಾರತ ಸರ್ಕಾರದ ಶಿಕ್ಷಣ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಕೊವಿಡ್ ನಂತರದ ಸಮಸ್ಯೆಗಳ ಕಾರಣಕ್ಕಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬೆನ್ನಲ್ಲೇ ಕೆಲ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ದೆಹಲಿಯ ಏಮ್ಸ್​ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿದೆ. ಅವರಲ್ಲಿ ಯಾವ ಬಗೆಯ ಸಮಸ್ಯೆಗಳು ಕಂಡು ಬಂದಿದ್ದವು ಎನ್ನುವ ಬಗ್ಗೆ ಆಸ್ಪತ್ರೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಡಾ.ರಮೇಶ್ ಪೋಖ್ರಿಯಾಲ್​ ನಿಶಾಂಕ್ ಅವರನ್ನು ಆಸ್ಪತ್ರೆಗೆ ಸೇರಿಸಿರುವ ಕುರಿತು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಆಸ್ಪತ್ರೆಯ ಮೂಲಗಳು ಈ ಬಗ್ಗೆ ತಿಳಿಸಿವೆ ಎಂದು ಉಲ್ಲೇಖಿಸಿದೆ. ಈ ಹಿಂದೆ ಏಪ್ರಿಲ್​ 21ರಂದು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅಂದು ಸೋಂಕು ದೃಢಪಡುತ್ತಿರುವಂತೆಯೇ ಟ್ವೀಟ್ ಮೂಲಕ ತಿಳಿಸಿದ್ದ ರಮೇಶ್ ಪೋಖ್ರಿಯಾಲ್, ಕೊರೊನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಕೊವಿಡ್​ 19 ತಪಾಸಣೆಗೆ ಒಳಗಾಗಿ ಎಂದು ಹೇಳಿದ್ದರು. ಜತೆಗೆ, ತಮ್ಮ ಇಲಾಖೆಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು, ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ, ಈಗ ಕೊರೊನಾದಿಂದ ಗುಣಮುಖವಾದ ಬಳಿಕ ಮತ್ತೆ ಆರೋಗ್ಯದಲ್ಲಿ ಕೆಲ ಏರಿಳಿತ ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೆಹಲಿ ಏಮ್ಸ್​ನ ನುರಿತ ವೈದ್ಯರ ತಂಡ ಸಚಿವರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಯನ್ನೇನೂ ಬಿಟ್ಟುಕೊಟ್ಟಿಲ್ಲ. ಕೊರೊನಾದಿಂದ ಚೇತರಿಕೆ ಕಂಡ ಹಲವರಲ್ಲಿ ಈ ತೆರನಾಗಿ ನಂತರದ ದಿನಗಳಲ್ಲಿ ಸಮಸ್ಯೆ ಎದುರಾಗುತ್ತಿದ್ದು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸುವುದು ಸಾಧ್ಯವಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎನ್ನಲಾಗುತ್ತಿದೆ.

ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ರದ್ದತಿ ಬಗ್ಗೆ ಇನ್ನೊಂದೆರೆಡು ದಿನದಲ್ಲಿ ತೀರ್ಮಾನ ಕೊರೊನಾ ಎರಡನೇ ಅಲೆ ಭೀತಿಯ ನಡುವೆ ಸಿಬಿಎಸ್​ಇ ಮತ್ತು ಐಸಿಎಸ್​ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಆಕ್ಷೇಪ ಕೇಳಿ ಬರುತ್ತಿದೆ. ಈ ಹಂತದಲ್ಲಿ ಪರೀಕ್ಷೆ ರದ್ದತಿ ಮಾಡುವ ಬಗ್ಗೆ ಇನ್ನು ಎರಡು ದಿನಗಳೊಳಗೆ ಮಾಹಿತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ನಿನ್ನೆ (ಮೇ 31) ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಹೀಗಾಗಿ ಪರೀಕ್ಷೆ ರದ್ದುಪಡಿಸುವ ಬಗ್ಗೆ ಸ್ಪಷ್ಟ ನಿಲುವು ಗುರುವಾರದಂದು ಲಭ್ಯವಾಗುವ ಸಾಧ್ಯತೆ ಇದೆ. ಅಲ್ಲದೇ, ಸರ್ವೋಚ್ಛ ನ್ಯಾಯಾಲಯವು ಸರ್ಕಾರಕ್ಕೆ ಸಕಾರಣಗಳನ್ನಿಟ್ಟುಕೊಂಡು ತನ್ನ ನಿಲುವನ್ನು ತಿಳಿಸಲು ಸೂಚಿಸಿದೆ. ಕಳೆದ ಬಾರಿ ಪರೀಕ್ಷೆಯ ಕುರಿತು ವಿಸ್ತೃತವಾಗಿ ಚರ್ಚಿಸಿ ನಿಲುವು ತೆಗೆದುಕೊಂಡ ರೀತಿಯಲ್ಲೇ ಈ ಬಾರಿಯೂ ಎಲ್ಲಾ ಆಯಾಮಗಳಲ್ಲಿ ಯೋಚಿಸಿ ಅಂತಿಮ ನಿಲುವು ಏನೆಂದು ತಿಳಿಸಲು ಹೇಳಿದೆ.

ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ಮೇ 28ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನಿನ್ನೆ್ಗೆ (ಮೇ 31) ವಿಚಾರಣೆಯನ್ನು ಮುಂದೂಡಿತ್ತು. ಈಗಾಗಲೇ ಸಿಬಿಎಸ್​ಇ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಶಿಕ್ಷಣ ಸಚಿವಾಲಯವು ಇಂದು (ಜೂನ್1) ವೇಳಾಪಟ್ಟಿ ಮತ್ತು ಪರೀಕ್ಷೆಯ ಸ್ವರೂಪವನ್ನು ಪ್ರಕಟಿಸುವುದಾಗಿ ಹೇಳಿತ್ತು. ಆದರೆ ದೇಶದಲ್ಲಿ ಕೊವಿಡ್ ಸೋಂಕು ತೀವ್ರವಾದ ಹಿನ್ನೆಲೆ ಸಿಬಿಎಸ್​ಇ ಪರೀಕ್ಷೆಗಳನ್ನು ರದ್ದು ಕೋರಿ ಅರ್ಜಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದ್ದು, ಸಿಬಿಎಸ್​ಇ 12ನೇ ತರಗತಿಯ ಸುಮಾರು 300 ವಿದ್ಯಾರ್ಥಿಗಳು ಪರೀಕ್ಷೆ ನಡೆಸದಂತೆ ಸುಪ್ರೀಕೋರ್ಟ್ ಮೊರೆ ಹೋಗಿದ್ದಾರೆ.

ಕೊವಿಡ್ ಪಿಡುಗಿನ ನಡುವೆ ಸಿಬಿಎಸ್​ಇ 12 ತರಗತಿ ಪರೀಕ್ಷೆ ನಡೆಸುವ ಕುರಿತು  ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಒಮ್ಮತದ ನಿರ್ಧಾರ ಹೊರಹೊಮ್ಮಿರಲಿಲ್ಲ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್​ ಜೂನ್ 1ರಂದು ಪರೀಕ್ಷೆ ನಡೆಸುವ ಪದ್ಧತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರಿಸಲಿದ್ದಾರೆ ಎಂದು ಹೇಳಲಾಗಿತ್ತು. ಸಭೆಯಲ್ಲಿ ಚರ್ಚೆಯಾದ ಅಭಿಪ್ರಾಯಗಳ ಸಾರಾಂಶವನ್ನು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ತಲುಪಿಸಲಾಗಿದ್ದು, ಪ್ರಧಾನ ಮಂತ್ರಿಗಳ ಕಚೇರಿಯಿಂದ ಅಂತಿಮ ನಿರ್ಣಯ ಹೊರಬೀಳಲಿದೆ ಎಂದು ತಿಳಿಸಲಾಗಿತ್ತಾದರೂ ಇಂದು ಸಚಿವರನ್ನು ಆಸ್ಪತ್ರೆಗೆ ದಾಖಲಿಸಿರುವ ಕಾರಣ ನಿರ್ಧಾರ ತೆಗೆದುಕೊಳ್ಳುವುದು ಕೊಂಚ ತಡವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್​ಗೆ ಕೊರೊನಾ ಸೋಂಕು

Follow us on

Related Stories

Most Read Stories

Click on your DTH Provider to Add TV9 Kannada