ಪ್ರಾರ್ಥನೆ ಸಲ್ಲಿಸಲು ದೇವಸ್ಥಾನದ ಒಳಗೆ ಪ್ರವೇಶಿಸಿದ ದಲಿತ ಯುವಕನನ್ನು ಕಟ್ಟಿಹಾಕಿ ಮನಬಂದಂತೆ ಥಳಿಸಿರುವ ಘಟನೆ ಉತ್ತರಕಾಶಿಯ ಮೋರಿ ಪ್ರದೇಶದ ಸಾಲ್ರಾ ಗ್ರಾಮದಲ್ಲಿ ನಡೆದಿದೆ. ಬನೋಲ್ ಗ್ರಾಮದ ನಿವಾಸಿ ಅತ್ತರ್ ಲಾಲ್ ಅವರ ಪುತ್ರ ಆಯುಷ್ ದೌರ್ಜನ್ಯಕ್ಕೆ ಒಳಗಾದ ಯುವಕ, ಜನವರಿ 9 ರಂದು ಸಂಜೆ 7 ಗಂಟೆಗೆ ಗ್ರಾಮದ ಕೌನ್ವಾಲ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹೋಗಿದ್ದ ವೇಳೆ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತ ಯುವಕ ದೂರು ನೀಡಿದ್ದಾರೆ.
ಆಯುಷ್ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದೇವಸ್ಥಾನದಲ್ಲಿ ಮೇಲ್ವರ್ಗದ ಕೆಲವರು ಆತನ ಮೇಲೆ ಹಲ್ಲೆ ನಡೆಸಿ, ಕಟ್ಟಿಹಾಕಿ ರಾತ್ರಿಯಿಡೀ ಹೊಡೆದಿದ್ದಾರೆ. ಆಯುಷ್ ಪೊಲೀಸರಿಗೆ ನೀಡಿದ ದೂರಿನಲ್ಲಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕೆಲವರು ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು, ನಂತರ ದೇವಸ್ಥಾನದ ಕಂಬಕ್ಕೆ ಕಟ್ಟಿ ಹಾಕಿದರು. ಗ್ರಾಮದ ಐವರು ಮೇಲ್ಜಾತಿಯವರು ದೊಣ್ಣೆಯಿಂದ ಹಲ್ಲೆ ಮಾಡಿ ಬೆಂಕಿ ಇಂದ ಸುಟ್ಟಿದ್ದಾರೆ, ಈ ಸಮಯದಲ್ಲಿ ಪ್ರಜ್ಞೆ ತಪ್ಪಿತ್ತು, ಜನವರಿ 10 ರಂದು ಎಚ್ಚರಗೊಂಡಾಗ ಮೈಯಲ್ಲಿ ಬಟ್ಟೆಗಳಿರಲಿಲ್ಲ, ಹೇಗೋ ಮಾಡಿ ದೇವಸ್ಥಾನದ ಆವರಣದಿಂದ ತಪ್ಪಿಸಿಕೊಂಡು ಬಂದೆ ಎಂದು ಯುವ ಹೇಳಿದ್ದಾನೆ.
ಸಂತ್ರಸ್ತನನ್ನು ಜನವರಿ 10 ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಉನ್ನತ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಲಿತನಾಗಿದ್ದು ದೇವಾಲಯ ಪ್ರವೇಶಿಸಿದ್ದರಿಂದ ದಾಳಿಕೋರರು ಕೋಪಗೊಂಡಿದ್ದರು ಎಂದು ಆಯುಷ್ ದೂರಿನಲ್ಲಿ ತಿಳಿಸಿದ್ದಾರೆ.
ಆತ ನೀಡಿದ ದೂರಿನ ಆಧಾರದ ಮೇಲೆ, ಘಟನೆಗೆ ಸಂಬಂಧಿಸಿದಂತೆ ಐವರು ಗ್ರಾಮಸ್ಥರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆತನ ಸಂಬಂಧಿಕರು ಮೋರಿ ಪೊಲೀಸ್ ಠಾಣೆಗೆ ತಲುಪಿ ಗಲಾಟೆ ನಡೆಸಿದ್ದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ