AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’; ನಟ ನಾಸಿರುದ್ದೀನ್ ಶಾ ದಿಮಾಗಿ ನಕ್ಸಲ್ ವಿಡಿಯೋಗೆ ಸಚಿವ ಕಿರಣ್ ರಿಜಿಜು ಆಕ್ರೋಶ!

'ದಿಮಾಗಿ ನಕ್ಸಲ್' ಬ್ಯಾಡ್ಜ್ ಧರಿಸಿ ವಿಶ್ವವಿದ್ಯಾನಿಲಯಗಳ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಬೆಂಬಲಿಸಿದ್ದ ಹಿರಿಯ ನಟ ನಾಸಿರುದ್ದೀನ್ ಶಾ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾಸಿರುದ್ದೀನ್ ಶಾ ಅವರ ಈ ನಡೆ ಹಾಗೂ ವಿಚಾರಗಳು ಭಾರತದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಹಾಗೂ ಹಾನಿಕಾರಕ" ಎಂದು ಸಚಿವ ರಿಜಿಜು ಟೀಕಿಸಿದ್ದಾರೆ. ವಿಶ್ವವಿದ್ಯಾಲಯಗಳ ಶೈಕ್ಷಣಿಕ ವಾತಾವರಣ ಮತ್ತು ವಿದ್ಯಾರ್ಥಿಗಳ ಚಳವಳಿ ಕುರಿತು ನಾಸಿರುದ್ದೀನ್ ಶಾ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ, ಸಚಿವ ಕಿರಣ್ ರಿಜಿಜು ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.

'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ'; ನಟ ನಾಸಿರುದ್ದೀನ್ ಶಾ ದಿಮಾಗಿ ನಕ್ಸಲ್ ವಿಡಿಯೋಗೆ ಸಚಿವ ಕಿರಣ್ ರಿಜಿಜು ಆಕ್ರೋಶ!
ಕಿರಣ್ ರಿಜಿಜು ಮತ್ತು ನಾಸಿರುದ್ದೀನ್ ಶಾImage Credit source: PTI
ಸುಷ್ಮಾ ಚಕ್ರೆ
|

Updated on:Oct 29, 2026 | 3:28 PM

Share

ನವದೆಹಲಿ, ಅಕ್ಟೋಬರ್ 29: ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಪರವಾಗಿ ವಿಡಿಯೋ ಬಿಡುಗಡೆ ಮಾಡಿದ್ದ ಹಿರಿಯ ಬಾಲಿವುಡ್ ನಟ ನಾಸಿರುದ್ದೀನ್ ಶಾ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ಭಾರಿ ವಾಗ್ದಾಳಿ ನಡೆಸಿದ್ದು, ಅವರನ್ನು “ಅಪಾಯಕಾರಿ ಅರ್ಬನ್ ನಕ್ಸಲ್” ಎಂದು ಕರೆದಿದ್ದಾರೆ. ನಾಸಿರುದ್ದೀನ್ ಶಾ ಅವರ ನಡೆ ಮತ್ತು ವಿಚಾರಗಳು ಭಾರತದ ಪ್ರಜಾಪ್ರಭುತ್ವದ ಆಶಯಗಳಿಗೆ ತೀವ್ರ ಅಪಾಯಕಾರಿ ಎಂದು ಟೀಕಿಸಿರುವ ಸಚಿವ ಕಿರಣ್ ರಿಜಿಜು, ಇಷ್ಟು ವರ್ಷಗಳ ಕಾಲ ನಾಸಿರುದ್ದೀನ್ ಶಾ ಅವರ ನಿಜವಾದ ರಾಜಕೀಯ ಒಲವನ್ನು ಅರ್ಥೈಸಿಕೊಳ್ಳುವಲ್ಲಿ ನಾನೇ ಎಡವಿದ್ದೆ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದೇನು?:

“ನಾನು ನಾಸಿರುದ್ದೀನ್ ಶಾ ಅವರನ್ನು ಕೇವಲ ಒಳ್ಳೆಯ ನಟ ಎಂದು ಭಾವಿಸಿದ್ದೆ. ಅವರಿಗೆ ಗೌರವ ನೀಡುತ್ತಿದ್ದೆ ಮತ್ತು ಇಷ್ಟಪಡುತ್ತಿದ್ದೆ. ಆದರೆ ಅವರು ಅಪಾಯಕಾರಿ ಅರ್ಬನ್ ‘ದಿಮಾಗಿ ನಕ್ಸಲ್’ (ವೈಚಾರಿಕ ನಕ್ಸಲ್) ಎಂಬುದೇ ನನಗೆ ತಿಳಿದಿರಲಿಲ್ಲ! ಅವರ ನಿಜವಾದ ಗುಣ ಏನೆಂಬುದು ನನಗೆ ತಡವಾಗಿ ತಿಳಿಯಿತು. ಅವರ ಈ ವಿಚಾರಗಳು ಭಾರತೀಯ ಪ್ರಜಾಪ್ರಭುತ್ವಕ್ಕೆ ಅತ್ಯಂತ ಹಾನಿಕಾರಕ.” ಎಂದು ಕಿರಣ್ ರಿಜಿಜು ಹೇಳಿದ್ದಾರೆ.

ಇದನ್ನೂ ಓದಿ: ’ವೈಚಾರಿಕ ನಕ್ಸಲಿಸಂ ಎಂಬ ಹೋಮಿಯೋಪತಿ ಮಾತ್ರೆ ನೀಡಿದ್ದೆ’; ಪ್ರಧಾನಿ ಮೋದಿ ವಾಗ್ದಾಳಿ

ನಟ ನಾಸಿರುದ್ದೀನ್ ಶಾ ವೀಡಿಯೊದಲ್ಲಿ ಹೇಳಿದ್ದೇನು?:

ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ತಮ್ಮ ಶರ್ಟ್ ಮೇಲೆ ‘ದಿಮಾಗಿ ನಕ್ಸಲ್’ ಎಂಬ ಬ್ಯಾಡ್ಜ್ ಧರಿಸಿದ್ದ ನಾಸಿರುದ್ದೀನ್ ಶಾ, “ನಾನು ‘ದಿಮಾಗಿ ನಕ್ಸಲ್’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕೆಲವರು ನನ್ನಂತಹ ಜನರಿಗೆ ದೇಶದ್ರೋಹಿ, ‘ತುಕ್ಡೆ ತುಕ್ಡೆ ಗ್ಯಾಂಗ್’ ಸೇರಿದಂತೆ ಏನೆಲ್ಲಾ ಅಡ್ಡಹೆಸರುಗಳನ್ನು ಇಟ್ಟಿದ್ದಾರೋ ನನಗೆ ಗೊತ್ತಿಲ್ಲ. ಈ ದೇಶದಲ್ಲಿ ನಿಜವಾದ ‘ತುಕ್ಡೆ ತುಕ್ಡೆ ಗ್ಯಾಂಗ್’ ಇದ್ದರೆ ಅದು ಈ ಸರ್ಕಾರ” ಎಂದು ವಾಗ್ದಾಳಿ ನಡೆಸಿದ್ದರು.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ, ಜೆಎನ್‌ಯು ಮತ್ತು ಸತ್ಯಜಿತ್ ರೇ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಬೆಂಬಲಿಸಿದ ನಾಸಿರುದ್ದೀನ್ ಶಾ, “ದೇಶದ ಯುವಕರ ಧೈರ್ಯವನ್ನು ಕುಗ್ಗಿಸಲು ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಸರ್ಕಾರ ಇನ್ನು ಯಾವ ಹಂತಕ್ಕೆ ಹೋಗುತ್ತದೆ?” ಎಂದು ಪ್ರಶ್ನಿಸಿದ್ದರು. ಅವರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ‘ವೈಚಾರಿಕ ನಕ್ಸಲರನ್ನು ಗುರುತಿಸಿ, ಬಹಿಷ್ಕರಿಸಬೇಕು’; ಪ್ರಧಾನಿ ಮೋದಿ ವಾಗ್ದಾಳಿ

‘ದಿಮಾಗಿ ನಕ್ಸಲ್’ ಎಂಬ ಪದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವೊಂದರಲ್ಲಿ ಮೊದಲ ಬಾರಿಗೆ ಬಳಸಿದ್ದರು. ಉನ್ನತ ಶಿಕ್ಷಣ ಪಡೆದಿದ್ದರೂ ದೇಶವಿರೋಧಿ ಹಾಗೂ ತೀವ್ರಗಾಮಿ ಮಾವೋವಾದಿ ಚಿಂತನೆಗಳನ್ನು ಬೆಂಬಲಿಸುವ ವಿಪಕ್ಷಗಳು ಮತ್ತು ಬುದ್ಧಿಜೀವಿಗಳನ್ನು ಲೇವಡಿ ಮಾಡಲು ಆಡಳಿತಾರೂಢ ಬಿಜೆಪಿ ನಾಯಕರು ಈ ಪದವನ್ನು ಬಳಸುತ್ತಾ ಬಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:27 pm, Thu, 29 October 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More