ಲಖನೌ: ಲಖನೌದ (Lucknow) ಗೋಮತಿ ನಗರ ಎಕ್ಸ್ ಟೆನ್ಶನ್ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದ ನಿವಾಸಿಗಳಿಗೆ ಉತ್ತರ ಪ್ರದೇಶ ಪೊಲೀಸರು ತಮ್ಮ ಬಾಲ್ಕನಿಯಲ್ಲಿ ಬಟ್ಟೆ ನೇತು ಹಾಕದಂತೆ ಸೂಚನೆ ನೀಡಿದ್ದಾರೆ. ಕಾರಣ- ಉತ್ತರ ಪ್ರದೇಶದ ರಾಜಧಾನಿ ಲಖನೌಗೆ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ಭೇಟಿ. ಶುಕ್ರವಾರದಿಂದ ಡಿಜಿಪಿಗಳ ಅಖಿಲ ಭಾರತ ಸಮ್ಮೇಳನ ಪ್ರಾರಂಭವಾಗುವ ಸಿಗ್ನೇಚರ್ ಬಿಲ್ಡಿಂಗ್‌ನ ಎದುರುಗಡೆ ಇರುವ ಸರಸ್ವತಿ ಅಪಾರ್ಟ್‌ಮೆಂಟ್ ಅನ್ನು ಗೋಮತಿನಗರದ ಉಸ್ತುವಾರಿ ಇನ್ಸ್‌ಪೆಕ್ಟರ್ ಪ್ರಶಾಂತ್ ಕುಮಾರ್ ಮಿಶ್ರಾ (Prashant Kumar Mishra) ನಿರ್ದಿಷ್ಟವಾಗಿ ಸೂಚಿಸಿದ್ದು ಶನಿವಾರ ಮತ್ತು ಭಾನುವಾರ ಪ್ರಧಾನಿ ಸಮಾವೇಶದಲ್ಲಿ ಪಾಲ್ಗೊಳ್ಳುವ ದಿನಗಳಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ಬಟ್ಟೆ ನೇತು ಹಾಕಬಾರದು ಎಂದಿದ್ದಾರೆ. ಶುಕ್ರವಾರ ಮತ್ತು ಭಾನುವಾರದ ನಡುವೆ ನಿವಾಸಿಗಳು ತಮ್ಮ ಬಟ್ಟೆಗಳನ್ನು ಬಾಲ್ಕನಿಗಳಲ್ಲಿ ನೇತುಹಾಕದಂತೆ ಶಿಫಾರಸು ಮಾಡಲಾಗಿದೆ. ಈ ಅವಧಿಯಲ್ಲಿ ಮನೆಗಳಿಗೆ ಅತಿಥಿಗಳು ಬರುವುದಿದ್ದರೆ ಪೊಲೀಸರಿಗೆ ಸೂಚಿಸಿ, ಎಂದು ಆದೇಶದಲ್ಲಿ ಹೇಳಲಾಗಿದೆ.
ಡಿಜಿಪಿ ಸಮಾವೇಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ 56ನೇ ಪೊಲೀಸ್ ಮಹಾನಿರ್ದೇಶಕರ (DGP) ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದೆ. ಶನಿವಾರ ಸಮಾವೇಶದಲ್ಲಿ ಪ್ರಧಾನಿ ಭಾಷಣ ಮಾಡಲಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಅರವಿಂದ್ ಕುಮಾರ್, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮುಖ್ಯಸ್ಥ ಸಮಂತ್ ಗೋಯೆಲ್ ಸೇರಿದಂತೆ ದೇಶದ ಗುಪ್ತಚರ ದಳದ ಸದಸ್ಯರು ಸಹ ಭಾಗಿಯಾಗಲಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಲಖನೌನಲ್ಲಿ ಲ್ಲಿ ಹಾಜರಿರುತ್ತಾರೆ ಆದರೆ ಇತರ ಆಹ್ವಾನಿತರು ಗುಪ್ತಚರ ಬ್ಯೂರೋ ಅಥವಾ ರಾಜ್ಯ ಗುಪ್ತಚರ ಪ್ರಧಾನ ಕಚೇರಿಯ 37 ವಿವಿಧ ಸ್ಥಳಗಳಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸೇರಿಕೊಳ್ಳುತ್ತಾರೆ. ಸಭೆಯಲ್ಲಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳು ಮತ್ತು ಸೈಬರ್ ಭದ್ರತೆಯಂತಹ ಹೊಸ ಸವಾಲುಗಳ ಬಗ್ಗೆ ಚರ್ಚಿಸಲಾಗುವುದು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಲಖನೌ ವೇಳಾಪಟ್ಟಿ
ಶುಕ್ರವಾರ ಮಧ್ಯಾಹ್ನ 1:30ಕ್ಕೆ ಲಖನೌಗೆ ಆಗಮಿಸಲಿರುವ ಅಮಿತ್ ಶಾ ಅವರು ಸರೋಜಿನಿನಗರದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕೇಂದ್ರ ಕಚೇರಿಗೆ ತೆರಳಲಿದ್ದು, ಭಾನುವಾರದವರೆಗೆ ಅಲ್ಲಿಯೇ ಇರಲಿದ್ದಾರೆ. ನಂತರ ‘ಸಿಗ್ನೇಚರ್ ಬಿಲ್ಡಿಂಗ್’ ಎಂದು ಕರೆಯಲಾಗುವ ಡಿಜಿಪಿ ಕೇಂದ್ರ ಕಚೇರಿಗೆ ತೆರಳಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಶಾ ನಂತರ ರಾತ್ರಿ 8:45 ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ಪ್ರಧಾನಿ ಮೋದಿ ರಾಜಭವನಕ್ಕೆ ತೆರಳಲಿದ್ದಾರೆ.
ಶನಿವಾರ ಬೆಳಗ್ಗೆ ಪ್ರಧಾನಿ ಅವರು ಸಿಗ್ನೇಚರ್ ಬಿಲ್ಡಿಂಗ್‌ನಲ್ಲಿ ಡಿಜಿಪಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಪೊಲೀಸ್ ಅಧಿಕಾರಿಗಳಿಗೆ ಪದಕಗಳನ್ನು ವಿತರಿಸಿ ನಂತರ ರಾಜಭವನಕ್ಕೆ ಹಿಂತಿರುಗುತ್ತಾರೆ. ಸಂಜೆ, ಅವರು ಸಿಗ್ನೇಚರ್ ಬಿಲ್ಡಿಂಗ್‌ನಲ್ಲಿ ಭೋಜನಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಗುಪ್ತಚರ ಮುಖ್ಯಸ್ಥರೊಂದಿಗೆ ಸೇರಿಕೊಳ್ಳಲಿದ್ದಾರೆ.
ಪ್ರಧಾನಿ ಮೋದಿ ಅವರು ನವೆಂಬರ್ 21 ರ ಸಂಜೆಯವರೆಗೆ ಲಖನೌದಲ್ಲಿ ಇರುತ್ತಾರೆ. ಮೂಲಗಳ ಪ್ರಕಾರ, ಗೃಹ ಸಚಿವರು ಭಾನುವಾರದವರೆಗೆ ಸರೋಜಿನಿನಗರದಲ್ಲಿರುವ ಸಿಆರ್‌ಪಿಎಫ್ ಪ್ರಧಾನ ಕಚೇರಿಯಲ್ಲಿ ಇರಲಿದ್ದಾರೆ.ಸಮ್ಮೇಳನದ ಸಂದರ್ಭದಲ್ಲಿ ನಗರದಲ್ಲಿ ತಂಗಿರುವ ಡಿಜಿಗಳು ಮತ್ತು ಇತರ ಗಣ್ಯರ ಗೌರವಾರ್ಥ ಲಖನೌನ ವಿವಿಧ ರಾಜ್ಯ ಅತಿಥಿ ಗೃಹಗಳನ್ನು ಅಲಂಕರಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ನಂಬಿಕೆ ಮೂಡಿಸುವಲ್ಲಿ ವಿಫಲ: ಹೆಚ್ಡಿ ಕುಮಾರಸ್ವಾಮಿ