ಈಶಾನ್ಯ ರಾಜ್ಯ ಪ್ರವಾಸದಲ್ಲಿ ಶಾಂತಿ ಮಂತ್ರ ಪಠಿಸಿದ ಅಮಿತ್ ಶಾ

| Updated By: ganapathi bhat

Updated on: Apr 06, 2022 | 11:21 PM

ಈಶಾನ್ಯ ರಾಜ್ಯಗಳು ಪ್ರತ್ಯೇಕತಾವಾದ ಹಾಗೂ ಹಿಂಸಾತ್ಮಕ ಕೃತ್ಯಗಳಿಗಾಗಿ ಗುರುತಿಸಿಕೊಂಡಿದ್ದವು. ಆದರೆ, ಕಳೆದ ಆರು ವರ್ಷಗಳಿಂದ ಎಲ್ಲಾ ತೀವ್ರಗಾಮಿ ಗುಂಪುಗಳು ಒಂದರ ಹಿಂದೆ ಒಂದರಂತೆ ಶರಣಾಗತಿ ಸೂಚಿಸಿವೆ. ಇನ್ನುಳಿದ ತೀವ್ರಗಾಮಿ ಗುಂಪುಗಳು ಕೂಡ ಶಾಂತಿಯುತ ಸಮಾಜದ ಭಾಗವಾಗಲಿವೆ ಎಂದು ಅಮಿತ್​ ಶಾ ಹೇಳಿದರು.

ಈಶಾನ್ಯ ರಾಜ್ಯ ಪ್ರವಾಸದಲ್ಲಿ ಶಾಂತಿ ಮಂತ್ರ ಪಠಿಸಿದ ಅಮಿತ್ ಶಾ
ಮಣಿಪುರದ ಇಂಪಾಲ್​ನಲ್ಲಿ ಅಮಿತ್ ಶಾ
Follow us on

ಇಂಫಾಲ: ಈಶಾನ್ಯ ರಾಜ್ಯಗಳು ಪ್ರತ್ಯೇಕತಾವಾದ ಹಾಗೂ ಹಿಂಸಾತ್ಮಕ ಕೃತ್ಯಗಳಿಗಾಗಿ ಗುರುತಿಸಿಕೊಂಡಿದ್ದವು. ಆದರೆ, ಕಳೆದ ಆರು ವರ್ಷಗಳಿಂದ ಎಲ್ಲಾ ತೀವ್ರಗಾಮಿ ಗುಂಪುಗಳು ಒಂದರ ಹಿಂದೆ ಒಂದರಂತೆ ಶರಣಾಗತಿ ಸೂಚಿಸಿವೆ. ಆ ಮೂಲಕ, ರಾಜ್ಯದಲ್ಲಿ ಹಿಂಸೆ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಹೇಳಿದರು.

ಈಶಾನ್ಯ ರಾಜ್ಯಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಇಂದು (ಡಿ.27) ಇಂಫಾಲದಲ್ಲಿ ಮಾತನಾಡಿದರು. ಈಶಾನ್ಯ ರಾಜ್ಯಗಳ ಇನ್ನುಳಿದ ತೀವ್ರಗಾಮಿ ಗುಂಪುಗಳು ಕೂಡ ಹಿಂಸೆಯನ್ನು ದೂರವಿರಿಸಿ ಶಾಂತಿಯುತ ಸಮಾಜದ ಭಾಗವಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈವರೆಗೆ, ಎಂಟು ತೀವ್ರಗಾಮಿ ಗುಂಪುಗಳ 644 ಕೇಡರ್​ಗಳು, 2,500 ಶಸ್ತ್ರಾಸ್ತ್ರಗಳನ್ನು ಇಟ್ಟು ಶರಣಾಗಿದ್ದಾರೆ. ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಈಶಾನ್ಯ ರಾಜ್ಯಗಳ ಶಾಂತಿ ಮತ್ತು ಅಭಿವೃದ್ಧಿಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹಿಂದೆ ನಡೆಯುತ್ತಿದ್ದ ಬಂದ್​ಗಳಿಂದ ಮಣಿಪುರದಲ್ಲಿ ಅಗತ್ಯ ಸಾಮಾಗ್ರಿಗಳಿಗೂ ಕೊರತೆ ಉಂಟಾಗುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಯಾವುದೇ ಅಹಿತಕರ ಘಟನೆಗಳನ್ನು ನಾವು ಎದುರಿಸಿಲ್ಲ. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜ್ಯಕ್ಕೆ ಹೊಸ ಸ್ವರೂಪವನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಪಕ್ಷ ದೀರ್ಘಕಾಲದವರೆಗೆ ಈಶಾನ್ಯ ರಾಜ್ಯಗಳನ್ನು ಆಳಿತು. ಆದರೆ ಏನೂ ಮಾಡಲಿಲ್ಲ. ಕನಿಷ್ಠ ತೀವ್ರಗಾಮಿ ಸಂಘಟನೆಗಳೊಂದಿಗೆ ಮಾತಮಾಡುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. ಒಂದೆಡೆ ಅಭಿವೃದ್ಧಿ ಕುಂಠಿತವಾಗಿದ್ದರೆ ಮತ್ತೊಂದೆಡೆ ಜನರು ಸಾವುನೋವು ಅನುಭವಿಸುತ್ತಿದ್ದರು. ಅಭಿವೃದ್ಧಿಯ ಹೆಸರಲ್ಲಿ ಕಾಂಗ್ರೆಸ್ ಕೇವಲ ಭೂಮಿಪೂಜೆ ನಡೆಸಿದೆ. ನಾವು ಯೋಜನೆಗಳನ್ನು ಕಾರ್ಯರೂಪಗೊಳಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಮೇಲೆ ಟೀಕಾಪ್ರಹಾರ ಮಾಡಿದರು.

ಇದಕ್ಕೂ ಮೊದಲು, ಇಂಫಾಲಗೆ ಗಮಿಸಿದ ಅಮಿತ್ ಶಾ ಅವರನ್ನು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸ್ವಾಗತಿಸಿದರು. ಎರಡನೇ ದಿನದ ಪ್ರವಾಸದಲ್ಲಿರುವ ಅಮಿತ್ ಶಾ ಕೆಲವು ಸರ್ಕಾರಿ ಯೋಜನೆಗಳನ್ನು ಉದ್ಘಾಟಿಸಿದರು. ಈ ವೇಳೆ, ನೂತನ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸವನ್ನೂ ನಡೆಸಿದರು.

ತೆಲಂಗಾಣ, ಪಶ್ಚಿಮ ಬಂಗಾಳ ಬಳಿಕ ಅಮಿತ್ ಶಾ ಇದೀಗ ಈಶಾನ್ಯ ರಾಜ್ಯಗಳ ಕಡೆಗೆ ಮುಖಮಾಡಿದ್ದಾರೆ. ಅಸ್ಸಾಂ ಹಾಗೂ ಮಣಿಪುರದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್​ನಲ್ಲಿ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶಾ ಭೇಟಿ ರಾಜಕೀಯ ಕಣದ ರಂಗೇರಿಸಿತ್ತು.

ಅಸ್ಸಾಂ ಹೊರತಾಗಿ ಭಾರತೀಯ ಕಲೆ-ಸಂಸ್ಕೃತಿ ಪರಿಪೂರ್ಣವಾಗುವುದಿಲ್ಲ: ಅಮಿತ್ ಶಾ

 

Published On - 7:36 pm, Sun, 27 December 20