ಕೇಂದ್ರ ಸಚಿವ ಮತ್ತು ಬಿಜೆಪಿಯ (BJP) ಹಿರಿಯ ನಾಯಕ ನಿತಿನ್ ಗಡ್ಕರಿಯವರ (Nitin Gadkari) ದೆಹಲಿ ನಿವಾಸಕ್ಕೆ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ (Death Threat) ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನಿನ್ನೆ ಸಂಜೆ ದೆಹಲಿಯ ನಿವಾಸದಲ್ಲಿ ದೂರವಾಣಿ ಕರೆ ಮೂಲಕ ಕೊಲೆ ಬೆದರಿಕೆ ಬಂದಿತ್ತು. ಸಚಿವರ ಕಚೇರಿಯು ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಬಂದಿರುವ ಜೀವ ಬೆದರಿಕೆ ಕರೆಗೆ ಸಂಬಂಧಿಸಿದ ಮಾಹಿತಿಯನ್ನು ಸಚಿವರ ಸಿಬ್ಬಂದಿ ಪೊಲೀಸರಿಗೆ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವಿವರಗಳನ್ನು ಪರಿಶೀಲಿಸಲಾಗುತ್ತಿದ್ದು ತನಿಖೆ ನಡೆಯುತ್ತಿದೆ.
ಜನವರಿ 14ರಂದು ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಜಯೇಶ್ ಪೂಜಾರಿ ಅಲಿಯಾಸ್ ಕಾಂತ ಎಂಬ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದ. 100 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ ಆತ, ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ. ಜಯೇಶ್ ಪೂಜಾರಿ ಕೊಲೆ ಅಪರಾಧಿಯಾಗಿದ್ದು, ಕರ್ನಾಟಕದ ಬೆಳಗಾವಿಯಿಂದ ಈತನನ್ನು ಬಂಧಿಸಲಾಗಿದೆ. ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದಾದ ನಂತರ ಮಾರ್ಚ್ 21 ರಂದು ಪೂಜಾರಿ ಮತ್ತೆ ಕರೆ ಮಾಡಿ ನಾಗ್ಪುರದ ಬಿಜೆಪಿ ಲೋಕಸಭಾ ಸದಸ್ಯರಿಗೆ 10 ಕೋಟಿ ರೂಪಾಯಿ ಪಾವತಿಸದಿದ್ದರೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ:ನಿತೀಶ್ ಕುಮಾರ್ ಜೊತೆಗಿನ ಮೈತ್ರಿ ಮುರಿಯಲ್ಲ, ಆ ಪರಿಸ್ಥಿತಿ ಎಂದಿಗೂ ಉದ್ಭವಿಸುವುದಿಲ್ಲ: ಜಿತನ್ ರಾಮ್ ಮಾಂಝಿ
ಕೇಂದ್ರ ಗೃಹ ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಪಡೆದ ನಂತರ, ಎನ್‌ಐಎ ಅಧಿಕಾರಿಗಳು ಭಯೋತ್ಪಾದಕ ಕೋನದಲ್ಲಿ ತನಿಖೆಯನ್ನು ಪ್ರಾರಂಭಿಸಿದರು, ಪೂಜಾರಿ ಲಷ್ಕರ್-ಎ-ತೊಯ್ಬಾದ ದಕ್ಷಿಣ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ನಸೀರ್ ಸೇರಿದಂತೆ ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Tue, 16 May 23