‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಬೆಳ್ಳಿ-ಬೊಮ್ಮನ್ ದಂಪತಿಯನ್ನು ಭೇಟಿ ಮಾಡಲಿರುವ ಮೋದಿ
The Elephant Whisperers: ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ರಸ್ತೆಗಳನ್ನು ನವೀಕರಣ ಮಾಡಲಾಗಿದೆ. 30ಕ್ಕೂ ಅಧಿಕ ಕಂಬಗಳನ್ನು ನಿಲ್ಲಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಭಾರತಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟು ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಾಕ್ಷ್ಯಚಿತ್ರ ಸಾಕಷ್ಟು ಫೇಮಸ್ ಆಗಿದೆ. ಈ ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡ ಬೆಳ್ಳಿ ಮತ್ತು ಬೊಮ್ಮನ್ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭೇಟಿ ಮಾಡಲಿದ್ದಾರೆ. ಅನಾಥ ಆನೆಗಳನ್ನು ಸಾಕುವ ಕಾಯಕದಲ್ಲಿ ಈ ದಂಪತಿ ತೊಡಗಿಕೊಂಡಿದ್ದಾರೆ. ಅವರ ಜೀವನದ ಕಥೆಯನ್ನು ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಬೆಳ್ಳಿ ಮತ್ತು ಬೊಮ್ಮನ್ (Bellie and Bomman) ದಂಪತಿ ಜೊತೆ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಮಾಡಲಾಗುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿರುವ ಪ್ರದೇಶಗಳಲ್ಲಿ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಏಪ್ರಿಲ್ 7ರಿಂದ ಏಪ್ರಿಲ್ 9ರವರೆಗೆ ಹೋಟೆಲ್, ಆನೆ ಸಫಾರಿಯನ್ನು ನಿರ್ಬಂಧಿಸಲಾಗಿದೆ. ಪ್ರವಾಸಿ ವಾಹನಗಳ ಪ್ರವೇಶವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಮೋದಿ ಆಗಮಿಸುವ ಹೆಲಿಕಾಪ್ಟರ್ ನಿಲುಗಡೆಗಾಗಿ ಹೆಲಿಪ್ಯಾಡ್ ಸಿದ್ಧಪಡಿಸಲಾಗಿದೆ.
ಮೋದಿ ಆಗಮನದ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ರಸ್ತೆಗಳನ್ನು ನವೀಕರಣ ಮಾಡಲಾಗಿದೆ. 30ಕ್ಕೂ ಅಧಿಕ ಕಂಬಗಳನ್ನು ನಿಲ್ಲಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ತಮಿಳುನಾಡು ಅರಣ್ಯ ಇಲಾಖೆಯ ಭಾಗವಾಗಿ ಆನೆಗಳನ್ನು ಸಾಕುವ ಮಾವುತರಾಗಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೆಲಸ ಮಾಡುತ್ತಿದ್ದಾರೆ. ಅವರ ಕುರಿತಾದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದ ಬಳಿಕ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಭೇಟಿ ಮಾಡಿದ್ದರು.
ಇದನ್ನೂ ಓದಿ: The Elephant Whisperers: ಭಾರತಕ್ಕೆ ಆಸ್ಕರ್: ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಅಕಾಡೆಮಿ ಪ್ರಶಸ್ತಿ
ಕಾರ್ತಿಕಿ ಗೋನ್ಸಾಲ್ವಿಸ್ ಅವರು ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಅವರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ವಿಶೇಷ. ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸನ್ಮಾನಿಸಿರುವುದಕ್ಕೆ ಕಾರ್ತಿಕಿ ಗೋನ್ಸಾಲ್ವಿಸ್ ಸಂತಸ ವ್ಯಕ್ತಪಡಿಸಿದ್ದರು. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಅನಾಥ ಆನೆ ಮರಿಗಳನ್ನು ಬೊಮ್ಮನ್ ಮತ್ತು ಬೆಳ್ಳಿ ಸಾಕುತ್ತಾರೆ. ಆದರೆ ಆನೆಗಳು ದೊಡ್ಡದಾದ ಬಳಿಕ ಅವುಗಳನ್ನು ಬೇರೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಸ್ವಂತ ಮಕ್ಕಳಂತೆ ಸಾಕಿದ ಆನೆಗಳನ್ನು ದೂರ ಮಾಡುವ ಸಂದರ್ಭ ಬೊಮ್ಮನ್ ಮತ್ತು ಬೆಳ್ಳಿಗೆ ತುಂಬ ಭಾವುಕವಾಗಿರುತ್ತದೆ. ಈ ಎಲ್ಲ ಅಂಶಗಳನ್ನು ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:48 pm, Tue, 4 April 23