ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ; ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

ಅಸಾದುದ್ದೀನ್​ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿಯಾಗುತ್ತಿದ್ದಂತೆ ಬಿಜೆಪಿ ಕೇಂದ್ರ ಸರ್ಕಾರ ಅವರಿಗೆ Z ಶ್ರೇಣಿಯ ಭದ್ರತೆ ನೀಡಲು ಮುಂದಾಗಿತ್ತು. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್​ ಶಾ ಕೂಡ ಓವೈಸಿಯವರಿಗೆ ಝೆಡ್ ಶ್ರೇಣಿಯ ಭದ್ರತೆಯನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದರು.

ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ; ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು
ಅಸಾದುದ್ದೀನ್ ಓವೈಸಿ
Edited By:

Updated on: Feb 12, 2022 | 10:14 AM

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಕಾರಿನ ಮೇಲೆ ಫೆ.3ರಂದು ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರು ಇನ್ನೊಬ್ಬನನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಚಿನ್ ಶರ್ಮಾಗೆ ಈತ ಅಕ್ರಮವಾಗಿ ಮಾರಕಾಸ್ತ್ರಗಳ ಸರಬರಾಜು ಮಾಡಿದ್ದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಎಐಎಂಐಎಂ ಮುಖ್ಯಸ್ಥ ಓವೈಸಿ ಫೆ.3ರಂದು ಉತ್ತರ ಪ್ರದೇಶದ ಮೀರತ್​​ನ ಕಿಥೌರ್​​ನಲ್ಲಿ ಚುನಾವಣಾ ಪ್ರಚಾರ ನಡೆಸಿ, ವಾಪಸ್​ ದೆಹಲಿಗೆ ಹೋಗುವಾಗ ಛಜರ್ಸಿ ಟೋಲ್​ ಪ್ಲಾಜಾ ಬಳಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಚಿನ್​ ಶರ್ಮಾ ಮತ್ತು ಶುಭಂ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಇದೀಗ ಮೂರನೇ ಆರೋಪಿಯನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿರುವ ಹಾಪುರ್​ ಎಎಸ್​ಪಿ ಸರ್ವೇಶ್​ ಕುಮಾರ್ ಮಿಶ್ರಾ, ಇಂದು ಬಂಧಿತನಾದ ವ್ಯಕ್ತಿ ಸಚಿನ್​ ಶರ್ಮಾಗೆ ಮಾರಕಾಸ್ತ್ರಗಳು, ಮದ್ದುಗುಂಡುಗಳನ್ನು ಕಾನೂನು ಬಾಹಿರವಾಗಿ ನೀಡುತ್ತಿದ್ದ. ಈತನ ವಿರುದ್ಧ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.  ಈಗಾಗಲೇ ಸಚಿನ್ ಶರ್ಮಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಓವೈಸಿ ಸದಾ ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ಈ ಹಿಂದೆಯೂ ಮೂರು ಬಾರಿ ಅವರನ್ನು ಕೊಲ್ಲಲು ಪ್ರಯತ್ನ ಮಾಡಿದ್ದೆ. ಆದರೆ ಆಗಿರಲಿಲ್ಲ ಎಂದು ಹೇಳಿದ್ದ. ಫೆ.3ರಂದು ಓವೈಸಿ ಇದ್ದ ಕಾರಿಗೇ ಈತ 9ಎಂಎಂ ಪಿಸ್ತೂಲ್​ ಮೂಲಕ ಗುಂಡು ಹೊಡೆದಿದ್ದ. ಈ ಕೃತ್ಯಕ್ಕೆ ಶುಭಂ ಸಹಕಾರ ನೀಡಿದ್ದ. ಸದ್ಯ ಸಚಿನ್​ ಶರ್ಮಾ ಮತ್ತು ಶುಭಂ ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಸಾದುದ್ದೀನ್​ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿಯಾಗುತ್ತಿದ್ದಂತೆ ಬಿಜೆಪಿ ಕೇಂದ್ರ ಸರ್ಕಾರ ಅವರಿಗೆ Z ಶ್ರೇಣಿಯ ಭದ್ರತೆ ನೀಡಲು ಮುಂದಾಗಿತ್ತು. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್​ ಶಾ ಕೂಡ ಓವೈಸಿಯವರಿಗೆ ಝೆಡ್ ಶ್ರೇಣಿಯ ಭದ್ರತೆಯನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಆದರೆ ಅಸಾದುದ್ದೀನ್​ ಓವೈಸಿ ಸುತಾರಾಂ ಒಪ್ಪಲಿಲ್ಲ. ನನಗೆ ಝಡ್​ ಕೆಟೆಗರಿ ಭದ್ರತೆ ಬೇಡ. ನನ್ನನ್ನು ಎ ವರ್ಗದ ಪ್ರಜೆಯನ್ನಾಗಿ ಮಾಡಿದರೆ ಸಾಕು ಎಂದಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್ ಕೊವಿಡ್​ 19 ಸೋಂಕಿನ​ ಕೊನೇ ರೂಪಾಂತರವಲ್ಲ; ಮತ್ತೆಮತ್ತೆ ಎಚ್ಚರಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ