
ಭೋಪಾಲ್ ಫೆಬ್ರವರಿ 19: ಮಧ್ಯಪ್ರದೇಶದ (Madhya Pradesh) ದಾಮೋಹ್‌ನಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ವಧು ಹುಡುಕಲು ವಿಶಿಷ್ಟ ವಿಧಾನವೊಂದನ್ನು ಅನುಸರಿಸಿದ್ದಾರೆ. ಅದೇನಪ್ಪಾ ಎಂದರೆ ತಮ್ಮ ಸ್ವವಿವರಗಳ ಹೋರ್ಡಿಂಗ್ನ್ನು ಇ-ರಿಕ್ಷಾದಲ್ಲಿಟ್ಟು ವಧು ಅನ್ವೇಷಣೆ ಮಾಡುತ್ತಿರುವುದು. ಈ ಬಗ್ಗೆ ಇಂಡಿಯಾ ಟುಡೇ ಜತೆ ಮಾತನಾಡಿದ ದೀಪೇಂದ್ರ ರಾಥೋಡ್ (Deependra Rathore), ನಾನು ಮದುವೆ ಆಗಲು ಬಯಸುತ್ತೇನೆ. ಆದರೆ ಹೆಣ್ಣೇ ಸಿಗುತ್ತಿಲ್ಲ. “ಸಮಾಜದಲ್ಲಿ ಯುವತಿಯರ ಕೊರತೆ” ಇದೆ. ಯಾವುದೇ ಜಾತಿ ಅಥವಾ ಧರ್ಮ ನಮಗೆ ಸಮಸ್ಯೆ ಇಲ್ಲ. ನನ್ನನ್ನು ಮದುವೆ ಆಗಲು ಒಪ್ಪಿಗೆ ಇರುವ ಯಾವುದೇ ಮಹಿಳೆ ಮದುವೆಯ ಪ್ರಸ್ತಾಪದೊಂದಿಗೆ ನನ್ನನ್ನ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ವಧು ಅನ್ವೇಷಣೆಗಾಗಿ ಅವರು ಮ್ಯಾಟ್ರಿಮೋನಿಯಲ್ ಗ್ರೂಪ್ ನಲ್ಲೂ ಇದ್ದಾರೆ. ಆದರೆ ದಾಮೋಹ್‌ನಿಂದ ಹುಡುಗಿ ಸಿಕ್ಕಲೇ ಇಲ್ಲ. ಹೀಗೆ ಹೋದರೆ ಸರಿಯಾಗಲ್ಲ, ನಾನೇ ಏನಾದರೂ ಮಾಡಬೇಕು ಎಂದು ಅವರು ಸ್ವವಿವರ ಬರೆದ ಹೋರ್ಡಿಂಗ್ ನ್ನು ತಮ್ಮ ಇ ರಿಕ್ಷಾದಲ್ಲಿರಿಸಿ ಸಂಚರಿಸುತ್ತಿದ್ದಾರೆ. ಅಂದಹಾಗೆ ರಾಥೋಡ್,ದಾಮೋಹ್ ಹೊರಗಿನ ಮಹಿಳೆಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಹೋರ್ಡಿಂಗ್‌ನಲ್ಲಿ ದೀಪೇಂದ್ರ ರಾಥೋಡ್ ಅವರ ಎತ್ತರ, ಹುಟ್ಟಿದ ದಿನಾಂಕ ಮತ್ತು ಸಮಯ, ರಕ್ತದ ಗುಂಪು, ಶೈಕ್ಷಣಿಕ ಅರ್ಹತೆಗಳು, ‘ಗೋತ್ರ’ ಇತ್ಯಾದಿ ವಿವರಗಳಿವೆ.
ದೀಪೇಂದ್ರ ರಾಥೋಡ್ ಅವರ ಪೋಷಕರು ಸಹ ಅವರ ವಿಧಾನವನ್ನು ಬೆಂಬಲಿಸಿದರು ಎಂದು ಹೇಳಿದರು. “ನನ್ನ ಪೋಷಕರು ಪೂಜೆಯಲ್ಲಿ ನಿರತರಾಗಿದ್ದಾರೆ, ಆದ್ದರಿಂದ ನನಗೆ ಹುಡುಗಿಯನ್ನು ಹುಡುಕಲು ಅವರಿಗೆ ಸಮಯವಿಲ್ಲ. ಆದ್ದರಿಂದ ನಾನು ನನಗಾಗಿ ಈ ರೀತಿ ಮಾಡಬೇಕಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಇಂದು ಸುದಾಮ ಕೃಷ್ಣನಿಗೆ ಚೀಲದಲ್ಲಿ ಅಕ್ಕಿ ನೀಡುತ್ತಿದ್ದರೆ ಅದು ಭ್ರಷ್ಟಾಚಾರ ಆಗುತ್ತಿತ್ತು: ಮೋದಿ
ರಾಥೋಡ್ ಅವರು ಪ್ರಸ್ತುತ ತಮ್ಮದೇ ಇ-ರಿಕ್ಷಾವನ್ನು ಓಡಿಸುವ ಮೂಲಕ ತಮ್ಮ ಕುಟುಂಬಕ್ಕೆ ನೆರವು ನೀಡುತ್ತಿದ್ದಾರೆ. ನನ್ನ ಜೀವನ ಸಂಗಾತಿಯಾಗುವವರು ಯಾವಾಗಲೂ ಸಂತೋಷವಾಗಿರುತ್ತಾರೆ ಎಂದು ದೀಪೇಂದ್ರ ರಾಥೋಡ್ ಹೇಳಿದ್ದಾರೆ.
ಅಂದ ಹಾಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಗಂಡು ಮಕ್ಕಳು ಹೇಳುತ್ತಿರುವುದನ್ನು ಕೇಳುತ್ತಿದ್ದೇವೆ. ಇತ್ತೀಚೆಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮಕ್ಕೆ ಗ್ರಾಮದ ರೈತ ಮಹಿಳೆಯರು ತಮ್ಮ ಗಂಡು ಮಕ್ಕಳಿಗೆ ಒಳ್ಳೆ ಕನ್ಯೆ ಸಿಗಲಿ ಅಂತ ಹರಕೆ ಕಟ್ಟಿ ಪಾದಯಾತ್ರೆ ಮಾಡಿದ್ದು ಸುದ್ದಿಯಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ