ಕೊರೊನಾ ಶುರುವಾದ ಮೇಲೆ ಸೋಂಕಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡವರು ಹಲವರು. ಹಾಗೇ ಇದೀಗ ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಧಿವಿಜ್ಞಾನ ಹಿರಿಯ ಪ್ರೊಫೆಸರ್ವೊಬ್ಬರು ಕೊರೊನಾದ ಹೊಸ ತಳಿ ಒಮಿಕ್ರಾನ್ಗೆ ಹೆದರಿ ತಮ್ಮ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಕೊಂದು ಪರಾರಿಯಾದ ಶಾಕಿಂಗ್ ಘಟನೆ ನಡೆದಿದೆ. ಕಾನ್ಪುರದ ಕಲ್ಯಾಣಪುರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಆಗಿದ್ದಾರೆ. ಪತ್ನಿಯನ್ನು ಕತ್ತು ಕೊಯ್ದು ಹತ್ಯೆ ಮಾಡಿದ ಇವರು, ಪುಟ್ಟ ಮಗ ಮತ್ತು ಮಗಳನ್ನು ತಲೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಂದಿದ್ದಾರೆ. ಅದಾದ ಮೇಲೆ ಮನೆಯಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರೊಫೆಸರ್ ಕ್ರೈಂ ಮಾಡಿದ ಬಳಿಕ ಮನೆಯಿಂದ ಓಡಿಹೋಗುವಾಗ ತಾನು ಮಾಡಿದ ಕೃತ್ಯವನ್ನು ವಾಟ್ಸ್ಆ್ಯಪ್ ಮೂಲಕ ತನ್ನ ಸಹೋದರನಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲ, ಈ ಒಮಿಕ್ರಾನ್ನಿಂದ ಯಾರೂ ಪಾರಾಗಲು ಸಾಧ್ಯವಿಲ್ಲ. ಯಾರನ್ನೂ ಈ ಸೋಂಕು ಬಿಡುವುದಿಲ್ಲ ಎಂದೂ ವಾಟ್ಸ್ಆ್ಯಪ್ ಮೆಸೇಜ್ನಲ್ಲಿ ಉಲ್ಲೇಖಿಸಿದ್ದಾನೆ. ಈ ಒಮ್ರಿಕಾನ್ನಿಂದ ಎಲ್ಲರಿಗೂ ಮುಕ್ತಿ ಕೊಡಿಸುತ್ತೇನೆ ಎಂದೂ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂದೇಶ ನೋಡುತ್ತಿದ್ದಂತೆಯೇ ಪ್ರೊಫೆಸರ್ನ ಸೋದರ ಅವರ ಮನೆಗೆ ಹೋಗಿ ಬಾಗಿಲು ಮುರಿದಿದ್ದಾರೆ. ಒಳಗೆ ಹೋದರೆ ಅಲ್ಲಿ ನಾದಿನಿ ಮತ್ತು ಮಕ್ಕಳ ಶವವಿತ್ತು. ಅದನ್ನು ನೋಡುತ್ತಿದ್ದಂತೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಮ್ಮ ವಿಧಿವಿಜ್ಞಾನ ತಂಡ ಮತ್ತು ಶ್ವಾನದಳದೊಟ್ಟಿಗೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತನಿಖೆ ಶುರು ಮಾಡಿರುವ ಪೊಲೀಸರಿಗೆ ಈಗಾಗಲೇ ಒಂದು ಡೈರಿ ಕೂಡ ಸಿಕ್ಕಿದೆ. ಈ ಪ್ರೊಫೆಸರ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿಂದೆ ಕೂಡ ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಾಗೇ, ಡೈರಿಯಲ್ಲಿ ತನ್ನ ಕುಟುಂಬದವರ ಹತ್ಯೆಯ ಬಗ್ಗೆಯೂ ಬರೆದಿದ್ದಾನೆ. ಇನ್ನು ಮುಂದೆ ಕೊರೊನಾ ಎಲ್ಲರನ್ನೂ ಕೊಲ್ಲುತ್ತದೆ. ಮೃತದೇಹಗಳನ್ನು ಎಣಿಸುವ ಅಗತ್ಯವಿಲ್ಲ ಎಂದು ಉಲ್ಲೇಖಿಸಿದ್ದಾನೆ. ಸದ್ಯಕ್ಕಂತೂ ಆರೋಪಿ ಪ್ರೊಫೆಸರ್ ಮೊಬೈಲ್ ಸ್ವಿಚ್ಚ ಆಫ್ ಆಗಿದ್ದು, ಆತನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಂದಹಾಗೆ ಈ ಒಮ್ರಿಕಾನ್ ರೂಪಾಂತರ ವೈರಸ್ ಮೊದಲು ಪತ್ತೆಯಾಗಿದ್ದು ದಕ್ಷಿಣ ಆಫ್ರಿಕಾದಲ್ಲಿ ಆದರೂ, ಇದೀಗ ಭಾರತ ಸೇರಿ 38 ದೇಶಗಳಲ್ಲಿ ಪತ್ತೆಯಾಗಿ, ಆತಂಕ ಮೂಡಿಸಿದೆ.
ಇದನ್ನೂ ಓದಿ: Rohit Sharma: ಟೆಸ್ಟ್ ತಂಡದ ಉಪ ನಾಯಕತ್ವದಿಂದ ಅಜಿಂಕ್ಯಾ ರಹಾನೆ ವಜಾ ಸಾಧ್ಯತೆ: ರೋಹಿತ್ ಶರ್ಮಾಗೆ ಹೊಸ ಪಟ್ಟ