Konijeti Rosaiah Death: ಆಂಧ್ರಪ್ರದೇಶದ ಮಾಜಿ ಸಿಎಂ ಕೋನಿಜೇಟಿ ರೋಸಯ್ಯ ಇಂದು ನಿಧನ; ಕರ್ನಾಟಕದ ಮಾಜಿ ರಾಜ್ಯಪಾಲರು ಇವರು
ಕೆ ರೋಸಯ್ಯ ನಿಧನ: ರೋಸಯ್ಯ 1933ರ ಜುಲೈ 4ರಂದು, ಆಂಧ್ರದ ಗುಂಟೂರು ಜಿಲ್ಲೆಯ ವೆಮೂರಿನಲ್ಲಿ ಹುಟ್ಟಿದ್ದಾರೆ. ಗುಂಟೂರಿನ ಹಿಂದು ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ. ಅವರು 1968, 1974 ಮತ್ತು 1980 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು.
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಕೋನಿಜೇಟಿ ರೋಸಯ್ಯ (Konijeti Rosaiah Death) ಇಂದು ಮುಂಜಾನೆ ನಿಧನರಾದರು. 89 ವರ್ಷದ ಅವರು ಬಹುದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಕಡಿಮೆ ರಕ್ತದೊತ್ತಡಕ್ಕೆ ಒಳಗಾಗಿ ಬಿದ್ದ ಅವರನ್ನು ಬಂಜಾರಾ ಹಿಲ್ಸ್ ಸ್ಟಾರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಬದುಕುಳಿಯಲಿಲ್ಲ.
ಕೆ. ರೋಸಯ್ಯ ಕಾಂಗ್ರೆಸ್ನ ಪ್ರಮುಖ ನಾಯಕರು. ಅವರು ಶಾಸಕರು, ಎಂಎಲ್ಸಿ, ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಅವಿಭಜಿತ ಆಂಧ್ರಪ್ರದೇಶದ (ತೆಲಂಗಾಣ ಬೇರೆ ರಾಜ್ಯವಾಗಿ ವಿಭಜನೆ ಆಗುವುದಕ್ಕೂ ಪೂರ್ವ) ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸುಮಾರು ಏಳು ಬಾರಿ ಬಜೆಟ್ ಮಂಡನೆ ಮಾಡುವ ದಾಖಲೆ ನಿರ್ಮಿಸಿದ್ದರು. ವೈ.ಎಸ್. ರಾಜಶೇಖರ್ ರೆಡ್ಡಿ ನಿಧನದ ನಂತರ ಅವಿಭಜಿತ ಆಂಧ್ರಪ್ರದೇಶದ ಸಿಇಒ ಆಗಿದ್ದರು. ಅಷ್ಟೇ ಅಲ್ಲ, ತಮಿಳು ನಾಡು ಮತ್ತು ಕರ್ನಾಟಕದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ರೋಸಯ್ಯ 1933ರ ಜುಲೈ 4ರಂದು, ಆಂಧ್ರದ ಗುಂಟೂರು ಜಿಲ್ಲೆಯ ವೆಮೂರಿನಲ್ಲಿ ಹುಟ್ಟಿದ್ದಾರೆ. ಗುಂಟೂರಿನ ಹಿಂದು ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ. ಅವರು 1968, 1974 ಮತ್ತು 1980 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಅವರು ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಮರಿ ಚೆನ್ನಾ ರೆಡ್ಡಿ ಸರ್ಕಾರದಲ್ಲಿ ರಸ್ತೆ ಮತ್ತು ಸಾರಿಗೆ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಅವಿಭಜಿತ ಆಂಧ್ರಪ್ರದೇಶವಿದ್ದಾಗಿನಿಂದಲೂ ಆ ಸರ್ಕಾರದ ಸಂಪುಟದಲ್ಲಿ ಅಪಾರ ಅನುಭವ ಹೊಂದಿದ್ದ ಅವರು 2009ರ ಸೆಪ್ಟೆಂಬರ್ 13ರಿಂದ, 2010ರ ನವೆಂಬರ್ 24ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅದಾದ ಬಳಿಕ 2011ರ ಆಗಸ್ಟ್ 31ರಿಂದ 2016ರ ಆಗಸ್ಟ್ 30ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ಈ ಮಧ್ಯೆ 2014ರಲ್ಲಿ ಎರಡು ತಿಂಗಳು (ಜೂನ್-ಆಗಸ್ಟ್) ಕರ್ನಾಟಕ ರಾಜ್ಯಪಾಲರಾಗಿದ್ದರು. ಆಗ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ವಜುಭಾಯಿ ವಾಲಾ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದರು.
ಇದನ್ನೂ ಓದಿ: ‘ಯಾಹೂ’ನಲ್ಲಿ ಅತ್ಯಂತ ಹೆಚ್ಚು ಸರ್ಚ್ಗೆ ಒಳಗಾದ ಸೆಲೆಬ್ರಿಟಿಗಳು ಯಾರು?; ಇಲ್ಲಿದೆ ಮಾಹಿತಿ
Published On - 10:03 am, Sat, 4 December 21