ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಲೆ: ಉತ್ತರಾಖಂಡ್​ನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕ್ ಬಸ್​ ಸೇವೆ

|

Updated on: Dec 10, 2020 | 1:33 PM

ಉತ್ತರಾಖಂಡ್​ನಲ್ಲಿ ನಾಳೆಯಿಂದ ಎಲೆಕ್ಟ್ರಿಕ್ ಬಸ್​ ಸೇವೆ ಆರಂಭವಾಗಲಿದ್ದು ನಗರದಲ್ಲಿ ಈ ಸೇವೆಗೆ ಚಾಲನೆ ನೀಡಲಾಗುವುದು. ಉತ್ತರಾಖಂಡ್ ಸಾರಿಗೆ ಸಂಸ್ಥೆ ಡೆಹ್ರಾಡೂನ್ ನಗರದಲ್ಲಿ 30 ಎಲೆಕ್ಟ್ರಿಕ್ ಬಸ್​ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಅಲೆ: ಉತ್ತರಾಖಂಡ್​ನಲ್ಲಿ ಶುರುವಾಗಲಿದೆ ಎಲೆಕ್ಟ್ರಿಕ್ ಬಸ್​ ಸೇವೆ
ಪ್ರಾತಿನಿಧಿಕ ಚಿತ್ರ
Follow us on

ಡೆಹ್ರಾಡೂನ್​: ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಕಾರ್​ಗಳು ಈಗಾಗಲೇ ನಮಗೆ ಚಿರಪರಿಚಿತ. ಆದರೂ ನಗರಗಳಲ್ಲಿ ವಾಯುಮಾಲಿನ್ಯ ಕಡಿಮೆಯಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಲೇ ಇದೆ. ದೇಶದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣದ ನಡುವೆಯೇ ಇದೀಗ ಉತ್ತರಾಖಂಡ್​ ಸರ್ಕಾರ ವಾಯುಮಾಲಿನ್ಯ ನಿಯಂತ್ರಣದ ಸಲುವಾಗಿ ಹೊಸ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಉತ್ತರಾಖಂಡ್​ ಸರ್ಕಾರ ತನ್ನ ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದೆ.

ಉತ್ತರಾಖಂಡ್​ನಲ್ಲಿ ನಾಳೆಯಿಂದ ಎಲೆಕ್ಟ್ರಿಕ್ ಬಸ್​ ಸೇವೆ ಆರಂಭವಾಗಲಿದ್ದು ನಗರದಲ್ಲಿ ಈ ಸೇವೆಗೆ ಚಾಲನೆ ನೀಡಲಾಗುವುದು. ಉತ್ತರಾಖಂಡ್ ಸಾರಿಗೆ ಸಂಸ್ಥೆ ಈ ಯೋಜನೆಯಡಿ 30 ಎಲೆಕ್ಟ್ರಿಕ್ ಬಸ್​ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ. ಉತ್ತರಾಖಂಡ್​ ಸಿಎಂ ತ್ರಿವೇಂದ್ರ ಸಿಂಗ್ ರಾವತ್  ಎಲೆಕ್ಟ್ರಿಕ್ ಬಸ್​ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಮೇಘಾ ಇಂಜಿನಿಯರಿಂಗ್ ಸಂಸ್ಥೆಯು ಈ ಒಲೆಕ್ಟ್ರಾ ಗ್ರೀನ್​ಟೆಕ್ ಎಲೆಕ್ಟ್ರಿಕ್ ಬಸ್​ಗಳನ್ನು ಪೂರೈಸಿದೆ.

ಒಲೆಕ್ಟ್ರಾ K6, ಒಲೆಕ್ಟ್ರಾ K7 ಮತ್ತು ಒಲೆಕ್ಟ್ರಾ K9  ಎಂಬ ಮೂರು ಮಾದರಿಯ ಎಲೆಕ್ಟ್ರಿಕ್ ಬಸ್​ಗಳನ್ನು ಡೆಹ್ರಾಡೂನ್​ನಲ್ಲಿ ನಿಯೋಜಿಸಲಾಗುವುದು.  ಚಾಲಕನನ್ನು ಹೊರತುಪಡಿಸಿ ಈ ಬಸ್​ಗಳು ಕ್ರಮವಾಗಿ 22 , 31 ಮತ್ತು 39 ಸೀಟುಗಳನ್ನು ಹೊಂದಿವೆ. 2018ರಲ್ಲೇ ಪ್ರಾಯೋಗಿಕ ಸಂಚಾರ ನಡೆಸಿದ್ದ ಬಸ್​ಗಳು, ನಾಳೆಯಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.

ಎಲೆಕ್ಟ್ರಿಕ್ ಬಸ್​ಗಳಲ್ಲಿದೆ ಹತ್ತಾರು ಸುರಕ್ಷತಾ ಸಾಧನ, ಸವಲತ್ತು
ಅಂದ ಹಾಗೆ, ಬಸ್​ಗಳನ್ನು ಈ ಹಿಂದೆ  ಡೆಹ್ರಾಡೂನ್ ಮತ್ತು ಮಸ್ಸೂರಿಯ ನಡುವೆ ಪ್ರಾಯೋಗಿಕವಾಗಿ ಓಡಿಸಲಾಗಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಉತ್ತರಾಖಂಡ್​ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. 2018ರಲ್ಲಿ ಉತ್ತರಾಖಂಡ್ ಸಿಎಂ ಎಲೆಕ್ಟ್ರಾನಿಕ್ ಬಸ್​ಗಳ ಸೇವೆ ಆರಂಭಿಸುವ ನಿಟ್ಟಿನಲ್ಲಿ 700 ಕೋಟಿ ಮೊತ್ತದ ಯೋಜನೆಗೆ ಸಹಿ ಹಾಕಿದ್ದರು. ಈ ಎಲೆಕ್ಟ್ರಿಕ್ ಬಸ್​ಗಳಲ್ಲಿ ಸಿಸಿಟಿವಿ, ಜಿಪಿಎಸ್ ಹಾಗೂ ತುರ್ತು ಸಂದರ್ಭದಲ್ಲಿ ಸಹಾಯವಾಗುವ ವಿಶೇಷ ಪ್ಯಾನಿಕ್ ಬಟನ್ ಹೊಂದಿದೆ. ಜೊತೆಗೆ, ಏರ್ ಸಸ್ಪೆನ್ಶನ್ ಮುಂತಾದವುಗಳನ್ನು ಸಹ ಒಳಗೊಂಡಿವೆ.