ದೆಹಲಿ: ಪಾರ್ಲಿಮೆಂಟ್ ಕಟ್ಟಡ ನಿರ್ಮಾಣದ ಪೂಜಾ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮಠದ ಅರ್ಚಕರನ್ನು ಪೂಜಾ ವಿಧಿವಿಧಾನಕ್ಕಾಗಿ ಕರೆಸಲಾಗಿದ್ದು, ಶೃಂಗೇರಿ ಮಠದಿಂದ ಶಂಕು ಸ್ಥಾಪನೆಗೆ ಶಂಕು ಮತ್ತು ನವರತ್ನ ಪೀಠ ತರಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಲಿದ್ದಾರೆ.
ಶೃಂಗೇರಿ ಅರ್ಚಕರಾದ ಶಿವಕುಮಾರ್ ಶರ್ಮಾ, ಲಕ್ಷ್ಮಿ ನಾರಾಯಣ್ ಸೋಮಯಾಜಿ, ಗಣೇಶ್ ಸೋಮಯಾಜಿ, ನಾಗರಾಜ್ ಅಡಿಗರು ಹಾಗೂ ದೆಹಲಿ ಶಾಖಾ ಮಠದ ಇಬ್ಬರು ಪುರೋಹಿತರು ಶಿಲಾನ್ಯಾಸದ ಪೂಜೆ ಕೈಗೊಂಡಿದ್ದಾರೆ. ಒಟ್ಟು 6 ಜನ ಪುರೋಹಿತರಿಂದ ಪೂಜಾ ವಿಧಿವಿಧಾನ ಹಮ್ಮಿಕೊಳ್ಳಲಾಗಿದೆ.
1.30ಕ್ಕೆ ಸರ್ವಧರ್ಮ ಪ್ರಾರ್ಥನೆ ನಡೆಯಲಿದ್ದು, 2.15ಕ್ಕೆ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಒಟ್ಟು 978 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಪಾರ್ಲಿಮೆಂಟ್ ಕಟ್ಟಡ ನಿರ್ಮಾಣಗೊಳ್ಳಲಿದೆ. 1,224 ಸಂಸದರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ನೂತನ ಸಂಸತ್ ಭವನದ ಕಟ್ಟಡವನ್ನು 2022ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಒಳಗೆ ಪೂರ್ಣಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾತನಾಡಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರ ರಾಜ್ಯ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಸ್ವಾಗತಿಸಲಿದ್ದಾರೆ. ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಕ್ರಮ ವಂದನಾರ್ಪಣೆ ಮಾಡಲಿದ್ದಾರೆ.
ಡಿಡಿ ಮತ್ತು ಲೋಕಸಭಾ ಟಿವಿ ವತಿಯಿಂದ ಕಾರ್ಯಕ್ರಮ ನೇರ ಪ್ರಸಾರಗೊಳ್ಳಲಿದೆ.