ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಕೋರ್ಟ್​​ನಿಂದ ನೋಟಿಸ್​; ಶಿಕ್ಷಾರ್ಹ ಅಪರಾಧವೆಂದ ಅರ್ಜಿದಾರ ವಕೀಲ

| Updated By: Lakshmi Hegde

Updated on: Feb 04, 2022 | 12:13 PM

ವಕೀಲ ಪಾಂಡೆಯವರು ಮೊದಲು 2021ರ ಡಿಸೆಂಬರ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಾಂಗ ಮೆಜಿಸ್ಟ್ರೇಟ್​ ಹರೇಂದ್ರ ನಾಥ್​ ಅವರು ಈ ಅರ್ಜಿಯನ್ನು ತಿರಸ್ಕರಿಸಿ, ಇದು ನಮ್ಮ ಕೋರ್ಟ್​ನ ನ್ಯಯಾಂಗ ಆಡಳಿತದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದಿದ್ದರು.

ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಕೋರ್ಟ್​​ನಿಂದ ನೋಟಿಸ್​; ಶಿಕ್ಷಾರ್ಹ ಅಪರಾಧವೆಂದ ಅರ್ಜಿದಾರ ವಕೀಲ
ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿ
Follow us on

2021ರ ನವೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಜಮ್ಮು-ಕಾಶ್ಮೀರದ ನೌಶೇರಾ ವಲಯಕ್ಕೆ ಭೇಟಿ ಕೊಟ್ಟು, ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಬಳಿಕ ಅವರೊಂದಿಗೆ ಸಂವಾದ ಕೂಡ ನಡೆಸಿದ್ದರು. ಈ ವೇಳೆ ಪ್ರಧಾನಿ ಮೋದಿ ಭಾರತೀಯ ಸೇನೆ ಸಮವಸ್ತ್ರ (Indian Army Uniform) ಧರಿಸಿದ್ದರು. ಆದರೆ ಈಗ ಇದೇ ಕಾರಣಕ್ಕೆ ಉತ್ತರ ಪ್ರದೇಶದ ಜಿಲ್ಲಾ ನ್ಯಾಯಾಲಯವೊಂದು ಪ್ರಧಾನಿ ಮೋದಿಗೆ ನೋಟಿಸ್ ಕಳಿಸಿದೆ. ಭಾರತೀಯ ಸೇನೆಯ ಅಂದರೆ ಭೂಸೇನೆ ಸೈನಿಕರು, ನೌಕಾಪಡೆ ಯೋಧರ ಮತ್ತು ವಾಯುಪಡೆ ಯೋಧರ ಸಮವಸ್ತ್ರ ಧರಿಸುವುದು ಮತ್ತು ಆರ್ಮಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು (ಉದಾಹರಣೆಗೆ, ಯಾವುದೇ ಸ್ಥಳದಲ್ಲಿ ಯೋಧರು ಎಂದು ಗುರುತಿಸಲು ನೀಡಲಾಗುವ ಟೋಕನ್​ನಂತಹ ವಸ್ತುಗಳು) ಬೇರೆಯವರು ಕೊಂಡೊಯ್ಯುವುದು, ಭಾರತೀಯ ದಂಡಸಂಹಿತೆ 140ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಹಿರಿಯ ವಕೀಲ ರಾಕೇಶ್​ನಾಥ್​ ಪಾಂಡೆಯ ಪ್ರಯಾಗ್​ ರಾಜ್​​ನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಧೀಶ ನಳಿನ್​ ಕುಮಾರ್​ ಶ್ರೀವಾತ್ಸವ್​ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್​ ಕಳಿಸಿದ್ದಾರೆ.

ವಕೀಲ ಪಾಂಡೆಯವರು ಮೊದಲು 2021ರ ಡಿಸೆಂಬರ್​​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಾಂಗ ಮೆಜಿಸ್ಟ್ರೇಟ್​ ಹರೇಂದ್ರ ನಾಥ್​ ಅವರು ಈ ಅರ್ಜಿಯನ್ನು ತಿರಸ್ಕರಿಸಿ, ಇದು ನಮ್ಮ ಕೋರ್ಟ್​ನ ನ್ಯಯಾಂಗ ಆಡಳಿತದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ವಿಷಯ ವಿಚಾರಣೆ ಮಾಡುವ ಅಧಿಕಾರ ವ್ಯಾಪ್ತಿ ಹೊಂದಿರುವ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿವುದು ಒಳಿತು ಎಂದು ಹೇಳಿದ್ದರು. ಪಿಎಂಒಗೆ ಯಾವುದೇ ನೋಟಿಸ್ ಕೊಟ್ಟಿರಲಿಲ್ಲ. ಇದೀಗ ಪ್ರಯಾಗ್​ ರಾಜ್​​  ನ್ಯಾಯಾಲಯ ಪ್ರಧಾನಿ ಕಾರ್ಯಾಲಯಕ್ಕೆ ನೋಟಿಸ್​ ಕೊಟ್ಟಿದ್ದು, ಮಾರ್ಚ್​ 2ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

2019ರಲ್ಲೂ ಕೂಡ ಪ್ರಧಾನಿ ಮೋದಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದರು. ಕಳೆದ ಬಾರಿ ನೌಶೇರಾಕ್ಕೆ ತೆರಳಿದ ಅವರು ಸೇನಾ ಸಮವಸ್ತ್ರ ಧರಿಸಿದ್ದರು. ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸೇನಾ ಕ್ಷೇತ್ರದಲ್ಲಿ ದೇಶೀಯ ಉಪಕರಣಗಳ ಬಳಕೆ ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಉತ್ತೇಜನಾ ಕ್ರಮಗಳ ಬಗ್ಗೆ ವಿವರಿಸಿದ್ದರು. ನಮ್ಮ ದೇಶದ ಗಡಿ ಕಾಯುವ ಯೋಧರೊಂದಿಗೆ ನಾನಿಂದು ಹಬ್ಬ ಆಚರಿಸುತ್ತಿದ್ದೇನೆ. ಕೋಟ್ಯಂತರ ಜನರ ಆಶೀರ್ವಾದವನ್ನು ಇಲ್ಲಿನ ಸೈನಿಕರಿಗಾಗಿ ಹೊತ್ತು ತಂದಿದ್ದೇನೆ. ನಮ್ಮ ಯೋಧರು ಭಾರತ ಮಾತೆಗೆ ಸುರಕ್ಷಾ ಕವಚವಿದ್ದಂತೆ. ದೇಶ ಕಾಯುವ ಯೋಧರಿಂದಾಗಿ ನಮ್ಮ ದೇಶದ ಸಾಮಾನ್ಯ ಜನರು ನೆಮ್ಮದಿಯಿಂದ ನಿದ್ದೆ ಮಾಡಬಹುದಾಗಿದೆ. ಇಡೀ ರಾಷ್ಟ್ರ ಇಂದು ಖುಷಿಯಾಗಿ ದೀಪಾವಳಿ ಆಚರಿಸಲು ಈ ಯೋಧರೇ ಕಾರಣ ಎಂದು ವಿವರಿಸಿದ್ದರು.

ಪ್ರಧಾನಿ ಮೋದಿ ನೌಶೇರಾಕ್ಕೆ ಭೇಟಿ ನೀಡಿದ್ದ ಕ್ಷಣ..

ಇದನ್ನೂ ಓದಿ: ಒಮಿಕ್ರಾನ್: ಮಾನವನಲ್ಲಿನ ರೋಗ ಪ್ರತಿರೋಧ ಶಕ್ತಿ ಬಗ್ಗೆ ವಿಜ್ಞಾನಿಗಳು ಕಂಡುಕೊಂಡ 10 ಸಂಗತಿಗಳು

Published On - 11:58 am, Fri, 4 February 22