ರಾಜಕೀಯ ತೊರೆಯಬೇಕೆಂದು ಆಗಾಗ್ಗೆ ಅನಿಸುತ್ತಿರುತ್ತದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಸಮಾಜದಲ್ಲಿನ ಬದಲಾವಣೆಯೇ ರಾಜಕೀಯ ಎಂದು ನಾನು ನಂಬಿದ್ದೇನೆ. ಆದರೆ ರಾಜಕೀಯ ಎಂದರೆ ಅಧಿಕಾರ ಎಂಬಂತಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ದೆಹಲಿ: ರಾಜಕೀಯ ತೊರೆಯಬೇಕು ಎಂದು ಆಗಾಗ್ಗೆ ಅನಿಸುತ್ತಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಶನಿವಾರ ಮಹಾರಾಷ್ಟ್ರದ (Maharashtra) ನಾಗ್ಪುರ್ನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಗಡ್ಕರಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ರಾಜಕೀಯ ತ್ಯಜಿಸಿಬಿಡಲೇ ಎಂದು ಪದೇ ಪದೇ ಯೋಚಿಸಿದ್ದೇನೆ. ರಾಜಕೀಯ ಬಿಟ್ಟು ಬೇರೆ ಜೀವನವೂ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಗಿರೀಶ್ ಗಾಂಧಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಗಡ್ಕರಿ ಹೇಳಿದ್ದಾರೆ. ಸಮಾಜದಲ್ಲಿನ ಬದಲಾವಣೆಯೇ ರಾಜಕೀಯ ಎಂದು ನಾನು ನಂಬಿದ್ದೇನೆ. ಆದರೆ ರಾಜಕೀಯ ಎಂದರೆ ಅಧಿಕಾರ ಎಂಬಂತಾಗಿದೆ. ಮಾಜಿ ಶಾಸಕರಾಗಿದ್ದ ಗಿರೀಶ್ ಗಾಂಧಿ 2014ರಲ್ಲಿ ಶರದ್ ಪವಾರ್ ಅವರ ಎನ್ ಸಿಪಿಗೆ ಬಿಟ್ಟು ಬಂದಿದ್ದರು. ಇಂದು ನಾವು ರಾಜಕೀಯವೆಂದರೆ ಅಧಿಕಾರ ಎಂದೇ ನೋಡುತ್ತಿದ್ದೇವೆ. ಸಾಮಾಜಿಕ- ಆರ್ಥಿಕವಾಗಿ ಅಭಿವೃದ್ಧಿ ತರಲಿರುವ ಉಪಕರಣವಾಗಿದೆ ರಾಜಕೀಯ. ಆದ್ದರಿಂದಲೇ ಇಂದಿನ ರಾಜಕಾರಣಿಗಳು ಸಮಾಜದಲ್ಲಿ ಶಿಕ್ಷಣ, ಕಲೆ ಮೊದಲಾದವುಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದ್ದಾರೆ.
ರಾಜಕೀಯ ಎಂಬ ಪದದ ಅರ್ಥವನ್ನು ನಾವು ತಿಳಿಯಬೇಕು. ಅದು ಸಮಾಜ, ದೇಶದ ಕಲ್ಯಾಣವೇ ಅಥವಾ ಸರ್ಕಾರದ ಭಾಗವಾಗುವುದೇ ಎಂದು ಗಡ್ಕರಿ ಕೇಳಿದ್ದಾರೆ.