ನವದೆಹಲಿ: ಮುಂದಿನ ಎರಡು ವಾರಗಳಲ್ಲಿ ರೋಗ ಪ್ರತಿರೋಧಕ ಶಕ್ತಿಯ ಕುರಿತ ಸರ್ಕಾರದ ಉನ್ನತ ಸಲಹಾ ಗುಂಪಿನ ಸಭೆ ನಡೆಯಲಿದ್ದು, ಅದರಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವುದೂ ಸೇರಿದಂತೆ ಹಲವು ಅಂಶಗಳು ಚರ್ಚೆಯಾಗಲಿವೆ. ಕೊಮೊರ್ಬಿಡಿಟೀಸ್ ಹೊಂದಿರುವ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವು ಜನವರಿಯಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಮಾರ್ಚ್ ವೇಳೆಗೆ, ಇತರ ಎಲ್ಲ ಮಕ್ಕಳು ಲಸಿಕೆಗೆ ಅರ್ಹರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ವಯಸ್ಕರಿಗೆ ಕೊವಿಡ್ 19 ಬೂಸ್ಟರ್ ಲಸಿಕೆ ನೀಡಲು ರೋಗ ನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI), ಸಮಗ್ರ ಯೋಜನೆಯನ್ನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಾಂಕ್ರಾಮಿಕ ಪರಿಸ್ಥಿತಿಯನ್ನು ಅವಲಂಬಿಸಿ ಹಲವಾರು ರಾಜ್ಯಗಳಲ್ಲಿ ಶಾಲೆಗಳು ತರಗತಿಗಳನ್ನು ಪ್ರಾರಂಭಿಸಿವೆ. ಈಗ ಮಕ್ಕಳಿಗೆ ಲಸಿಕೆ ಆದ್ಯತೆಯಾಗಿ ನೋಡಲಾಗುತ್ತಿದ್ದು, ಆ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಭಾರತದಲ್ಲಿ ಕೊರೊನಾದಿಂದ ಸಾಕಷ್ಟು ಜನರು ಬಲಿಯಾದ ಬೆನ್ನಲ್ಲೇ, ಮಕ್ಕಳಿಗೆ ರಕ್ಷಣೆ ನೀಡುವ ಕುರಿತು ಚರ್ಚೆಯಾಗುತ್ತಿದೆ. ಕಾರಣ, ವಯಸ್ಕರಿಗೆ ಈಗಾಗಲೇ ಕನಿಷ್ಠ ಒಂದು ಅಥವಾ ಸಂಪೂರ್ಣ ಲಸಿಕೆ ನೀಡಲಾಗಿದೆ. ಆದರೆ ಮಕ್ಕಳಿಗೆ ಇನ್ನೂ ಲಸಿಕೆ ನೀಡಲು ಪ್ರಾರಂಭಿಸಿಲ್ಲ. ಆದ್ದರಿಂದ ಸರ್ಕಾರ ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿದೆ.
ವಯಸ್ಕರಿಗೆ ಬೂಸ್ಟರ್ ಡೋಸ್‌ಗಳನ್ನು ನೀಡುವ ಕುರಿತು ಈಗಾಗಲೇ ಚರ್ಚೆಯಾಗುತ್ತಿದ್ದು, ಮುಂದಿನ ಸಭೆಯಲ್ಲೂ ಚರ್ಚೆಯಾಗಲಿದೆ ಎನ್ನಲಾಗಿದೆ. ಕೆಲವು ರಾಷ್ಟ್ರಗಳು ಸೋಂಕು ವಿರುದ್ಧದ ಹೋರಾಟದಲ್ಲಿ ಬೂಸ್ಟರ್ ಡೋಸ್ ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿವೆ. ಈ ಕುರಿತು ಪ್ರಪಂಚದಾದ್ಯಂತ ನೀತಿ ನಿರೂಪಕರು ಮತ್ತು ವಿಜ್ಞಾನಿಗಳ ನಡುವೆ ಚರ್ಚೆ ನಡೆಯುತ್ತಿದೆ. ಅಮೇರಿಕಾದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅನೇಕ ವಿಜ್ಞಾನಿಗಳು ಬೂಸ್ಟರ್ ಡೋಸ್ ಅಗತ್ಯತೆಯನ್ನು ಪ್ರಶ್ನಿಸಿದ್ದು, ಮೂಲ ಲಸಿಕೆ ರೋಗ ಪ್ರತಿರೋಧಕ್ಕೆ ಸಮರ್ಥವಾಗಿರುವಾಗ, ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಲಸಿಕೆ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದರೆ ಮಾತ್ರ ಪರಿಗಣನೆ ಮಾಡಲಾಗುತ್ತದೆ ಎಂದು ಹೇಳಿತ್ತು. ಇತ್ತೀಚೆಗೆ ಐಸಿಎಂಆರ್ ಮಹಾ ನಿರ್ದೇಶಕ ಡಾ.ಬಲರಾಮ್ ಭಾರ್ಗವ್ ಮಾತನಾಡಿ, ಕೊರೋನ ವೈರಸ್ ಸಾಂಕ್ರಾಮಿಕದಿಂದ (ಕೋವಿಡ್ -19) ಮತ್ತಷ್ಟು ರಕ್ಷಣೆಗಾಗಿ ಬೂಸ್ಟರ್ ಡೋಸ್ ಲಸಿಕೆ ಅಗತ್ಯವಿದೆ ಎಂದು ಸಾಧಿಸಲು ಇದುವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದರು. ಜೊತೆಗೆ ಅವರು ಸದ್ಯದ ಆದ್ಯತೆ ಎಲ್ಲಾ ವಯಸ್ಕರಿಗೆ ಎರಡೂ ಡೋಸ್ ಲಸಿಕೆ ನೀಡುವುದು ಎಂದಿದ್ದರು. ಈ ಮೂಲಕ ಬೂಸ್ಟರ್ ಡೋಸ್ ಲಸಿಕೆ ಕುರಿತ ಚರ್ಚೆಗೆ ಅವರು ವಿರಾಮ ಹಾಕಿದ್ದಾರೆ. ಆದ್ದರಿಂದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಸಭೆಯಲ್ಲಿ ಮಕ್ಕಳಿಗೆ ಲಸಿಕೆ ಹಾಗೂ ಲಸಿಕೆ ನೀಡುವಿಕೆಯ ವೇಗದ ಕುರಿತಂತೆ ಮಹತ್ತರವಾಗಿ ಚರ್ಚೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ಬೂಸ್ಟರ್ ಡೋಸ್ ಲಸಿಕೆ ಅಗತ್ಯವಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ : ಐಸಿಎಂಆರ್ ಮುಖ್ಯಸ್ಥರ ಹೇಳಿಕೆ
Published On - 12:14 pm, Tue, 23 November 21