
ನವದೆಹಲಿ, ಆಗಸ್ಟ್ 4: ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ದೇಶದ ಮೇಲೆ ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಿರ್ಧಾರಕ್ಕೆ ಭಾರತ ತೀವ್ರವಾಗಿ ತಿರುಗೇಟು ನೀಡಿದೆ. ರಷ್ಯಾದೊಂದಿಗೆ ಅಮೆರಿಕ ತಮ್ಮದೇ ಆದ ಬೃಹತ್ ವ್ಯಾಪಾರವನ್ನು ಹೊಂದಿದ್ದರೂ ಭಾರತವನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿರುವ ಭಾರತ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಡಬಲ್ ಸ್ಟಾಂಡರ್ಡ್ ಅನ್ನು ಭಾರತ ಸರ್ಕಾರ ಬಹಿರಂಗಪಡಿಸಿದೆ. ಭಾರತದ ಆಮದು ತನ್ನ ನಾಗರಿಕರಿಗೆ ಕೈಗೆಟುಕುವ ಇಂಧನವನ್ನು ಖಚಿತಪಡಿಸುತ್ತವೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ವಿನಾಕಾರಣ ಭಾರತವನ್ನು ಟಾರ್ಗೆಟ್ ಮಾಡುತ್ತಿರುವುದು ನ್ಯಾಯಸಮ್ಮತವಲ್ಲ. ಇದು ಅಸಮರ್ಥನೀಯ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಂಡಿದ್ದಕ್ಕಾಗಿ ಭಾರತವನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿತ್ತು. ವಾಸ್ತವವಾಗಿ, ಸಂಘರ್ಷದ ನಂತರ ಸಾಂಪ್ರದಾಯಿಕ ಸರಬರಾಜುಗಳನ್ನು ಯುರೋಪಿಗೆ ತಿರುಗಿಸಿದ ಕಾರಣ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಸಮರ್ಥಿಸಿಕೊಂಡಿದೆ.
Statement by Official Spokesperson⬇️
🔗 https://t.co/O2hJTOZBby pic.twitter.com/RTQ2beJC0W— Randhir Jaiswal (@MEAIndia) August 4, 2025
2024ರಲ್ಲಿ ಯುರೋಪಿಯನ್ ಒಕ್ಕೂಟವು ರಷ್ಯಾದೊಂದಿಗೆ ಯೂರೋ 67.5 ಬಿಲಿಯನ್ ಸರಕುಗಳ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿತ್ತು. ಇದು ರಷ್ಯಾದೊಂದಿಗಿನ ಭಾರತದ ಒಟ್ಟು ವ್ಯಾಪಾರಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. 2024ರಲ್ಲಿ ಯುರೋಪಿಯನ್ ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದು ದಾಖಲೆಯ 16.5 ಮಿಲಿಯನ್ ಟನ್‌ಗಳನ್ನು ತಲುಪಿದೆ. ಯುರೋಪ್-ರಷ್ಯಾ ವ್ಯಾಪಾರವು ಕೇವಲ ಇಂಧನವನ್ನು ಮಾತ್ರವಲ್ಲದೆ ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಸಹ ಒಳಗೊಂಡಿದೆ ಎಂದು ಪ್ರಸ್ತಾಪಿಸಿದ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇದೀಗ ಅಮೆರಿಕ ಭಾರತ ಹಾಗೂ ರಷ್ಯಾದ ನಡುವಿನ ವ್ಯಾಪಾರ ಸಂಬಂಧವನ್ನು ಟಾರ್ಗೆಟ್ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಸುಂಕದ ಅಸ್ತ್ರ ಪ್ರಯೋಗಿಸಿದ ಅಮೆರಿಕ; ರಷ್ಯಾದ ತೈಲ ಖರೀದಿಸಿದ್ದಕ್ಕೆ ಭಾರತಕ್ಕೆ ಟ್ರಂಪ್ ಬೆದರಿಕೆ
ಅಮೆರಿಕ ತನ್ನ ಪರಮಾಣು ಉದ್ಯಮಕ್ಕೆ ಯುರೇನಿಯಂ ಹೆಕ್ಸಾಫ್ಲೋರೈಡ್, ತನ್ನ ವಿದ್ಯುತ್ ವಾಹನ ಉದ್ಯಮಕ್ಕೆ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ. ಆದರೆ, ಭಾರತದ ಮೇಲೆ ಮಾತ್ರ ಗೂಬೆ ಕೂರಿಸಿ ಸುಂಕದ ಬೆದರಿಕೆಯೊಡ್ಡುತ್ತಿದೆ ಎಂದು ಭಾರತ ಅಮೆರಿಕದ ಎರಡು ಮುಖವನ್ನು ಬಹಿರಂಗಪಡಿಸಿದೆ. ಇದೇ ಮೊದಲ ಬಾರಿಗೆ ಭಾರತ ಅಮೆರಿಕದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದೆ.
ಟ್ರಂಪ್ ಹೇಳಿದ್ದೇನು?:
ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ ಭಾರೀ ಲಾಭಕ್ಕೆ ಮುಕ್ತ ಮಾರುಕಟ್ಟೆಗಳಲ್ಲಿ ಅದನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ. “ರಷ್ಯಾದ ಯುದ್ಧ ಯಂತ್ರ”ದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಭಾರತಕ್ಕೆ ಕಾಳಜಿ ಇಲ್ಲ ಎಂದು ಟ್ರಂಪ್ ಟೀಕಿಸಿದ್ದರು.
ಇದನ್ನೂ ಓದಿ: ಭಾರತವು ರಷ್ಯಾಗೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ, ನಾವಂತೂ ಒಪ್ಪಲ್ಲ ಎಂದ ಟ್ರಂಪ್ ಆಪ್ತ ಸಹಾಯಕ
ಟ್ರಂಪ್ ಈ ಹಿಂದೆ ಭಾರತದ ಮೇಲೆ 25% ಸುಂಕ ಮತ್ತು ರಷ್ಯಾದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಿದ್ದಕ್ಕಾಗಿ ಅನಿರ್ದಿಷ್ಟ ದಂಡವನ್ನು ವಿಧಿಸಿದ್ದರು. ಆದರೆ, ಅವರು ಸುಂಕವನ್ನು ಎಷ್ಟು ಹೆಚ್ಚಿಸುತ್ತಾರೆ ಎಂಬುದನ್ನು ಖಚಿತಪಡಿಸಿರಲಿಲ್ಲ. “ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಅಷ್ಟು ಮಾತ್ರವಲ್ಲ, ಖರೀದಿಸಿದ ತೈಲದ ಬಹುಪಾಲು ಭಾಗವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಸಾವನ್ನಪ್ಪದ್ದಾರೆ ಎಂಬುದು ಭಾರತಕ್ಕೆ ಮುಖ್ಯವಲ್ಲ. ಈ ಕಾರಣದಿಂದಾಗಿ, ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ” ಎಂದು ಟ್ರಂಪ್ ಪೋಸ್ಟ್ ಮಾಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:11 pm, Mon, 4 August 25