BJP MP: ವೇದಿಕೆಯಲ್ಲೇ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಸಂಸದ; ಘಟನೆಯೇನು? ವಿಡಿಯೋ ಇಲ್ಲಿದೆ

| Updated By: shivaprasad.hs

Updated on: Dec 19, 2021 | 8:18 AM

BJP MP slaps wrestler: ಉತ್ತರ ಪ್ರದೇಶ ಬಿಜೆಪಿ ಸಂಸದರೊಬ್ಬರು ರಾಷ್ಟ್ರೀಯ ಕುಸ್ತಿ ಚಾಂಪಿಯನ್​ಶಿಪ್ ಸಂದರ್ಭ ವೇದಿಕೆಯಲ್ಲಿ ವಯೋಮಿತಿ ಮೀರಿ ಭಾಗವಹಿಸಲು ಬಯಸಿದ ಯುವಕನೋರ್ವನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯನ್ನು ಸಂಸದರು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿದೆಡೆ ಸಂಸದರ ನಡೆಯ ಕುರಿತು ಟೀಕೆ ವ್ಯಕ್ತವಾಗಿದೆ.

BJP MP: ವೇದಿಕೆಯಲ್ಲೇ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಸಂಸದ; ಘಟನೆಯೇನು? ವಿಡಿಯೋ ಇಲ್ಲಿದೆ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
Follow us on

ಜಾರ್ಖಂಡ್: ರಾಂಚಿಯಲ್ಲಿ ಕ್ರೀಡಾಕೂಟ ಸಮಾರಂಭದ ವೇದಿಕೆಯೊಂದರಲ್ಲಿ ಬಿಜೆಪಿ ಸಂಸದರೊಬ್ಬರು ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ರಾಂಚಿಯ ಶಹೀದ್ ಗಣಪತ್ ರಾಯ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಶುಕ್ರವಾರ ಚಾಂಪಿಯನ್‌ಶಿಪ್ ಮುಕ್ತಾಯವಾಗಿದ್ದು, ಉದ್ಘಾಟನಾ ದಿನದಂದು ಕಪಾಳಮೋಕ್ಷ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರೂ ಆಗಿರುವ ಉತ್ತರ ಪ್ರದೇಶದ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಯುವಕನೋರ್ವನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಘಟನೆಯೇನು?
ಕುಸ್ತಿಪಟು ಉತ್ತರ ಪ್ರದೇಶ ಮೂಲದವರಾಗಿದ್ದು, ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ವಯೋಮಿತಿ ಮೀರಿತ್ತು. ಇದರಿಂದಾಗಿ ಅವರಿಗೆ ಅವಕಾಶ ನೀಡಲಿಲ್ಲ. ಆದರೆ ಭಾಗವಹಿಸಲು ಅವಕಾಶ ನೀಡುವಂತೆ ಸಂಸದರ ಮನವೊಲಿಕೆಗೆ ಕುಸ್ತಿಪಟು ಮುಂದಾದರು. ಆಗ ತಾಳ್ಮೆ ಕಳೆದುಕೊಂಡ ಸಂಸದರು ಎರಡೆರಡು ಬಾರಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಯುವಕನನ್ನು ವೇದಿಕೆಯಿಂದ ಇಳಿಸಲಾಗಿದೆ.

ಜಾರ್ಖಂಡ್ ಕುಸ್ತಿ ಅಸೋಸಿಯೇಷನ್ ​​ತನ್ನ ಪ್ರತಿಕ್ರಿಯೆಯಲ್ಲಿ, ಕುಸ್ತಿಪಟು ಮತ್ತು ಆತನಿಗೆ ಭಾಗವಹಿಸಲು ಬಿಡದ ವಿಚಾರದ ಕುರಿತು ತಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ.

ಸಂಸದರ ಪ್ರತಿಕ್ರಿಯೆ ಏನು?
ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಇದು ವಯೋಮಿತಿ ವಂಚನೆಯ ಪ್ರಕರಣ ಎಂದು ಹೇಳಿದ್ದಾರೆ. ‘‘ಆ ಹುಡುಗ ವೇದಿಕೆಯ ಮೇಲೆ ಬಂದು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಒತ್ತಾಯಿಸಿದ. ಆದರೆ ನಾನು ಅವನಿಗೆ ಅವಕಾಶ ನೀಡಲಿಲ್ಲ ಮತ್ತು ನಾವು ಈಗಾಗಲೇ ಇನ್ನೂ 5 ಕುಸ್ತಿಪಟುಗಳನ್ನು ಅನರ್ಹಗೊಳಿಸಿದ್ದರಿಂದ ವೇದಿಕೆಯಿಂದ ಕೆಳಗಿಳಿಯುವಂತೆ ಆತನಿಗೆ ನಯವಾಗಿ ಹೇಳಿದೆ. ಎಲ್ಲರೂ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದು, ವಯೋಮಿತಿಯನ್ನು ವಂಚಿಸಿದ್ದಾರೆ. ಯುಪಿ ಮಾತ್ರವಲ್ಲ, ವಯಸ್ಸು ಮೀರಿದ ಯಾವುದೇ ಆಟಗಾರ ದೆಹಲಿ, ಹರಿಯಾಣ ಅಥವಾ ಇತರ ಯಾವುದೇ ರಾಜ್ಯಕ್ಕೆ ಸೇರಿದವರಾಗಿದ್ದರೂ ನಾನು ಅನುಮತಿ ನೀಡುತ್ತಿರಲಿಲ್ಲ. ನಾನು ಇದನ್ನು ರಾಜ್ಯಗಳ ಆಧಾರದ ಮೇಲೆ ಮಾಡಲು ಪ್ರಾರಂಭಿಸಿದರೆ ದೇಶದಲ್ಲಿ ಕುಸ್ತಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ’’ ಎಂದು ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

ನೆಟ್ಟಿಗರೊಬ್ಬರು ಹಂಚಿಕೊಂಡ ಘಟನೆಯ ವಿಡಿಯೋ ಇಲ್ಲಿದೆ:


ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಕಾರ್ಯದರ್ಶಿ ವಿಂದೋ ತೋಮರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಯುವಕನಿಗೆ ಭಾಗವಹಿಸಲು ಸಾಧ್ಯವಿಲ್ಲ ಎನ್ನಲಾಗಿತ್ತು. ಆದರೆ ಆತ ಸಂಸದರ ಬಳಿ ಬಂದು ಅನುಚಿತವಾಗಿ ವರ್ತಿಸಿದ. ಅಲ್ಲದೇ ಅವರೂ ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದರಿಂದ ಅನುಮತಿ ನೀಡುವಂತೆ ವಾದಿಸಿದ. ಇದನ್ನು ಸಂಸದರು ನಿರಾಕರಿಸಿದರು ಎಂದಿದ್ದಾರೆ.

ಸಮರ್ಥನೆಗಳ ನಡುವೆಯೂ ಸಂಸದರ ನಡವಳಿಕೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ನಡೆ ತೋರಿಸಬಾರದು ಎಂದು ನೆಟ್ಟಿಗರು ಖಾರವಾಗಿ ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ:

ಗೋವಾ ವಿಮೋಚನಾ ದಿನಾಚರಣೆಯಲ್ಲಿ ಇಂದು ಪ್ರಧಾನಿ ಮೋದಿ ಭಾಗಿ; 650 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ

Job Alert: ಬ್ಯಾಂಕ್ ಆಫ್ ಬರೋಡಾದಲ್ಲಿದೆ ವಿವಿಧ ಉದ್ಯೋಗಾವಕಾಶ; ಸಂಪೂರ್ಣ ಮಾಹಿತಿ ಇಲ್ಲಿದೆ

Published On - 8:03 am, Sun, 19 December 21