ದೆಹಲಿ ಆಗಸ್ಟ್ 28: ತಮ್ಮ ಶಾಲಾ ಶಿಕ್ಷಕರ ಆದೇಶದ ಮೇರೆಗೆ ತನ್ನ ಕೆನ್ನೆಗೆ ಹೊಡೆತ ತಿಂದ ಮುಸ್ಲಿಂ ಬಾಲಕನ ಗುರುತನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಬಹಿರಂಗಪಡಿಸಿದ ಆರೋಪದ ಮೇಲೆ ಫ್ಯಾಕ್ಟ್ಚೆಕರ್ ಮತ್ತು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ (Mohammed Zubair) ವಿರುದ್ಧ ಉತ್ತರ ಪ್ರದೇಶದ ಪೊಲೀಸರು (UP Police) ಎಫ್‌ಐಆರ್ ದಾಖಲಿಸಿದ್ದಾರೆ. 2 ನೇ ತರಗತಿಯ ವಿದ್ಯಾರ್ಥಿಯ ಮೇಲಿನ ಹಲ್ಲೆಯ ವಿಡಿಯೊವನ್ನು ಹಂಚಿಕೊಳ್ಳುವಾಗ ಬಾಲಕನ ಗುರುತನ್ನು ಬಹಿರಂಗ ಮಾಡಬಾರದು ಎಂದು ಶುಕ್ರವಾರ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಎಚ್ಚರಿಕೆ ನೀಡಿತ್ತು. NCPCR ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ “ಮಕ್ಕಳ ಗುರುತನ್ನು ಬಹಿರಂಗಪಡಿಸುವ ಮೂಲಕ ಅಪರಾಧದ ಭಾಗವಾಗಬೇಡಿ” ಎಂದು ಜನರನ್ನು ಒತ್ತಾಯಿಸಿದ್ದರು.
ಶಿಕ್ಷಕಿ ತ್ರಿಪ್ತ ತ್ಯಾಗಿ ಮುಸ್ಲಿಂ ಧರ್ಮದ ವಿರುದ್ಧ ಹೇಳಿಕೆ ನೀಡಿ, ಮುಸ್ಲಿಂ ಬಾಲಕನ ಕೆನ್ನಗೆ ಜೋರಾಗಿ ಬಾರಿಸುವಂತೆ ಹೇಳುವಾಗ ಕಣ್ಣೀರು ಸುರಿಸುತ್ತ ಅಸಹಾಯಕನಾಗಿ ನಿಂತಿರುವ ಬಾಲಕನ ವಿಡಿಯೊ ಕಳೆದ ವಾರ ವೈರಲ್ ಆಗಿತ್ತು. ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆಗೆ ಹಲವರು ಬಿಜೆಪಿಯನ್ನು ಗುರಿಯಾಗಿಸಿ ಟೀಕೆ ಮಾಡಿದ್ದರು.
ಯಾಕೆ ಜೋರಾಗಿ ಹೊಡೆಯುತ್ತಿಲ್ಲ? ಯಾರ ಸರದಿ? ಎಂದು ಶಿಕ್ಷಕಿ ತ್ಯಾಗಿ ಮಕ್ಕಳಲ್ಲಿ ಹೊಡೆಯುವಂತೆ ಹೇಳುತ್ತಿರುವುದು ವಿಡಿಯೊದಲ್ಲಿದೆ. ಹುಡುಗನನ್ನು ಅವಮಾನಿಸಲಾಗಿದೆ. ಗಂಟೆಗಳ ಕಾಲ ನಿಲ್ಲುವಂತೆ ಒತ್ತಾಯಿಸಲಾಯಿತು ಎಂದು ಆತನ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಶಿಕ್ಷಕರು ನನ್ನ ಮಗುವಿಗೆ ಮತ್ತೆ ಮತ್ತೆ ಹೊಡೆಯುವಂತೆ ಮಾಡಿದರು. ನನ್ನ ಮಗನಿಗೆ ಒಂದು ಅಥವಾ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಯಿತು. ಅವನು ಹೆದರಿದ್ದಾನೆ ಎಂದ ಕಳೆದ ವಾರ ಗುರುವಾರ ನಡೆದ ಘಟನೆಯ ನಂತರ ಬಾಲಕನ ತಂದೆ ಹೇಳಿದ್ದಾರೆ.
ಯುಪಿಯ ಮುಜಾಫರ್‌ನಗರದಲ್ಲಿರುವ ನೇಹಾ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯಿನಿಯೂ ಆಗಿರುವ ತ್ಯಾಗಿ ಆರೋಪ ಎದುರಿಸುತ್ತಿದ್ದರೂ ಇದೊಂದು ಸಣ್ಣ ವಿಚಾರ. ಇದಕ್ಕೆ ನಾನು ನಾಚಿಕೆಪಡುವುದಿಲ್ಲ ಎಂದಿದ್ದಾರೆ. ಎನ್ಡಿಟಿವಿ ಜತೆ ಮಾತನಾಡಿದ ಅವರು ತಾವು ಕೈಗೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಶಾಲೆಯಲ್ಲಿದ್ದಾಗ ಮಕ್ಕಳನ್ನು “ನಿಯಂತ್ರಿಸುವುದು” ಅಗತ್ಯವೆಂದು ಹೇಳಿದ್ದಾರೆ.
ಘಟನೆಯಲ್ಲಿ ಯಾವುದೇ ಕೋಮುವಾದಿ ಕೋನವನ್ನು ನಿರಾಕರಿಸಿದ ತ್ರಿಪ್ತ ತ್ಯಾಗಿ, ಹುಡುಗ ತನ್ನ ಹೋಮ್ ವರ್ಕ್ ಮಾಡದ ಕಾರಣ ಕೆಲವು ವಿದ್ಯಾರ್ಥಿಗಳಲ್ಲಿ ಕಪಾಳಮೋಕ್ಷ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ಹೇಳಿದರು. “ಮಗುವಿನ ಪೋಷಕರಿಂದ ಅವನೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವಂತೆ ಒತ್ತಡವಿತ್ತು. ನನಗೆ ಅಂಗವೈಕಲ್ಯತೆ ಇದೆ. ಆದ್ದರಿಂದ ಅವ ಹೋಮ್ ವರ್ಕ್ ಮಾಡಲಿ ಎಂದು ನಾನು ಕೆಲವು ವಿದ್ಯಾರ್ಥಿಗಳಲ್ಲಿ ಅವನಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದೆ ಎಂದು ಅವರು ಹೇಳಿದರು.
ಇದು ಧರ್ಮದ ಮೇಲಿನ ದ್ವೇಷ ಎಂದು ತೋರಿಸುವುದಕ್ಕಾಗಿ ವಿಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ಮಗುವಿನ ಸೋದರಸಂಬಂಧಿ ತರಗತಿಯಲ್ಲಿ ಕುಳಿತಿದ್ದರು. ಅವರು ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ, ನಂತರ ಅದನ್ನು ಎಡಿಟ್ ಮಾಡಲಾಗಿದೆ ಎಂದು ಅವರು ವಿಡಿಯೊದಲ್ಲಿ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಹೋಮ್ ವರ್ಕ್ ಮಾಡದ್ದಕ್ಕೆ ಶಿಕ್ಷೆ; ಮುಸ್ಲಿಂ ಬಾಲಕನಿಗೆ ಮಕ್ಕಳಲ್ಲಿ ಹೊಡೆಯುವಂತೆ ಹೇಳಿದ ಉತ್ತರ ಪ್ರದೇಶದ ಶಿಕ್ಷಕಿಯಿಂದ ಸಮರ್ಥನೆ
ವಿಡಿಯೊ ಕ್ಲಿಪ್ ವೈರಲ್ ಆದ ನಂತರ ಇದು “ಸಣ್ಣ ವಿಚಾರ” ಎಂದು ಹೇಳಿ ತ್ಯಾಗಿ ಕ್ಷಮೆ ಕೇಳಿದ್ದಾರೆ. “ಇದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ, ಆದರೆ ಇದು ಅನಗತ್ಯವಾಗಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ” ಎಂದು ಅವರು ಹೇಳಿದರು.
ಇದು ಸಣ್ಣ ವಿಚಾರ ಎಂದು ನಾನು ರಾಜಕಾರಣಿಗಳಿಗೆ ಹೇಳಲು ಬಯಸುತ್ತೇನೆ. ರಾಹುಲ್ ಗಾಂಧಿ ಸೇರಿದಂತೆ ನಾಯಕರು ಟ್ವೀಟ್ ಮಾಡಿದ್ದಾರೆ, ಆದರೆ ಟ್ವೀಟ್ ಮಾಡುವುದು ಅಷ್ಟು ದೊಡ್ಡ ವಿಷಯವಲ್ಲ. ಈ ರೀತಿಯ ದೈನಂದಿನ ವಿಷಯಗಳನ್ನು ವೈರಲ್ ಮಾಡಿದರೆ ಶಿಕ್ಷಕರು ಹೇಗೆ ಕಲಿಸುತ್ತಾರೆ ಎಂದು ಅವರು ಹೇಳಿದರು.
ಶಿಕ್ಷಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಜರಾಯಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ.
“ಪೋಷಕರು ಆರಂಭದಲ್ಲಿ ದೂರು ನೀಡಲು ಒಪ್ಪಲಿಲ್ಲ ಆದರೆ ಇಂದು ಬೆಳಿಗ್ಗೆ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಬಂಗಾರಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ