ಲಖನೌ: ಉತ್ತರ ಪ್ರದೇಶದ (Uttar Pradesh) ಸೀತಾಪುರ್ ಜಿಲ್ಲೆಯಲ್ಲಿ ಬಿಜೆಪಿ (BJP) ಮುಖಂಡರೊಬ್ಬರು ಕಾರು ಅಡ್ಡವಾಗಿ ನಿಲ್ಲಿಸಿ ರಸ್ತೆ ತಡೆದ ಪರಿಣಾಮ, ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ನಡೆದಿದೆ. ಇದನ್ನು ಪ್ರಶ್ನಿಸಿದಾಗ ಬಿಜೆಪಿ ಮುಖಂಡ ಉಮೇಶ್ ಮಿಶ್ರಾ, ಇದಕ್ಕೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರೋಗಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ರೋಗಿ ಸುರೇಶ್ ಚಂದ್ರ ಎಂಬವರಿಗೆ ಶನಿವಾರ ಎದೆನೋವು ಕಾಣಿಕೊಂಡಾಗ ತಕ್ಷಣವೇ ಅವರನ್ನು ಲಕ್ನೋ ಆಸ್ಪತ್ರೆಗೆ ಕಳುಹಿಸಲಾಯಿತು. ಅವರು ಜಿಲ್ಲಾ ಆಸ್ಪತ್ರೆಯಿಂದ ಹೊರಬಂದಾಗ, ಅಲ್ಲಿ ರೋಗಿಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದರು. ಈ ಹೊತ್ತಲ್ಲಿ ಉಮೇಶ್ ಮಿಶ್ರಾ ಅವರು ತಮ್ಮ ವ್ಯಾಗನಾರ್ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿತ್ತು. 30 ನಿಮಿಷಕ್ಕೂ ಹೆಚ್ಚು ಕಾಲ ಆಂಬ್ಯುಲೆನ್ಸ್ ಚಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸುರೇಶ್ ಚಂದ್ರ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಬಿಜೆಪಿ ನಾಯಕ ಹಿಂತಿರುಗಿದ್ದು, ಆತನನ್ನು ಪ್ರಶ್ನಿಸಿದಾಗ ಸಿಟ್ಟಿಗೆದ್ದು ಕೆಟ್ಟದಾಗಿ ಬೈದಿದ್ದಾರೆ.
In UP’s Sitapur, man identified as Umesh Mishra threatens of dire consequences and hurls abuses at family members of a patient who died after Mishra’s unattended car blocked the ambulance. Mishra identified himself as brother of a local BJP block pramukh Ram Kinker Pandey. pic.twitter.com/1UleT5tPyE
— Piyush Rai (@Benarasiyaa) April 4, 2023
ಬಿಜೆಪಿ ಮುಖಂಡ ಮತ್ತು ಬ್ಲಾಕ್ ಮುಖ್ಯಸ್ಥ ರಾಮಕಿಂಕರ್ ಪಾಂಡೆ ಅವರ ಸಹೋದರ ಎಂದು ಹೇಳಿಕೊಳ್ಳುವ ಉಮೇಶ್ ಮಿಶ್ರಾ, ಮೃತಪಟ್ಟ ವ್ಯಕ್ತಿಯ ಸೋದರ ಮಾವನನ್ನು ಬೈಯ್ಯುತ್ತಿರುವುದು ಮತ್ತು ಪೊಲೀಸ್ ಕೇಸ್‌ಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಪಕ್ಕದಲ್ಲಿದ್ದವರು ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧೀಕ್ಷಕರು ನನ್ನ ಸೂಚನೆಯಂತೆ ಕೆಲಸ ಮಾಡುತ್ತಾರೆ, ನಾನು ನಿಮ್ಮನ್ನು ಇಲ್ಲವಾಗಿಸುತ್ತೇನೆ ಎಂದು ಮಿಶ್ರಾ ಬೆದರಿಕೆಯೊಡ್ಡಿದ್ದಾರೆ. ಉಮೇಶ್ ಮಿಶ್ರಾ ಮೃತ ವ್ಯಕ್ತಿಯ ಸಂಬಂಧಿಕರನ್ನು ಕೆಣಕಿದಾಗ ಕೆಲವು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು, ಆದರೆ ಯಾರೂ ಮಧ್ಯಪ್ರವೇಶಿಸಲಿಲ್ಲ. ನಂತರ ಆತ ತನ್ನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ನಿರ್ಲಕ್ಷ್ಯಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ