Corona Vaccine: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್​ ಲಸಿಕೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ ಸರ್ಕಾರ

Fact Check: ಟ್ವಿಟರ್​ನಲ್ಲಿ ಭಾರೀ ಸದ್ದು ಮಾಡಿ ಹರಿದಾಡಲಾರಂಭಿಸಿದ ಈ ಸುದ್ದಿಯನ್ನು ಭಾರತ ಸರ್ಕಾರ ಅಲ್ಲಗಳೆದಿದೆ. ಸದರಿ ವಿಷಯದ ಕುರಿತಾಗಿ ಟ್ವಿಟರ್ ಮೂಲಕವೇ ಸ್ಪಷ್ಟನೆ ನೀಡಿದ ಸರ್ಕಾರ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿದೆ ಎನ್ನುವುದು ವಾಸ್ತವಕ್ಕೆ ದೂರವಾದ ಸಂಗತಿ ಎಂದು ತಿಳಿಸಿದೆ.

  • Publish Date - 3:32 pm, Mon, 10 May 21
Corona Vaccine: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್​ ಲಸಿಕೆ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ ಸರ್ಕಾರ
ಪ್ರಾತಿನಿಧಿಕ ಚಿತ್ರ

ದೆಹಲಿ: ಕೊರೊನಾ ಎರಡನೇ ಅಲೆ ವಿರುದ್ಧ ಸೆಣೆಸುತ್ತಿರುವ ಭಾರತ ಮೇ 1ನೇ ತಾರೀಕಿನಿಂದ 18ರಿಂದ 44 ವಯೋಮಾನದವರಿಗೂ ಕೊರೊನಾ ಲಸಿಕೆ ನೀಡುವುದಾಗಿ ತಿಳಿಸಿದೆ. ಜನವರಿ 16, 2021ರಿಂದ ಆರಂಭವಾದ ಲಸಿಕೆ ಅಭಿಯಾನದ ಆರಂಭಿಕ ಹಂತದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ವೃದ್ಧರು ಹಾಗೂ ಬಹು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿರಿಯ ನಾಗರೀಕರಿಗೆ ಆದ್ಯತೆ ನೀಡಿ ಲಸಿಕೆ ನೀಡಲಾಗಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ 18 ರಿಂದ 44 ವರ್ಷದವರಿಗೂ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆಯಾದರೂ ದೇಶದಲ್ಲಿ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿರುವುದರಿಂದ ಸರ್ಕಾರ ಎಣಿಸಿದಷ್ಟು ಸುಲಭವಾಗಿ ಲಸಿಕೆ ಹಂಚಿಕೆ ಆಗುತ್ತಿಲ್ಲ. ಸದ್ಯ ದೇಶದಲ್ಲಿ ಸೆರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿದ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್​ ಲಸಿಕೆಗಳನ್ನು ನೀಡಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ವಿತರಣೆಯ ಹಂತದಲ್ಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೀಗ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡಲಾರಂಭಿಸಿದ್ದು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್ ನೀಡುವುದಕ್ಕೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.

ಟ್ವಿಟರ್​ನಲ್ಲಿ ಭಾರೀ ಸದ್ದು ಮಾಡಿ ಹರಿದಾಡಲಾರಂಭಿಸಿದ ಈ ಸುದ್ದಿಯನ್ನು ಭಾರತ ಸರ್ಕಾರ ಅಲ್ಲಗಳೆದಿದೆ. ಸದರಿ ವಿಷಯದ ಕುರಿತಾಗಿ ಟ್ವಿಟರ್ ಮೂಲಕವೇ ಸ್ಪಷ್ಟನೆ ನೀಡಿದ ಸರ್ಕಾರ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿದೆ ಎನ್ನುವುದು ವಾಸ್ತವಕ್ಕೆ ದೂರವಾದ ಸಂಗತಿ ಎಂದು ತಿಳಿಸಿದೆ. ಅಲ್ಲದೇ, ಸದ್ಯದ ಮಟ್ಟಿಗೆ ಕೇವಲ 18 ವರ್ಷ ಮೇಲ್ಪಟ್ಟವರು ಮಾತ್ರ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದೆ.

ಕೊರೊನಾ ಎರಡನೇ ಅಲೆಯ ಬೆನ್ನಲ್ಲೇ ಮೂರನೇ ಅಲೆ ಬರಲಿದೆ. ಅದು ಇದಕ್ಕಿಂತಲೂ ಪರಿಣಾಮಕಾರಿಯಾಗಿರಲಿದ್ದು ಮಕ್ಕಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳನ್ನು ಜೋಪಾನ ಮಾಡಿ ಎಂಬ ಸಂಗತಿ ಹೊರಬಿದ್ದ ಬೆನ್ನಲ್ಲೇ ಇಂಥದ್ದೊಂದು ಟ್ವೀಟ್ ಹರಿದಾಡಿದೆ. 12 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಈಗಿಂದಲೇ ಲಸಿಕೆ ಸಿಗಲಿದೆ ಎಂಬ ಸುದ್ದಿಯಿಂದ ಪೋಷಕರು ಸಹಜವಾಗಿ ಖುಷಿಗೊಂಡಿದ್ದು ವಿಷಯವನ್ನು ಎಲ್ಲೆಡೆ ಹಂಚಿಕೊಂಡಿದ್ದಾರೆ. ಆದರೆ, ಈಗ ಸರ್ಕಾರ ನಿಡಿರುವ ಸ್ಪಷ್ಟನೆ ಪ್ರಕಾರ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಯಾವುದೇ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ.

ಇದನ್ನೂ ಓದಿ:
ಕರ್ನಾಟಕಕ್ಕೆ ಕಾಲಿಟ್ಟ ಮ್ಯೂಕೋಮೈಕೋಸಿಸ್! ಸೋಂಕಿನ ಲಕ್ಷಣಗಳೇನು, ಚಿಕಿತ್ಸೆಯೇನು? ಎಂಬ ಸಂಪೂರ್ಣ ವಿವರ ಇಲ್ಲಿದೆ 

Explainer: ಮಕ್ಕಳಿಗೆ ಸಮಸ್ಯೆ ತಂದೊಡ್ಡುವ ಕೊರೊನಾ 3ನೇ ಅಲೆ ಎದುರಿಸಲು ಸಿದ್ಧತೆ ಹೇಗಿರಬೇಕು? ತಜ್ಞರ ಅಭಿಪ್ರಾಯ ಇಲ್ಲಿದೆ