UP Assembly Election Date 2022: ಉತ್ತರ ಪ್ರದೇಶದ ಚುನಾವಣೆ ಮುಂದೂಡಿಕೆಯಿಲ್ಲ; ಜ. 5ಕ್ಕೆ ಮತದಾರರ ಪಟ್ಟಿ ಬಿಡುಗಡೆ

| Updated By: ಸುಷ್ಮಾ ಚಕ್ರೆ

Updated on: Dec 30, 2021 | 1:34 PM

UP Elections 2022: 80 ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ಡಯಾಬಿಟಿಸ್, ಕೊವಿಡ್ ಸೋಂಕು ತಗುಲಿರುವ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.

UP Assembly Election Date 2022: ಉತ್ತರ ಪ್ರದೇಶದ ಚುನಾವಣೆ ಮುಂದೂಡಿಕೆಯಿಲ್ಲ; ಜ. 5ಕ್ಕೆ ಮತದಾರರ ಪಟ್ಟಿ ಬಿಡುಗಡೆ
ಚುನಾವಣಾ ಆಯೋಗದ ಆಯುಕ್ತ ಸುಶೀಲ್ ಚಂದ್ರ
Follow us on

ಲಕ್ನೋ: ಉತ್ತರ ಪ್ರದೇಶ (Uttar Pradesh Election), ಉತ್ತರಾಖಂಡ (Uttarakhand Election 2022), ಮಣಿಪುರ (Manipur Election 2022), ಗೋವಾ (Goa Election 2022) ಮತ್ತು ಪಂಜಾಬ್‌ (Punjab Election 2022) ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ (Sushil Chandra) ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿದ್ದಾರೆ. ಒಮಿಕ್ರಾನ್ (Omicron) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗುವುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಆ ವದಂತಿಯನ್ನು ಅಲ್ಲಗಳೆದಿರುವ ಸುಶೀಲ್ ಚಂದ್ರ, 2022ರಲ್ಲಿ ನಡೆಯಲಿರುವ ಚುನಾವಣೆಯನ್ನು ಮುಂದೂಡುವುದಿಲ್ಲ. ಎಲ್ಲ ರೀತಿಯ ಕೊವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವ ಮೂಲಕ ಚುನಾವಣೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಮ್ಮನ್ನು ಭೇಟಿಯಾಗಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕೊವಿಡ್ ನಿಯಮಾವಳಿಗಳನ್ನು ಅನುಸರಿಸಿ ಈಗಾಗಲೇ ನಿಗದಿಯಾಗಿರುವ ಸಮಯದಲ್ಲೇ ಚುನಾವಣೆಯನ್ನು ನಡೆಸಬೇಕು ಎಂದು ಮನವಿ ಮಾಡಿದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ಡಯಾಬಿಟಿಸ್, ಕೊವಿಡ್ ಸೋಂಕು ತಗುಲಿರುವ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶಕ್ಕೆ ಮೂರು ದಿನಗಳ ಪ್ರವಾಸದಲ್ಲಿದ್ದ ಚುನಾವಣಾ ಆಯೋಗದ ನಿಯೋಗವು ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾ ಮತ್ತು ವಿಭಾಗ ಮಟ್ಟದ ಅಧಿಕಾರಿಗಳನ್ನು ನಿನ್ನೆ ಭೇಟಿ ಮಾಡಿತ್ತು. ಅದರ ಬೆನ್ನಲ್ಲೇ ಇಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸುದ್ದಿಗೋಷ್ಠಿ ನಡೆಸಿ, ಚುನಾವಣೆಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಚುನಾವಣಾ ಆಯೋಗದ ನಿಯೋಗವು ಜಿಲ್ಲಾಧಿಕಾರಿಗಳು, ಪೊಲೀಸ್ ಮುಖ್ಯಸ್ಥರು, ಕಮಿಷನರ್‌ಗಳು, ಐಜಿಗಳು, ಡಿಐಜಿಗಳು ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿತು. ಹಾಗೇ, ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿತು” ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಆಯೋಗವು ಚುನಾವಣೆ ನಡೆಯುವ ಇತರ ರಾಜ್ಯಗಳಾದ ಪಂಜಾಬ್, ಗೋವಾ ಮತ್ತು ಉತ್ತರಾಖಂಡಕ್ಕೆ ಈಗಾಗಲೇ ಭೇಟಿ ನೀಡಿದೆ.

ಸುದ್ದಿಗೋಷ್ಠಿಯ ಮುಖ್ಯಾಂಶಗಳು:
– ಈಗಾಗಲೇ ನಿಗದಿಯಾಗಿರುವಂತೆ ವಿಧಾನಸಭೆ ಚುನಾವಣೆ ನಡೆಯಲಿದೆ.
– ಅಂತಿಮ ಮತದಾರರ ಪಟ್ಟಿಯನ್ನು ಜನವರಿ 5ರಂದು ಬಿಡುಗಡೆ ಮಾಡಲಾಗುವುದು.
– ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಚುನಾವಣಾ ಆಯೋಗವನ್ನು ಭೇಟಿಯಾಗಿ ಎಲ್ಲಾ ಕೋವಿಡ್ 19 ಪ್ರೋಟೋಕಾಲ್‌ಗಳನ್ನು ಅನುಸರಿಸಿ ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.
– ಕೋವಿಡ್ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ನಿರ್ವಹಿಸಿ ಚುನಾವಣೆ ನಡೆಸಲಾಗುವುದು.
– ಎಲ್ಲಾ ರಾಜಕೀಯ ಪಕ್ಷಗಳು ನಿಗದಿಯಂತೆ ಚುನಾವಣೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿವೆ.
– ಚುನಾವಣೆಗೆ ಒಳಪಟ್ಟಿರುವ ಎಲ್ಲಾ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ನಾವು ಪರಿಶೀಲಿಸಿದ್ದೇವೆ ಎಂದು ಸಿಇಸಿ ಸುಶೀಲ್ ಚಂದ್ರ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾಮ್ ಪ್ರಕರಣಗಳ ಹಿನ್ನೆಲೆಯಲ್ಲಿ ರ್ಯಾಲಿಗಳು ಮತ್ತು ಚುನಾವಣೆಗಳನ್ನು ಮುಂದೂಡುವಂತೆ ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರಾ ಮಹಿಳಾ ಮತದಾರರು?; ವಿಸ್ತೃತ ವರದಿ ಇಲ್ಲಿದೆ

5 ರಾಜ್ಯಗಳ ವಿಧಾನಸಭೆ ಚುನಾವಣೆ ಮುಂದೂಡುವುದು ಅಸಾಧ್ಯ, ಲಸಿಕೆ ನೀಡಿಕೆ ವೇಗ ಹೆಚ್ಚಿಸಿ ಎಂದ ಚುನಾವಣಾ ಆಯೋಗ

Published On - 12:58 pm, Thu, 30 December 21