‘ಯಾಹೂ’ನಲ್ಲಿ ಅತ್ಯಂತ ಹೆಚ್ಚು ಸರ್ಚ್​ಗೆ ಒಳಗಾದ ಸೆಲೆಬ್ರಿಟಿಗಳು ಯಾರು?; ಇಲ್ಲಿದೆ ಮಾಹಿತಿ

Yahoo Most Searched celebrities 2021: ಭಾರತದಲ್ಲಿ ಅತ್ಯಂತ ಹೆಚ್ಚು ಜನರು ಸರ್ಚ್ ಮಾಡಿದ ವಿಷಯಗಳ ಕುರಿತು ಮಾಹಿತಿಯನ್ನು ಯಾಹೂ ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿನ ಮನರಂಜನಾ ಕ್ಷೇತ್ರದ ವಿವರಗಳು ಇಲ್ಲಿವೆ.

‘ಯಾಹೂ’ನಲ್ಲಿ ಅತ್ಯಂತ ಹೆಚ್ಚು ಸರ್ಚ್​ಗೆ ಒಳಗಾದ ಸೆಲೆಬ್ರಿಟಿಗಳು ಯಾರು?; ಇಲ್ಲಿದೆ ಮಾಹಿತಿ
ಸಿದ್ಧಾರ್ಥ್ ಶುಕ್ಲಾ, ಸಲ್ಮಾನ್ ಖಾನ್, ಪುನೀತ್ ರಾಜ್​ಕುಮಾರ್ (ಸಾಂದರ್ಭಿಕ ಚಿತ್ರ)

Yahoo ಭಾರತದ ಪ್ರಮುಖ ಸರ್ಚ್ ಇಂಜಿನ್​ಗಳಲ್ಲೊಂದು. ಆ ಸಂಸ್ಥೆ ಇದೀಗ 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿಗಳು ಯಾರು ಎಂಬುದನ್ನು ಬಹಿರಂಗಗೊಳಿಸಿದೆ. ‘ಯಾಹೂ’ನ ಈ ವರದಿಯಲ್ಲಿ, ಭಾರತದ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸೆಲೆಬ್ರಿಟಿಗಳು, ಪ್ರಭಾವಿಗಳು ಮತ್ತು ಪ್ರಮುಖ ಘಟನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ಮನರಂಜನಾ ಕ್ಷೇತ್ರದಲ್ಲಿ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ಯಾರು ಎಂಬುದನ್ನೂ ತಿಳಿಸಲಾಗಿದೆ. ಭಾರತದಲ್ಲಿ ಹುಡುಕಲ್ಪಟ್ಟ ಖ್ಯಾತ ತಾರೆಯರು, ತಾರೆಯರಿಗೆ ಸಂಬಂಧಪಟ್ಟ ಯಾವ ಅಂಶಗಳು ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ. Yahoo ಎಂಬುದು ಗೂಗಲ್​ನಂತೆ ಒಂದು ಸರ್ಚ್ ಎಂಜಿನ್ ಆಗಿದ್ದು, ಜನರು ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಮಾಹಿತಿ ಅಥವಾ ಮನರಂಜನೆಯ ವಿಷಯಗಳನ್ನು ಹುಡುಕುತ್ತಾರೆ. ಅದೇ ಡೇಟಾವನ್ನು ಆಧರಿಸಿ, ಯಾಹೂ ಸಂಸ್ಥೆ ವರದಿ ಸಿದ್ಧಪಡಿಸಿದೆ. ಯಾಹೂ ಬಿಡುಗಡೆ ಮಾಡಿದ ಪಟ್ಟಿಯನ್ನು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದ್ದು, ಆ ಪಟ್ಟಿಯ ಸಾರಾಂಶ ಇಲ್ಲಿದೆ. ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ಕೂಡ ಈ ಪಟ್ಟಿಯಲ್ಲಿದ್ದಾರೆ.

ಭಾರತದಲ್ಲಿ 2022ರಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದವರೆಂದರೆ ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ. ಈ ವರ್ಷ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಮರಣದ ನಂತರ ಅವರ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರ ಜೀವನಕ್ಕೆ ಸಂಬಂಧಿಸಿದ ವಿಡಿಯೋ- ಫೋಟೋಗಳನ್ನು ನೋಡಲು ಯಾಹೂವಿನಲ್ಲಿ ಅತ್ಯಂತ ಹೆಚ್ಚು ಸರ್ಚ್ ಮಾಡಲಾಗಿದೆ.

ನಾಲ್ಕನೇ ಸ್ಥಾನದಲ್ಲಿ ಪುನೀತ್; ಎರಡು ಹಾಗೂ ಮೂರನೇ ಸ್ಥಾನಗಳಲ್ಲಿ ಯಾರ್ಯಾರು? ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ. ಟಾಲಿವುಡ್ ನಟ ಅಲ್ಲು ಅರ್ಜುನ್ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಂತರ ನಟ ಪುನೀತ್ ರಾಜ್​ಕುಮಾರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಟ ಪುನೀತ್ ಕೂಡ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ನಿಧನ ಭಾರತೀಯ ಚಿತ್ರರಂಗವನ್ನು ಆಘಾತಕ್ಕೆ ತಳ್ಳಿತ್ತು. ಈ ಪಟ್ಟಿಯಲ್ಲಿ ನಟ ದಿಲೀಪ್ ಕುಮಾರ್ ಐದನೇ ಸ್ಥಾನದಲ್ಲಿದ್ದಾರೆ.

ಕರೀನಾ ಕಪೂರ್ ಅತಿ ಹೆಚ್ಚು ಹುಡುಕಲ್ಪಟ್ಟ ಮಹಿಳಾ ಸೆಲೆಬ್ರಿಟಿ: ಅತಿ ಹೆಚ್ಚು ಹುಡುಕಲ್ಪಟ್ಟ ಮಹಿಳಾ ಸೆಲೆಬ್ರಿಟಿಗಳಲ್ಲಿ ಕರೀನಾ ಕಪೂರ್ ಮೊದಲ ಸ್ಥಾನದಲ್ಲಿದ್ದಾರೆ. ಮದುವೆಯ ಕಾರಣದಿಂದ ಸಖತ್ ಸುದ್ದಿಯಲ್ಲಿರುವ ಕತ್ರಿನಾ ಕೈಫ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಇತ್ತೀಚಿನ ಚಿತ್ರ ‘ಸೂರ್ಯವಂಶಿ’ ಕೂಡ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಮೂರನೇ ಸ್ಥಾನದಲ್ಲಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಟಿವಿ ಶೋ ಪಟ್ಟಿಯಲ್ಲಿ ಮೊದಲ ಸ್ಥಾನ ಯಾವುದಕ್ಕೆ? Yahoo ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 2021ರಲ್ಲಿ ಅತಿ ಹೆಚ್ಚು ಹುಡುಕಲಾದ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು OTT ಸರಣಿಗಳನ್ನು ಹೆಸರಿಸಲಾಗಿದೆ. ಕಿರುತೆರೆಯ ಹಾಸ್ಯ ಕಾರ್ಯಕ್ರಮ ‘ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ’ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ‘ರಾಧಾ ಕೃಷ್ಣ’ ಎರಡನೇ ಸ್ಥಾನದಲ್ಲಿದ್ದು, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’, ವೆಬ್ ಶೋ ‘ಮನಿ ಹೈಸ್ಟ್- ಸೀಸನ್ 5’ ಮತ್ತು ‘ಶೇರ್ ಶಾ’ ಚಿತ್ರ ಈ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ:

ಪುನೀತ್​ ಕಂಡ ಕನಸಿನ ಟೈಟಲ್​ ಟೀಸರ್ ರಿಲೀಸ್​​ ದಿನಾಂಕ ಘೋಷಣೆ ಮಾಡಿದ ಅಶ್ವಿನಿ

Drunkest Country: ಜಗತ್ತಿನ ಯಾವ ದೇಶದ ಜನರು ಹೆಚ್ಚಾಗಿ ಕುಡಿಯುತ್ತಾರೆ?; ಇಲ್ಲಿದೆ ಕುತೂಹಲಕರ ಮಾಹಿತಿ

Click on your DTH Provider to Add TV9 Kannada