
ನೊಯ್ಡಾ, ಡಿಸೆಂಬರ್ 19: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರು ನೊಯ್ಡಾ ಟೆಕ್ಕಿಯ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಈ ವಿಷಯದ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಮೀರತ್ ವಿಭಾಗೀಯ ಆಯುಕ್ತರು ಈ SIT ನೇತೃತ್ವ ವಹಿಸಲಿದ್ದಾರೆ. ಮೀರತ್ ವಲಯದ ಹೆಚ್ಚುವರಿ ಮಹಾನಿರ್ದೇಶಕರು (ADG) ಮತ್ತು ಲೋಕೋಪಯೋಗಿ ಇಲಾಖೆಯ (PWD) ಮುಖ್ಯ ಎಂಜಿನಿಯರ್ ಕೂಡ ಈ ತಂಡದಲ್ಲಿರಲಿದ್ದಾರೆ. 5 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಂಡಕ್ಕೆ ಸೂಚಿಸಲಾಗಿದೆ. ಇದಲ್ಲದೆ, ಐಎಎಸ್ ಅಧಿಕಾರಿ ಲೋಕೇಶ್ ಎಂ ಅವರನ್ನು ನೊಯ್ಡಾ ಪ್ರಾಧಿಕಾರದ ಸಿಇಒ ಸ್ಥಾನದಿಂದ ವಜಾಗೊಳಿಸಲಾಗಿದೆ.
ಗ್ರೇಟರ್ ನೊಯ್ಡಾದಲ್ಲಿ ನೀರು ತುಂಬಿದ ಗುಂಡಿಗೆ ಕಾರು ಬಿದ್ದು 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನೊಳಗೆ ಸಿಲುಕಿದ್ದ ಅವರು ತನ್ನ ಪ್ರಾಣ ಉಳಿಸಿಕೊಳ್ಳಲು ಕಾರಿನ ಬಾಗಿಲು ತೆರೆದು ಕಾರಿನ ಮೇಲೆ ಕುಳಿತಿದ್ದರು. ಮೊಬೈಲ್ ಟಾರ್ಚ್ ಬೀಸುತ್ತಾ ಸಹಾಯಕ್ಕಾಗಿ ಅಂಗಲಾಚಿದ್ದರು. ಕೊನೆಗೆ ತನ್ನ ತಂದೆಗೆ ಫೋನ್ ಮಾಡಿ ತಾನು ಬಿದ್ದಿರುವ ವಿಷಯ ತಿಳಿಸಿದ್ದರು. ಆದರೆ, ಮೈ ಕೊರೆಯುತ್ತಿದ್ದ ನೀರಿನಲ್ಲಿ ಕಾರು ಮುಳುಗಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.
ಪೊಲೀಸರು ಹಲವಾರು ಗಂಟೆಗಳ ಕಾಲ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಅವರ ದೇಹವನ್ನು ಹೊರಗೆ ತೆಗೆಯಲಾಯಿತು. ಈ ವೇಳೆ ಡೆಲಿವರಿ ಬಾಯ್ ಒಬ್ಬರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅವರನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಅಪ್ಪಾ ನನಗೆ ಸಾಯಲು ಇಷ್ಟವಿಲ್ಲ, ಬದುಕಬೇಕು, ನೀರಿನ ಹೊಂಡಕ್ಕೆ ಬಿದ್ದು ಕರೆ ಮಾಡಿದ್ದ ಟೆಕ್ಕಿ, ಕೊನೆಗೂ ಪ್ರಾಣ ಉಳೀಲಿಲ್ಲ
ಮುಂಜಾನೆ ದಟ್ಟವಾದ ಮಂಜಿನ ನಡುವೆ ಮೆಹ್ತಾ ಅವರ ಕಾರು ನಿಯಂತ್ರಣ ತಪ್ಪಿ ಸೆಕ್ಟರ್ 150ರಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಗಾಗಿ ಅಗೆದ 20 ಅಡಿಗಳಿಗಿಂತ ಹೆಚ್ಚು ಆಳದ ಗುಂಡಿಗೆ ಬಿದ್ದಿತ್ತು. ಅವರು ಸಾವನ್ನಪ್ಪಿದ ಗುಂಡಿ ನೀರಿನಿಂದ ತುಂಬಿತ್ತು. ತಕ್ಷಣ ಅವರು ತಮ್ಮ ತಂದೆಗೆ ಫೋನ್ ಮಾಡಿ ತಾನು ನೀರಿನ ಗುಂಡಿಗೆ ಬಿದ್ದಿದ್ದೇನೆಂದು ತಿಳಿಸಿ ಹೇಗಾದರೂ ನನ್ನನ್ನು ಬದುಕಿಸಿ ಎಂದು ಗೋಗರೆದಿದ್ದರು. ಅವರು ಮನೆಯಿಂದ ಆ ಸ್ಥಳಕ್ಕೆ ಬರುವಷ್ಟರಲ್ಲಿ ಅವರ ಮಗ ಪ್ರಾಣ ಬಿಟ್ಟಾಗಿತ್ತು.
27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ತಮ್ಮ ಮನೆಯಿಂದ ಕೆಲವೇ ನಿಮಿಷಗಳ ದೂರದಲ್ಲಿದ್ದಾಗ ಈ ದುರಂತ ಸಂಭವಿಸಿತ್ತು. ಅವರ ಎಸ್‌ಯುವಿ ರಸ್ತೆಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು, ಕಟ್ಟಡ ನಿರ್ಮಾಣಕ್ಕೆ ಅಗೆದ ಆಳವಾದ, ನೀರಿನಿಂದ ತುಂಬಿದ ಗುಂಡಿಗೆ ಬಿದ್ದಿತು. ದಟ್ಟವಾದ ಮಂಜು ಕವಿದಿದ್ದರಿಂದ ಅವರಿಗೆ ರಸ್ತೆ ಸರಿಯಾಗಿ ಕಾಣದೆ ಈ ದುರಂತ ಸಂಭವಿಸಿತ್ತು. ಈ ಸ್ಥಳದಲ್ಲಿ ಯಾವುದೇ ಬ್ಯಾರಿಕೇಡ್‌ಗಳು, ಪ್ರತಿಫಲಕಗಳು ಅಥವಾ ಎಚ್ಚರಿಕೆ ದೀಪಗಳು ಇರಲಿಲ್ಲ. ಅನೇಕ ಬಾರಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ