ಯುಎಸ್ ವಾಯುಸೇನೆಯಲ್ಲಿ (US Airforce) ಇರುವ ಭಾರತೀಯ ಮೂಲದ ಯೋಧರು ತಮ್ಮ ಸೇನಾ ಸಮವಸ್ತ್ರದೊಟ್ಟಿಗೆ ಹಣೆಗೆ ತಿಲಕ (Tilak)ವನ್ನೂ ಇಟ್ಟುಕೊಳ್ಳಬಹುದಾಗಿದೆ. ಕರ್ತವ್ಯದಲ್ಲಿದ್ದಾಗ ತಿಲಕ ಇಡಲು ಸಂಪೂರ್ಣ ಅನುಮತಿ ಇರುವುದಾಗಿ ಯುಎಸ್ ಏರ್ಪೋರ್ಸ್ ಹೇಳಿದೆ. ಯುಎಸ್ನ ವ್ಯೋಮಿಂಗ್ ಎಂಬಲ್ಲಿರುವ ಎಫ್ಇ ವಾರೆನ್ ಏರ್ಫೋರ್ಸ್ ನೆಲೆಯಲ್ಲಿ ಏರ್ಮ್ಯಾನ್ ಆಗಿರುವ ಭಾರತ ಮೂಲದ ದರ್ಶನ್ ಶಾ, ತಾವು ಕರ್ತವ್ಯದಲ್ಲಿದ್ದಾಗಲೂ ಹಣೆಗೆ ಚಾಂಡ್ಲೋ ತಿಲಕ ಇಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಚಾಂಡ್ಲೋ ತಿಲಕವೆಂದರೆ ಇಂಗ್ಲಿಷ್ ಅಕ್ಷರ U ಆಕಾರದಲ್ಲಿ ಇದ್ದು, ಮಧ್ಯೆ ಬೊಟ್ಟು ಇರುತ್ತದೆ. ಇದು ವೈಷ್ಣವರು ಇಡುವ ಧಾರ್ಮಿಕ ಆಚರಣೆಯ ತಿಲಕ.
ದರ್ಶನ್ ಶಾ ಯುಎಸ್ ಏರ್ಫೋರ್ಸ್ಗೆ ಸೇರಿ 2 ವರ್ಷಗಳಾದವು. 90ನೇ ಆಪರೇಶನಲ್ ಮೆರಿಕಲ್ ರೆಡಿನೆಸ್ ಸ್ಕ್ವಾಡ್ರನ್ನಲ್ಲಿ ಎರೋಸ್ಪೇಸ್ ಮೆಡಿಕಲ್ ಟೆಕ್ನೀಷಿಯನ್ ಆಗಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಿನಿಂದಲೂ ಈ ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು. ಧಾರ್ಮಿಕ ಆಚರಣೆಗೆ ವಿನಾಯಿತಿ ಕೊಡಿ ಎಂದು ಇವರು ಇಟ್ಟ ಬೇಡಿಕೆ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಇದಕ್ಕೆ ವಿಶ್ವದ ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದರು. ಕೊನೆಗೂ 2022ರ ಫೆ.22ರಂದು ಅವರಿಗೆ ತಿಲಕ್ ಚಾಂಡ್ಲೋ ಧರಿಸಲು ಅನುಮತಿ ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾ, ಸೇನಾ ಕರ್ತವ್ಯದಲ್ಲಿ ಇರುವಾಗ ಸಮವಸ್ತ್ರದೊಂದಿಗೆ ತಿಲಕ ಧರಿಸಲೂ ಅನುಮತಿ ಸಿಕ್ಕಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಟೆಕ್ಸಾಸ್, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್ಗಳಲ್ಲಿರುವ ನನ್ನ ಹಲವು ಸ್ನೇಹಿತರು ಸಂದೇಶಗಳನ್ನು ಕಳಿಸುತ್ತಿದ್ದಾರೆ. ನಮ್ಮ ಪಾಲಕರೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಏರ್ಫೋರ್ಸ್ನಲ್ಲಿ ಇಂಥ ಅವಕಾಶ ಕೊಟ್ಟಿದ್ದು ಎಲ್ಲರಿಗೂ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ದರ್ಶನ್ ಶಾ, ಯುಎಸ್ನ ಮಿನ್ನೆಸೋಟಾದ ಈಡನ್ ಪ್ರೈರೀ ಎಂಬಲ್ಲಿ ಬೆಳೆದಿದ್ದಾರೆ. ಇವರು ಮೂಲತಃ ಗುಜರಾತಿ ಕುಟುಂಬದವಾಗಿದ್ದು, ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತನ್ ಸ್ವಾಮಿನಾರಾಯಣ ಅವರ ಪಂಥಕ್ಕೆ ಸೇರಿದವರು. ಈ ಪಂಥದ ಜನರು ಹಣೆಗೆ ಕೆಂಪು ಬೊಟ್ಟು ಇಟ್ಟು, ಅದರ ಸುತ್ತಲೂ U ಆಕಾರದಲ್ಲಿ ಕಿತ್ತಳೆ ಬಣ್ಣದಲ್ಲಿ ತಿಲಕ ಇಟ್ಟುಕೊಳ್ಳುತ್ತಾರೆ. 2020ರ ಜೂನ್ನಿಂದ ಸೇನಾ ತರಬೇತಿ ಪಡೆಯುತ್ತಿದ್ದ ಇವರು, ಆಗಿನಿಂದಲೂ ತನಗೆ ಧಾರ್ಮಿಕ ತಿಲಕ ಇಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಲೇ ಇದ್ದರು. ಇದೀಗ ಅನುಮತಿ ಸಿಕ್ಕಿದ್ದು ಖುಷಿಯಾಗಿದೆ. ಹೀಗೆ ತಿಲಕ ಧರಿಸಿ ಕೆಲಸ ಮಾಡಲು ಒಂಥರ ರೋಮಾಂಚನವಾಗುತ್ತದೆ ಎಂದೂ ದರ್ಶನ್ ಶಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Birbhum Violence ಬಿರ್ಭೂಮ್ನಲ್ಲಿ ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷೆ ವರದಿ
Published On - 2:54 pm, Thu, 24 March 22